ರಾಮನಗರ, ಚನ್ನಪಟ್ಟಣಕ್ಕೂ ಇನ್ನು ಮುಂದೆ ಬಿಎಂಟಿಸಿ ಬಸ್‌ಗಳು ಸಂಚಾರ ನಡೆಸಲಿವೆ. ರಾಮನಗರದ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಾವಣೆ ಮಾಡಿರುವ ಕರ್ನಾಟಕ ಸರ್ಕಾರ ಬಿಡದಿಯಲ್ಲಿ ಸ್ಮಾರ್ಟ್ ಸಿಟಿ ನಿರ್ಮಾಣ ಮಾಡಲು ತಯಾರಿಯನ್ನು ಆರಂಭಿಸಿದೆ. ರಾಮನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ನಗರ ಸಾರಿಗೆ ಬಸ್ ಸಂಚಾರ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಈ ಕುರಿತು ಮಾಹಿತಿ ನೀಡಿದ್ದಾರೆ.
“ಬೆಂಗಳೂರು ಮಹಾನಗರ ಪಾಲಿಕೆ ಗಡಿಯಿಂದ 40 ಕಿಲೋ ಮೀಟರ್ ವ್ಯಾಪ್ತಿವರೆಗೆ ಬಿಎಂಟಿಸಿ ಬಸ್‌ಗಳ ಸಂಚಾರ ವಿಸ್ತರಿಸಲು ತೀರ್ಮಾನಿಸಲಾಗಿದ್ದು, ಇದರಿಂದ ಬೆಂಗಳೂರು ದಕ್ಷಿಣ ಜಿಲ್ಲೆಗೂ ಬಿಎಂಟಿಸಿ ಬಸ್‌ಗಳ ಸೇವೆ ಸಿಗಲಿದೆ” ಎಂದು ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
“ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಬೇಡಿಕೆಯಂತೆ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ, ಚನ್ನಪಟ್ಟಣ, ಕನಕಪುರ, ಹಾರೋಹಳ್ಳಿ ಹಾಗೂ ಮಾಗಡಿ ತಾಲೂಕುಗಳಲ್ಲಿಯೂ ಬಿಎಂಟಿಸಿ ಬಸ್‌ಗಳು ಸಂಚರಿಸಲಿವೆ. ಈ ಮೊದಲು ಕಾರ್ಪೊರೇಷನ್ ವ್ಯಾಪ್ತಿಯಿಂದ 25 ಕಿ.ಮೀ.ವರೆಗೆ ಮಾತ್ರ ಬಿಎಂಟಿಸಿ ಬಸ್‌ಗಳು ಸಂಚರಿಸುತ್ತಿದ್ದವು. ಈಗ ಕಾರ್ಪೊರೇಷನ್ ಗಡಿಯಿಂದ 40 ಕಿ.ಮೀ. ವ್ಯಾಪ್ತಿವರೆಗೆ ವಿಸ್ತರಿಸಲು ತೀರ್ಮಾನಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆಲ ತಾಲೂಕುಗಳಲ್ಲಿ ಬಿಎಂಟಿಸಿ ಬಸ್‌ಗಳು ಸಂಚರಿಸುತ್ತಿದ್ದವು. ಈಗ ಬೆಂಗಳೂರು ದಕ್ಷಿಣ ಜಿಲ್ಲೆಗೂ ಸೇವೆ ವಿಸ್ತರಣೆಯಾಗಿದೆ” ಎಂದು ತಿಳಿಸಿದರು.
“ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಅಧಿವೇಶನದಲ್ಲಿ ಜಿಲ್ಲಾ ಕೇಂದ್ರ ರಾಮನಗರಕ್ಕೆ ನಗರ ಸಾರಿಗೆ ಬಸ್ ಬೇಕೆಂದು ಪ್ರಶ್ನೆ ಹಾಕಿ ಮನವಿ ಮಾಡಿದ್ದರು. ಅದರಂತೆ ನಗರ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಿದ್ದೇವೆ. ಈ ಹಿಂದೆಯೇ ಸುರೇಶ್ ಸಂಸದರಾಗಿದ್ದಾಗ ನಾನು ಇಂಧನ ಇಲಾಖೆ ಸಚಿವನಾಗಿದ್ದೆ. ಆಗಲೂ ಜೆನರ್ಮ್ ಯೋಜನೆ ಅಡಿಯಲ್ಲಿ ನಗರ ಸಾರಿಗೆ ಬಸ್ ಹಾಕಿಸಿದ್ದೇವು, ಅದು ಯಶಸ್ವಿಯಾಗಲಿಲ್ಲ. ಈಗ ನಗರವೂ ಬೆಳೆದಿದ್ದು, ಶಾಲಾ – ಕಾಲೇಜುಗಳು ತೆರೆದಿವೆ. ಜನಸಂಖ್ಯೆ ಹೆಚ್ಚಾಗಿರುವ ಕಾರಣ ನಗರ ಸಾರಿಗೆ ಬಸ್‌ಗಳು ಸದುಪಯೋಗವಾಗುವ ವಿಶ್ವಾಸವಿದೆ” ಎಂದು ಸಚಿವರು ಹೇಳಿದರು.
ಬಸ್ ನಿಲ್ದಾಣಕ್ಕೆ ಜಾಗ: “ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಬಸ್ ನಿಲ್ದಾಣಕ್ಕೆ ಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಮಾಜಿ ಸಂಸದ ಡಿ.ಕೆ.ಸುರೇಶ್ ಮತ್ತು ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ನಿಲ್ದಾಣ ನಿರ್ಮಾಣಕ್ಕೆ ಸೂಕ್ತ ಜಾಗ ಒದಗಿಸಿಕೊಟ್ಟಲ್ಲಿ ಅದನ್ನು ನಿರ್ಮಿಸಿಕೊಡುತ್ತೇವೆ. ಅಲ್ಲದೆ ಈಗಿರುವ ಬಸ್ ನಿಲ್ದಾಣವನ್ನು ನವೀಕರಣಗೊಳಿಸಲು ಕ್ರಮ ವಹಿಸಲಾಗುವುದು” ಎಂದು ಸಚಿವರು ವಿವರಿಸಿದರು.
“ಬಿಎಂಟಿಸಿನಲ್ಲಿ ಸಾಕಷ್ಟು ಬಸ್‌ಗಳಿವೆ. ಆದರೆ, ಕೆಎಸ್‌ಆರ್‌ಟಿಸಿನಲ್ಲಿ ಬಸ್ ಸಂಖ್ಯೆ ಕಡಿಮೆ ಇತ್ತು. 2019ರಿಂದ 2023ರವರೆಗೆ ನಾನಾ ಕಾರಣಗಳಿಂದ ಬಸ್‌ಗಳನ್ನು ಖರೀದಿ ಮಾಡಿರಲಿಲ್ಲ. ನಾನು ಸಾರಿಗೆ ಸಚಿವನಾದ ಮೇಲೆ 600 ಎಲೆಕ್ಟ್ರಿಕ್ ಬಸ್ ಸೇರಿದಂತೆ ಒಟ್ಟು 5800 ಬಸ್ ಖರೀದಿ ಮಾಡಿದ ಮೇಲೆ ಸ್ವಲ್ಪ ಮಟ್ಟಿಗೆ ಸುಧಾರಣೆಯಾಗಿದೆ” ಎಂದರು.