SSLC; ಅನುತೀರ್ಣ ವಿದ್ಯಾರ್ಥಿಗಳಿಗೆ ಮರು ದಾಖಲಾತಿ, ನೀರಸ ಪ್ರತಿಕ್ರಿಯೆ

0
43

ವಿಶೇಷ ವರದಿ ಪಿ. ವೈ ರವಿಂದ್ರ ಹೇರ್ಳೆ

SSLC ಮೂರು ಪರೀಕ್ಷೆಯಲ್ಲಿಯು ಅನುತೀರ್ಣರಾದ ವಿದ್ಯಾರ್ಥಿಗಳಿಗೆ ಮರು ದಾಖಲಾತಿ ಕಲ್ಪಿಸಿಕೊಡುವ ಸರ್ಕಾರದ ನಿರ್ಧಾರಕ್ಕೆ ರಾಜ್ಯಾದ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮರು ದಾಖಲಾತಿಗೆ ಅನುತೀರ್ಣರಾದ ವಿದ್ಯಾರ್ಥಿಗಳೇ ಮನಸ್ಸು ಮಾಡುತ್ತಿಲ್ಲ. ಮಕ್ಕಳ ಭವಿಷ್ಯ ಹಾಗೂ ವಿದ್ಯಾಭ್ಯಾಸವನ್ನು ಗಮನದಲ್ಲಿಟ್ಟುಕೊಂಡ ರಾಜ್ಯ ಸರ್ಕಾರ ಕಳೆದ ವರ್ಷ ಮೂರು ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಫೇಲ್ ಆದ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಪುನಃ ಮರು ದಾಖಲಾತಿಗೆ ಅವಕಾಶ ಮಾಡಿಕೊಟ್ಟಿತ್ತು.

ರಾಜ್ಯ ಸರ್ಕಾರ ಹಾಗೂ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಪರೀಕ್ಷಾ ಸುಧಾರಣಾ ದೃಷ್ಟಿಯಿಂದ ಪ್ರತಿ ಪ್ರರೀಕ್ಷಾ ಕೇಂದ್ರದ ಪ್ರತಿ ಕೊಠಡಿಯಲ್ಲಿ ಸಿಸಿಕ್ಯಾಮೆರಾ ಅಳವಡಿಸಿತ್ತು. ಇದಾದ ಬಳಿಕ ಮತ್ತೊಂದು ಸುಧಾರಣೆ ಸಾಲಿಗೆ ವಿದ್ಯಾರ್ಥಿಯು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾನು ಪಡೆದ ಅಂಕ ತೃಪ್ತಿಯಾಗದಿದ್ದರೆ, ಮತೊಮ್ಮೆ ಅದೇ ವರ್ಷ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿತ್ತು. ಜತೆಗೆ ಅನುತೀರ್ಣರಾದ ವಿದ್ಯಾರ್ಥಿಯು ಸಹ ಮತ್ತೊಮ್ಮೆ ಪರೀಕ್ಷೆ ಬರೆಯಲು
ಅವಕಾಶ ಮಾಡಿಕೊಟ್ಟಿತ್ತು.

ಇದೇ ರೀತಿ ಆ ಶೈಕ್ಷಣಿಕ ವರ್ಷದ ಮೂರು ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಅನುತೀರ್ಣರಾದ ವಿದ್ಯಾರ್ಥಿಗಳಿಗೆ ಸರ್ಕಾರಿ ಶಾಲೆಯಲ್ಲಿ ಮತ್ತೊಮ್ಮೆ ಮರು ದಾಖಲಾತಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿತ್ತು. ಈ ಯೋಜನೆಯನ್ನು ಕಳೆದ ವರ್ಷದಿಂದ ಜಾರಿಗೆ ತರಲಾಗಿತ್ತು. ಆದರೆ, ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಗೆ ವಿದ್ಯಾರ್ಥಿಗಳಿಗೆ ಆಸಕ್ತಿ ಇಲ್ಲದಿರುವುದು ಕಂಡು ಬರುತ್ತಿದೆ. ಹಾಗಾಗಿ ಬೆಂಗಳೂರು ದಕ್ಷಿಣ ಜಿಲ್ಲೆ ಸೇರಿದಂತೆ ರಾಜ್ಯದ ಇತರೆ ಜಿಲ್ಲೆಗಳಲ್ಲಿಯು ಈ ಮರುದಾಖಲಾತಿ ವ್ಯವಸ್ಥೆಗೆ ನೀರಸ ಪತ್ರಿಕ್ರಿಯೆ ವ್ಯಕ್ತವಾಗುತ್ತಿದೆ.

ಬೆರಳೆಣಿಕೆ ಮಂದಿ: ಮರು ದಾಖಲಾತಿ ವ್ಯವಸ್ಥೆಯು ನಗರ ಹಾಗೂ ಗ್ರಾಮಾಂತರ ಈ ಎರಡು ಪ್ರದೇಶದಲ್ಲಿಯೂ ವಿದ್ಯಾರ್ಥಿಗಳು ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುತ್ತಿಲ್ಲ. ಹಾಗಾಗಿ ಕೆಲವು ಕೆಲವು ಬೆರಳೆಣಿಕೆಯ ವಿದ್ಯಾರ್ಥಿಗಳು ಶಾಲೆಗೆ ಮರು ದಾಖಲಾಗುತ್ತಿರುವುದು ಕಂಡು ಬರುತ್ತಿದೆ. ಕಳೆದ ಸಾಲು ಮೊದಲ ವರ್ಷವಾಗಿದರಿಂದ ರಾಜ್ಯದಲ್ಲಿ ಸಾಕಷ್ಟು ಬೇಡಿಕೆ ಕಂಡುಬಂದಿತ್ತಾದರೂ ಪೂರ್ಣಪ್ರಮಾಣದಲ್ಲಿ ಮರು ದಾಖಲಾತಿ ಸದ್ಬಳಕೆಯಾಗಿರಲಿಲ್ಲ. ಈ ಬಾರಿಯು ತಾತ್ಸರ ಮನೋಭಾವ ವಿದ್ಯಾರ್ಥಿ ಸಮುದಾಯದಲ್ಲಿಯೇ ಕಂಡು ಬರುತ್ತಿದೆ. ರಾಜ್ಯದ ಕೆಲವು ಜಿಲ್ಲೆಯಲ್ಲಿ ಶೂನ್ಯ ದಾಖಲಾತಿಯಾದರೆ, ಕೆಲವು ಜಿಲ್ಲೆಯಲ್ಲಿ ಒಂದಂಕಿ ದಾಟಿಲ್ಲ ಎಂಬುದೇ ಗಮನಾರ್ಹ.

ಒಂದೊಮ್ಮೆ ವಿದ್ಯಾರ್ಥಿಯೊಬ್ಬ ಮೂರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿಯು ಅನುತೀರ್ಣರಾಗಿ, ಮತ್ತೊಮ್ಮೆ ಅದೇ ಶಾಲೆಯಲ್ಲಿ ಮರು ದಾಖಲಾತಿ ಬಯಸಿದರೆ. ಅಂತಹ ವಿದ್ಯಾರ್ಥಿಗೆ ಉಚಿತ ದಾಖಲಾತಿ, ಪಠ್ಯಪುಸ್ತಕ, ಮಧ್ಯಾಹ್ನದ ಬಿಸಿಯೂಟ ಸೇರಿದಂತೆ ಎಲ್ಲಾ ಸೌಲವತ್ತು ಲಭಿಸಲಿದೆ. ಇಷ್ಟೆಲ್ಲಾ ಸೌಲಭ್ಯ ನೀಡಿದರು ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿಲ್ಲ.

