“ಗ್ರೇಟರ್ ಬೆಂಗಳೂರು ಇದು ಯಾರಿಗೆ, ಏತಕ್ಕಾಗಿ?” ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಕರ್ನಾಟಕ ಸರ್ಕಾರವನ್ನು ಪ್ರಶ್ನಿಸಿದರು.
ಬಿಡದಿ ಸ್ಮಾರ್ಟ್ ಸಿಟಿ ಯೋಜನೆ ವಿರೋಧಿಸಿ ರಾಮನಗರ ಕೆಎಸ್‍ಆರ್‍ಟಿಸಿಬಸ್ ನಿಲ್ದಾಣದ ಬಳಿ ಐಜೂರು ಸರ್ಕಲ್‍ನಲ್ಲಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಜಮಾಯಿಸಿದ ಹೋರಾಟಗಾರರು ಹಾಗೂ ಕಾರ್ಯಕರ್ತರು ಮತ್ತು ವಿವಿಧ ಕನ್ನಡ ಪರ ಸಂಘಟನೆಯ ಮುಖಂಡರು ಬಿಡದಿ ಸ್ಮಾರ್ಟ್ ಸಿಟಿ ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, “ಪ್ರಜಾಪ್ರಭುತ್ವ ಉಳಿಸಿ ದಿನಾಚರಣೆಯನ್ನು ಕರ್ನಾಟಕ ರಾಜ್ಯ ಸೇರಿದಂತೆ ವಿಶ್ವದಾದ್ಯಂತ ಆಚರಣೆ ಮಾಡಿದ್ದಾರೆ. ಮಹಾತ್ಮಾಗಾಂಧೀಜಿರವರು ದೇಶದ ಪ್ರಜಾತಂತ್ರದ ವ್ಯವಸ್ಥೆಗಾಗಿ, ಸ್ವಾತಂತ್ರ ನಡೆಸಿದ ಹೋರಾಟಗಳು, ಡಾ.ಅಂಬೇಡ್ಕರ್ ನೀಡಿದ ಸಂವಿಧಾನ, ಜವಾಹರಲಾಲ್ ನೆಹರು, ವಲ್ಲಭಾಯ್ ಪಟೇಲ್ ಮುಂತಾದ ಮಹನೀಯರು ಕೊಟ್ಟಂತಹ ಪ್ರಜಾಪ್ರಭುತ್ವ ಇಂದು ಹಳಿ ತಪ್ಪಿದೆ” ಆಕ್ರೋಶ ವ್ಯಕ್ತಪಡಿಸಿದರು.
“ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಹೋಗಿ ಜಾತಿ ಪ್ರಭುತ್ವ ಅಸ್ಥಿತ್ವ ಬಂದಿದೆ. ಕೇಂದ್ರ ಸರ್ಕಾರವು ಈಗ ಜಾತಿ ಸಮೀಕ್ಷೆ ಮಾಡಲು ಹೊರಟಿದೆ. ಕರ್ನಾಟಕ ಭಾಗವಾರು ಪ್ರಾಂತ್ಯ ಎಂಬುದನ್ನು ಮರೆತು, ರಾಜ್ಯ ಸರ್ಕಾರವು ಜಾತಿ ಗಣತಿಗೆ ಮುಂದಾಗಿದೆ. ಪ್ರಜಾಪ್ರಭುತ್ವ ಎಂದರೆ ಸರ್ವಾಧಿಕಾರ, ವಂಶಾಡಳಿತ ಆಡಳಿತವಾಗಿದ್ದು, ಬಿಹಾರ, ತಮಿಳುನಾಡು, ಜಾರ್ಖಂಡ್ ರಾಜ್ಯಗಳಲ್ಲಿ ವಂಶಾಡಳಿತ ಆಡಳಿತ ಪದ್ಧತಿ ಜಾರಿಯಲ್ಲಿದೆ” ಎಂದರು.
ಗ್ರೇಟರ್ ಬೆಂಗಳೂರು: “ಗ್ರೇಟರ್ ಬೆಂಗಳೂರು ಇವರಿಗೆ ಕನ್ನಡದಲ್ಲಿ ಒಂದು ಹೊಸ ಹೆಸರು ಸಿಕ್ಕಿಲ್ಲ. ಗ್ರೇಟರ್ ಬೆಂಗಳೂರು ಇದು ಯಾರಿಗೆ? ಏತಕ್ಕಾಗಿ? ಮಾಡುತ್ತಿದ್ದಾರೆ. ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗುಜರಾತಿಗಳು, ತಮಿಳರು, ತೆಲುಗರು, ಮಾರವಾಡಿಗಳು, ಸಿಂಧಿಗಳು ತುಂಬಿದ್ದು, ಕನ್ನಡಿಗರು ಭಿಕ್ಷೆ ಬೇಡುವ ಸ್ಥಿತಿ ತಲುಪಿದ್ದಾರೆ” ಎಂದು ಹೇಳಿದರು.
“ಬೆಂಗಳೂರು ನಗರವನ್ನು 4-5 ಭಾಗ ಮಾಡಿ ಅನ್ಯ ಭಾಷಿಕರಾದ ತಮಿಳರು, ತೆಲುಗಿನವರು, ಕೇರಳದವರು ಮೇಯರ್ ಮಾಡಬೇಕು ಎಂಬ ಉದ್ದೇಶವಿದೆ. ಬಿಡದಿ ಭಾಗ ಸೇರಿದಂತೆ ರಾಜ್ಯದ ಯಾವುದೇ ಭಾಗದಲ್ಲಿ ರೈತರ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ನಮ್ಮ ಸಂಘಟನೆ ತೀವ್ರವಾಗಿ ವಿರೋಧ ವ್ಯಕ್ತಪಡಿಸುತ್ತದೆ. ರೈತರು ಬೆಂಗಳೂರು ಸುತ್ತಮುತ್ತ ಹಾಗೂ ರಾಜ್ಯದ ಯಾವ ಮೂಲೆಯಲ್ಲಿಯೂ ಯಾವುದೇ ಕಾರಣಕ್ಕೂ ಭೂಮಿಯನ್ನು ಬಿಟ್ಟುಕೊಡಬೇಡಿ. ಕ್ರಾಂತಿಯಾದರೂ ಸರಿಯೇ ರೈತರಿಗೆ ನನ್ನ ಸಂಪೂರ್ಣ ಬೆಂಬಲವಿದೆ. ಕೊಟ್ಟರೆ ಕನ್ನಡಿಗರಿಗೆ, ಕನ್ನಡಕ್ಕೆ, ರೈತರಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಗ್ರೇಟರ್ ಬೆಂಗಳೂರು ವಿರುದ್ಧ ಹಂತ ಹಂತವಾಗಿ ತೀವ್ರ ಚಳುವಳಿ ಹಮ್ಮಿಕೊಳ್ಳಲಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಕರ್ನಾಟಕ ಸರ್ಕಾರ ರಾಮನಗರದ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಾವಣೆ ಮಾಡಿದೆ. ದೇಶದ ಮೊದಲ ಎಐ ಸಿಟಿಯನ್ನು ಬಿಡದಿಯಲ್ಲಿ ಮಾಡಲು ಹೊರಟಿದ್ದು, ಭೂ ಸ್ವಾಧೀನಕ್ಕೆ ಚಾಲನೆ ನೀಡಿದೆ. ಈ ಯೋಜನೆಗೆ ವಿರೋಧ ವ್ಯಕ್ತವಾಗುತ್ತಿದೆ.