ತುಮಕೂರು ಜಿಲ್ಲೆಯ ತಿಪಟೂರು ನಗರದ ಐಬಿ ಸರ್ಕಲ್‍ನಿಂದ ಗೋವಿನಪುರ ಬಡಾವಣೆ ಮಾರ್ಗವಾಗಿ ಹಾಲ್ಕುರಿಕೆ-ಹುಳಿಯಾರಿಗೆ ಸಂಪರ್ಕ ಕಲ್ಪಿಸುವ ಈ ಪ್ರಮುಖ ರಸ್ತೆಯು ಓಡಾಡಲು ಆಗದಷ್ಟು ಹದಗೆಟ್ಟಿದ್ದು ವಾಹನ ಸವಾರರು ಹಾಗೂ ಸಾರ್ವಜನಿಕರರಿಗೆ ಓಡಾಟ ನರಕ ಯಾತನೆಯಾಗಿದ್ದು, ನಗರಸಭೆ ಹಾಗೂ ಲೋಕೋಪಯೋಗಿ ಇಲಾಖೆಗಳು ಶೀಘ್ರ ದುರಸ್ತಿ ಮಾಡಿಕೊಡಬೇಕೆಂದು ಈ ಭಾಗದ ಸಾರ್ವಜನಿಕರು ಹಾಗೂ ವಾಹನ ಸವಾರರು ಒತ್ತಾಯಿಸಿದ್ದಾರೆ.
ನಗರದ ಎನ್.ಹೆಚ್. 206ರಲ್ಲಿ ಐ.ಬಿ. ಸರ್ಕಲ್‍ನಿಂದ ಪ್ರಾರಂಭವಾಗುವ ಈ ರಸ್ತೆಯು ನಗರದಿಂದ ಹುಳಿಯಾರು-ಚಿತ್ರದುರ್ಗ-ಬಳ್ಳಾರಿ ಸೇರಿದಂತೆ ನಮ್ಮ ತಾಲ್ಲೂಕಿನ ಹಲವಾರು ಕಡೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದ್ದು ದಿನನಿತ್ಯ ನೂರಾರು ಬಸ್ಸು, ಲಾರಿ, ಸಾವಿರಾರು ದ್ವಿಚಕ್ರ ವಾಹನಗಳು ಸಂಚರಿಸುವುದರಿಂದ ಯಾವಾಗಲೂ ವಾಹನ ಸಂಚಾರ ದಟ್ಟವಾಗಿರುತ್ತದೆ. ಈ ರಸ್ತೆಯ ಡಾಂಬರ್ ಸಂಪೂರ್ಣ ಹಾಳಾಗಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿದ್ದು ಮಣ್ಣಿನ ರಸ್ತೆಯಂತಾಗಿ ನಗರದ ಒಳಗಡೆಯೆ ಅನೇಕ ಕಡೆಗಳಲ್ಲಿ ಆಳವಾದ ಕಂದಕಗಳುಂಟಾಗಿ ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ಅಪಘಾತವಾಗಿ ಕೈಕಾಲು, ಪ್ರಾಣವನ್ನೂ ಕಳೆದುಕೊಳ್ಳುವಂತಹ ಪರಿಸ್ಥಿತಿ ಉಂಟಾಗಿದೆ.
ಇದೇ ರಸ್ತೆಯಲ್ಲಿ ಇತ್ತೀಚೆಗೆ ಓರ್ವ ವಿದ್ಯಾರ್ಥಿನಿ ಲಾರಿಯೊಂದಕ್ಕೆ ಸಿಕ್ಕಿ ಪ್ರಾಣ ಕಳೆದುಕೊಂಡಿರುವ ನೆನಪು ಇನ್ನೂ ಹಸಿಯಾಗಿಯೆ ಇದೆ. ಮಳೆ ಬಂದರೆ ಕೆಸರು ಗದ್ದೆಯಾಗುವ, ಬಿಸಿಲು ಬಂದಾಗ ಧೂಳುಮಯವಾಗುವ ನಿತ್ಯ ಈ ರಸ್ತೆಯಲ್ಲಿ ವಾಹನ ಸವಾರರು, ಸಾರ್ವಜನಿಕರು, ರಸ್ತೆಯ ಅಕ್ಕಪಕ್ಕದ ಮನೆಯವರು ಯಮ ಯಾತನೆ ಅನುಭವಿಸುವಂತಾಗಿದ್ದು, ಇನ್ನಿಲ್ಲದ ಸರ್ಕಸ್ ಮಾಡಿಕೊಂಡೆ ವಾಹನ ಚಲಾಯಿಸುವಂತ ಪರಿಸ್ಥಿತಿ ತಲೆದೋರಿದೆ.
ಇದೇ ರಸ್ತೆಯಲ್ಲಿ ಮೂರ್ನಾಲ್ಕು ಶಾಲೆಗಳಿದ್ದು ಮಕ್ಕಳಿಗೂ ತೊಂದರೆಯಾಗಿದೆ. ಮಳೆ ಬಂದರಂತೂ ಗುಂಡಿಗಳು ಕಾಣಿಸದಂತಾಗಿ ಒಂದಲ್ಲೊಂದು ಅವಘಡಗಳು ಸಂಭವಿಸುತ್ತಿವೆ. ಈ ಬಗ್ಗೆ ಹಲವು ಬಾರಿ ಸಂಬಂದಪಟ್ಟ ಅಧಿಕಾರಿಗಳಿಗೆ ಮನವಿಮಾಡಿದರು ಪ್ರಯೋಜನವಾಗಿಲ್ಲದೆ ಸಾರ್ವಜನಿಕರು ತಾಲೂಕು ಆಡಳಿತ, ನಗರಸಭೆ ಮತ್ತು ಪ್ರಮುಖವಾಗಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದರೂ ಯಾರೂ ಎಚ್ಚೆತ್ತುಕೊಳ್ಳುತ್ತಿಲ್ಲ.
ಈ ರಸ್ತೆಯಲ್ಲಿ ನಿತ್ಯ ಒಂದಲ್ಲೊಂದು ಅಪಘಾತ, ಅವಘಡಗಳು ಸಂಭವಿಸುತ್ತಿದ್ದರೂ, ನಗರಸಭೆ, ಪೊಲೀಸ್ ಇಲಾಖೆ ಮಾತ್ರ ನಮಗೂ ಇದಕ್ಕೂ ಸಂಬಂಧವಿಲ್ಲವೆಂಬಂತೆ ಜಾಣ ಕುರುಡು ತೋರಿಸುತ್ತಿರುವುದು ಪ್ರಯಾಣಿಕರ, ಪಾದಚಾರಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಾದರೂ ಲೋಕೋಪಯೋಗಿ ಇಲಾಖೆ, ನಗರಸಭೆ ಇತ್ತ ಗಮನಹರಿಸಿ ಕೂಡಲೆ ರಸ್ತೆ ರಿಪೇರಿ ಹಾಗೂ ಫುಟ್‍ಪಾತ್ ತೆರವು ಕಾರ್ಯ ಮಾಡುವುದೋ ಕಾಯ್ದು ನೋಡಬೇಕಿದೆ.
ಈ ರಸ್ತೆಯಲ್ಲಿ ದಿನಕ್ಕೆ ಸಾವಿರಾರು ವಾಹನಗಳು, ಸಾರ್ವಜನಿಕರು ಪ್ರಯಾಣಿಸುತ್ತಾರೆ. ಇದು ಸಿಂಗಲ್ ರಸ್ತೆಯಾಗಿದ್ದು ಇದರಲ್ಲಿ ದ್ವಿಮುಖ ಸಂಚಾರವಿದೆ. ನೂರಾರು ಬಸ್‍ಗಳು, ಲಾರಿಗಳು, ಟ್ಯಾಂಕರ್‍ಗಳು ಸೇರಿದಂತೆ ಬಾರೀ ವಾಹನಗಳು, ಸಾವಿರಾರು ದ್ವಿಚಕ್ರ ವಾಹನಗಳು, ಲಘು ವಾಹನಗಳು ಓಡಾಡುತ್ತವೆ. ರಸ್ತೆ ಸಂಪೂರ್ಣ ಗುಂಡಿಗೊಟರುಗಳಿಂದ ಕೂಡಿದ್ದು ಅಪಘಾತಕ್ಕೆ ಆಹ್ವಾನ ನೀಡಿದೆ. ಪಾದಚಾರಿಗಳಂತೂ ನಡೆದುಕೊಂಡು ಹೋಗಲೂ ಜೀವ ಕೈಲಿಡಿದು ಓಡಾಬೇಕಿದ್ದು ಕೂಡಲೇ ರಸ್ತೆಯನ್ನು ಅಗಲೀಕರಣಗೊಳಿಸಿ ಶಾಶ್ವತ ರಿಪೇರಿ ಮಾಡಬೇಕಿದೆ ಎಂದು ರೇಣು, ತಿಪಟೂರು ಹೇಳಿದ್ದಾರೆ.