ಯಾಕೆ ಹಿಂದೇಟು?: ಓದಿದ ಶಾಲೆಯಲ್ಲಿಯೇ ಮತ್ತೊಮ್ಮೆ ಮರು ದಾಖಲಾತಿಯಾಗುವುದರಿಂದ ಹಿರಿಯ ಹಾಗೂ ಕಿರಿಯ ವಿದ್ಯಾರ್ಥಿ ಎಂಬ ಅಂತರ ಏರ್ಪಡಲಿದೆ. ಮೂರು ಪರೀಕ್ಷೆ ಮುಗಿಯುವುದರಲ್ಲಿ ಹೊಸ ಶೈಕ್ಷಣಿಕ ವರ್ಷ ಆರಂಭವಾಗಿ ಎರಡು ತಿಂಗಳು ಕಳೆದಿರುತ್ತದೆ. ಮರು ದಾಖಲಾತಿಯಾದರು ವಿದ್ಯಾರ್ಥಿಗಳಿಗೆ ಮೊದಲಿನಿಂದ ಬೋಧನೆ ಮಾಡುವುದು ಸಾಧ್ಯವಾಗದ ಕೆಲಸ. ಜೊತೆಗೆ ಶಾಲೆಯ ವಾತಾವರಣ, ಅನುತೀರ್ಣರಾದ ಎಂಬ ಪಟ್ಟ ಇದು ವಿದ್ಯಾರ್ಥಿಗಳಿಗೆ ಮರು ದಾಖಲಾತಿಗೆ ಕಷ್ಟವಾಗುತ್ತಿದೆ. ಜೊತೆಗೆ, ಕೆಲವರು ಓದಿನಲ್ಲಿ ಆಸಕ್ತಿ ಕಡಿಮೆಯಾಗುವುದು ಸಹ ಯೋಜನೆಗೆ ಹಿಂದೇಟಿಗೆ ಕಾರಣವಾಗಿದೆ.

ರಾಮನಗರದ ಚಿತ್ರಣ

  • ಒಟ್ಟು ಪರೀಕ್ಷೆಗೆ ಹಾಜರಾದವರು-12186
  • ಒಟ್ಟು ಉತ್ತೀರ್ಣರಾದವರು-9735
  • ಅನುತ್ತೀರ್ಣರಾದವರು-2451

ಈ ಕುರಿತು ರಾಮನಗರ ಬಿಇಒ ಸೋಮಲಿಂಗಯ್ಯ ಮಾತನಾಡಿ, “ಈ ಬಾರಿ ರಾಮನಗರ ತಾಲೂಕಿನಲ್ಲಿ ಒಟ್ಟು 2 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಮೂರು ಪರೀಕ್ಷೆ ಮುಕ್ತಾಯವಾದ ಬಳಿಕ ಮರು ದಾಖಲಾತಿ ಪಡೆದುಕೊಂಡಿದ್ದಾರೆ. ಅಂತಹ ಮಕ್ಕಳಿಗೆ ಸರ್ಕಾರದ ವತಿಯಿಂದ ನೀಡಲಾಗುವ ಎಲ್ಲಾ ಸೌಲಭ್ಯ ಒದಗಿಸಲಾಗುತ್ತಿದೆ. ಜೊತೆಗೆ ಬೋಧಿಸಲಾಗುತ್ತಿದೆ” ಎಂದು ಹೇಳಿದ್ದಾರೆ.

Previous articleಅಂಕಣ ಬರಹ: ಅಕ್ಕ ಕೇಳವ್ವ ಈ ಅಬಲೆಯರ ಕೂಗನ್ನು
Next articleನಮ್ಮ ಮೆಟ್ರೋ ಮೂಲಕ ಹೃದಯ ಸಾಗಾಟ: ಎರಡನೇ ಯಶಸ್ವಿ ಅಂಗಾಂಗ ವರ್ಗಾವಣೆ

LEAVE A REPLY

Please enter your comment!
Please enter your name here