ವಿ. ಸೋಮಣ್ಣ ತುಮಕೂರು ಕ್ಷೇತ್ರದ ಸಂಸದರು. ಪ್ರಧಾನಿ ನರೇಂದ್ರ ಮೋದಿ 3.0 ಸಂಪುಟದಲ್ಲಿ ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವರು. ಆದರೆ ಸೋಮಣ್ಣ ಚುನಾವಣಾ ನಿವೃತ್ತಿ ಪಡೆಯುತ್ತಾರೆಯೇ?.
ಗುರುವಾರ ವಿ.ಸೋಮಣ್ಣ ಮೈಸೂರಿನ ಶ್ರೀಕ್ಷೇತ್ರ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ, ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದುಕೊಂಡರು. ಬಳಿಕ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.
ವಿ.ಸೋಮಣ್ಣ ಮಾತನಾಡಿ, “ತುಮಕೂರಿನಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಹೀಗಾಗಿ ಅಲ್ಲಿ ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದೇನೆ” ಎಂದು ಸ್ಪಷ್ಟಪಡಿಸಿದರು.
“ಇನ್ನು ಬೇರೆ ಕಡೆ ಸ್ಪರ್ಧಿಸುವ ಬಗ್ಗೆ ಚಿಂತನೆ ನಡೆಸಿದ್ದೇನೆ. ಆದರೆ ಎಲ್ಲಿ ಸ್ಪರ್ಧಿಸಬೇಕು? ಎನ್ನುವುದು ಇನ್ನೂ ನಿರ್ಧಾರ ಆಗಿಲ್ಲ. ದೇವರ ಆಶೀರ್ವಾದ, ದೇವರ ಇಚ್ಛೆ ಏನಿದೆ? ಎಂಬುದು ಗೊತ್ತಿಲ್ಲ” ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಂಪ್ರಾದಾಯ ತಿಳಿಸಿ: ಮೈಸೂರು ದಸರಾ 2025ರ ಉದ್ಘಾಟನೆ ವಿವಾದದ ಬಗ್ಗೆ ಮಾತನಾಡಿದ ವಿ.ಸೋಮಣ್ಣ, “ನಂಬಿಕೆಗೆ, ಭಕ್ತಿಗೆ, ಇತಿಹಾಸಕ್ಕೆ ಮತ್ತೊಂದು ಹೆಸರು ಚಾಮುಂಡಿ ಬೆಟ್ಟ. ಮೊದಲು ದಸರಾ ಉದ್ಘಾಟಕರಿಗೆ ತಾಯಿ ಚಾಮುಂಡಿ ಇತಿಹಾಸ ಉತ್ಸವ, ಆರಾಧನೆ, ಸಂಪ್ರದಾಯ ಮನವರಿಕೆ ಮಾಡಿಕೊಡಬೇಕು. ಸಂಪ್ರದಾಯ ಅರಿತು ಅವರು ತಮ್ಮ ಕಾರ್ಯ ಮಾಡಿದರೆ ಅಭ್ಯಂತರವಿಲ್ಲ” ಎಂದರು.
“ದಸರಾ ಉದ್ಘಾಟಕರು ಈ ಸ್ಥಾನಕ್ಕೆ ಅರ್ಹರೋ ಅಥವಾ ಇಲ್ಲವೋ ಎಂಬ ಚರ್ಚೆ ಮಾಡುವುದಿಲ್ಲ. ನಮ್ಮ ಸಂಪ್ರದಾಯಕ್ಕೆ ಧಕ್ಕೆ ಆಗದಂತೆ ಉದ್ಘಾಟಕರು ನಡೆದುಕೊಳ್ಳಬೇಕು. ಸರ್ಕಾರ ಯಾರನ್ನು ತೃಪ್ತಿಪಡಿಸಲು ಉದ್ಘಾಟಕರನ್ನು ಆಯ್ಕೆ ಮಾಡಿಕೊಂಡಿದ್ದೆಯೋ ಗೊತ್ತಿಲ್ಲ. ಧಾರ್ಮಿಕ ಕೆಲಸದ ವಿಚಾರದಲ್ಲಿ ಸರ್ಕಾರ ಟೇಕ್ ಇಟ್ ಫ್ಹಾರ್ ಗ್ರ್ಯಾಟೆಂಡ್ ಅಂದು ಕೊಳ್ಳಬೇಡಿ. ಉದ್ಘಾಟಕರಿಗೆ, ಸರಕಾರಕ್ಕೆ ಚಾಮುಂಡಿ ಬೆಟ್ಟದ ಶಿಷ್ಟಾಚಾರ, ಸಂಪ್ರದಾಯ ಪಾಲಿಸುವ ಬುದ್ದಿ ಕೊಡಲಿ” ಎಂದು ಹೇಳಿದರು.
ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ: ವಿ. ಸೋಮಣ್ಣ ಕರ್ನಾಟಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. “ಸರ್ಕಾರ ಕ್ಷುಲ್ಲಕ ರಾಜಕಾರಣ ಬಿಟ್ಟು ಜನರ ನೋವಿಗೆ ಸ್ಪಂದಿಸಬೇಕು. ಅತಿವೃಷ್ಟಿಯಿಂದ ಎಲ್ಲೆಡೆ ನಷ್ಟವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಅಧಿಕಾರಿಗಳನ್ನು ತಕ್ಷಣ ಜಿಲ್ಲೆಗೆ ಕಳುಹಿಸಿ ಸಮಸ್ಯೆ ಬಗೆಹರಿಸಬೇಕು” ಎಂದು ಆಗ್ರಹಿಸಿದರು.
“ಅಭಿವೃದ್ಧಿ ವಿಚಾರದಲ್ಲಿ ರಾಜ್ಯ ಸರಕಾರಕ್ಕೆ ಇಚ್ಛಾಶಕ್ತಿ ಕೊರತೆ ಇದೆ. ಎಷ್ಟು ದಿನ ಆಡಳಿತ ಮಾಡುತ್ತೀರೋ ಗೊತ್ತಿಲ್ಲ. ಜನರ ಕೆಲಸ ಮಾಡಬೇಕು. ಕೇಂದ್ರ ಯೋಜನೆಗಳ ಅನಷ್ಠಾನಕ್ಕೆ ನಮ್ಮ ಜೊತೆ ಕೂತು ಚರ್ಚೆ ಮಾಡಬೇಕು. ನಾನೇ ಸಭೆ ಆಯೊಜಿಸುತ್ತೇನೆ” ಎಂದರು.
“ಈಗಾಗಲೇ ಅನೇಕ ರೈಲ್ವೆ ಯೋಜನೆ ಹಾಗೂ ಇತರೆ ವಿಷಯಕ್ಕೆ ಸಂಬಂಧಿಸಿದಂತೆ ಯಾವ ಯಾವ ಕೆಲಸವಾಗಬೇಕು ಎನ್ನುವ ಬಗ್ಗೆ ಮನವಿ ಸಲ್ಲಿಸುವಂತೆ ಸಿಎಂ ಹಾಗೂ ಸಚಿವರಿಗೆ ನಾನೇ ಹೇಳಿದ್ಧೇನೆ. ಅವರಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ” ಎಂದು ಆರೋಪಿಸಿದರು.
“ಸುಳ್ಳನ್ನು ಸಾವಿರ ಬಾರಿ ಹೇಳಿದರು ಅದು ಸುಳ್ಳೆ ಎಂಬುದು ಧರ್ಮಸ್ಥಳ ವಿಚಾರದಲ್ಲಿ ಸಾಬೀತಾಗಿದೆ. ಬಾಲಂಗೋಂಚಿಗಳು, ಎಡಪಂಥೀಯರ ಮಾತಿಗೆ ಸರಕಾರ ಇನ್ನು ಮುಂದೆ ಬಲಿ ಆಗಬಾರದು. ಸರ್ಕಾರ ತಾನು ಮಾಡಿದ ತಪ್ಪನ್ನು ಈಗಲಾದರು ಅರಿತು ಕೊಳ್ಳಬೇಕು” ಎಂದು ವಿ.ಸೋಮಣ್ಣ ಧರ್ಮಸ್ಥಳ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದರು.