ರಾಮನಗರ ಜಿಲ್ಲೆಯ ಜನರ ಕನಸಾಗಿದ್ದ ಮಳಿಗೆ ಕಾರ್ಯಾರಂಭ

0
79

ವಿಶೇಷ ವರದಿ ಪಿ.ವೈ ರವಿಂದ್ರ ಹೇರ್ಳೆ

ರಾಮನಗರ (ಬೆಂಗಳೂರು ದಕ್ಷಿಣ) ಜಿಲ್ಲೆಯ ಜನರ ಬಹುದಿನಗಳ ಕನಸಾಗಿದ್ದ ಲಿಡ್‍ಕರ್ ಮಳಿಗೆ ಸದ್ದಿಲ್ಲದೆ ಕಾರ್ಯಾರಂಭ ಮಾಡಿದೆ. ಗ್ರಾಹಕರು ಸಹ ಶೋ ರೂಂಗೆ ಭೇಟಿ ನೀಡಿ ತಮ್ಮ ಇಷ್ಟದ ಚರ್ಮದ ಉತ್ಪನ್ನಗಳನ್ನು ಖರೀದಿಯಲ್ಲಿ ತೊಡಗಿದ್ದಾರೆ. ಚರ್ಮೋದ್ಯಮ ಹಾಗೂ ಅದರ ಉತ್ಪನ್ನಗಳಿಗೆ ಬ್ರಾಂಡ್ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕರ್ನಾಟಕ ಚರ್ಮೋದ್ಯಮ ಅಭಿವೃದ್ಧಿ ನಿಗಮ ನಿಯಮಿತ(ಲಿಡ್‍ಕರ್) ಜಿಲ್ಲೆಯಲ್ಲಿ ಪ್ರಥಮ ಶೋ ರೂಮ್ ತೆರೆದಿದೆ. ಜೊತೆಗೆ ಕಾರ್ಯಾರಂಭ ಮಾಡಿರುವ ಮಳಿಗೆಯು ರಾಜ್ಯದ 18ನೇ ಔಟ್‍ಲೆಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಜಿಲ್ಲೆಯ ಮೊದಲ ಶೋರೂಂ ಕೆಲಸ ಆರಂಭಿಸಿ 4 ತಿಂಗಳು ಕಳೆಯಬೇಕಿತ್ತು. ಆದರೆ ಕೆಲವು ತಾಂತ್ರಿಕ ಕಾರ್ಯಗಳು ಮತ್ತು ಕಚೇರಿ ನಿರ್ಮಾಣ ಕೆಲಸ ತಡವಾಗಿತ್ತು. ಇದರಿಂದಾಗಿ ಮಳಿಗೆ ಗ್ರಾಹಕರಿಗೆ ಮುಕ್ತವಾಗಲು ಸಮಯ ತೆಗೆದುಕೊಂಡಿದೆ. ಸೆ. 11ರಿಂದ ಮಳಿಗೆ ಕಾರ್ಯ ನಿರ್ವಹಿಸುತ್ತಿದೆ. ಗಾಂಧಿ ತತ್ವ ಆಧಾರವಾಗಿಟ್ಟುಕೊಂಡು ಆಡಂಬರ ಉದ್ಘಾಟನೆ ಇಲ್ಲದೆ, ಸರಳ ಕಾರ್ಯಕ್ರಮದ ಮುಖಾಂತರ ಮಳಿಗೆ ತೆರೆಯಲಾಗಿದೆ. ಇದು ಸಹ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಲಿಡ್‍ಕರ್ ಮಳಿಗೆ ಏಲ್ಲಿದೆ?: ರಾಮನಗರದ ಕಂದಾಯ ಭವನದ ನೆಲ ಅಂತಸ್ತಿನಲ್ಲಿ ಈ ಸರ್ಕಾರದ ಮಳಿಗೆ ತೆರೆಯಲು ಜಿಲ್ಲಾಡಳಿತ ಅನುಮತಿ ನೀಡಿತ್ತು. ಇದೇ ಸ್ಥಳದಲ್ಲಿ ಲಿಡ್‍ಕರ್ ಮಳಿಗೆ ಹಾಗೂ ಇದರ ಜಿಲ್ಲಾ ಮಟ್ಟದ ಸಕಚೇರಿ ತೆರೆಯಲಾಗಿದೆ. ಪಾರಂಪರಿಕವಾಗಿ ಚರ್ಮ ಉತ್ಪನ್ನ ಹಾಗೂ ಅದರ ಉದ್ಯಮಿಗೆ ಮೌಲ್ಯ ಕೊಡಿಸುವಲ್ಲಿ ಹಾಗೂ ಖಾಸಗಿ ಉತ್ಪನ್ನಗಳಿಗಿಂತ ಗ್ರಾಹಕರಿಗೆ ಕಡಿಮೆ ದರ ಹಾಗೂ ಗುಣಮಟ್ಟದ ಚರ್ಮದಿಂದ ನಿರ್ಮಿತ ವಸ್ತುಗಳನ್ನು ಮಾರಾಟ ಮಾಡಲು ಸರ್ಕಾರ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಈ ಲಿಡ್‍ಕರ್ ಮಳಿಗೆಗಳನ್ನು ತೆರೆದು ಮಾರಾಟ ಹಾಗೂ ಪ್ರೋತ್ಸಾಹ ನೀಡುತ್ತಿದೆ. ಸರ್ಕಾರದ ಒಡೆತನವಾದರೂ, ಕಂಪನಿ ಕಾಯ್ದೆಯಡಿ ಈ ಲಿಡ್‍ಕರ್ ಕಾರ್ಯ ನಿರ್ವಹಿಸುತ್ತಿವೆ.

ಜಿಲ್ಲೆಯ ಪ್ರಥಮ ಲಿಡ್‍ಕರ್ ಮಳಿಗೆಯು ಕಂದಾಯ ಭವನದಲ್ಲಿ ನಿರ್ಮಿಸಲಾಗಿದೆ. ಈ ಸ್ಥಳದಲ್ಲಿ ಉಪನೋಂದಾಣಿಧಿಕಾರಿ ಕಚೇರಿ, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಗ್ರಂಥಾಲಯ, ಕಾರ್ಮಿಕ ಇಲಾಖೆ ಸೇರಿದಂತೆ ಪೊಲೀಸ್ ವಿಂಗ್‍ಗಳು ಸಹ ಕಾರ್ಯನಿರ್ವಹಿಸುತ್ತಿವೆ. ಹಾಗಾಗಿ ನಿತ್ಯ ಇಲಿಗೆ ಸಾಕಷ್ಟು ಮಂದಿ ತಮ್ಮ ಕೆಲಸಕ್ಕಾಗಿ ಕಚೇರಿಗೆ ಆಗಮಿಸುತ್ತಾರೆ. ಹಾಗಾಗಿ ಸರ್ಕಾರದ ಚರ್ಮ ಉತ್ಪನ್ನದ ಮಳಿಗೆ ಕುರಿತು ಸಾಕಷ್ಟು ಪ್ರಚಾರ ದೊರೆಯಲಿದೆ. ಹಾಗೂ ಉತ್ಪನ್ನಗಳು ಬಹುಬೇಗ ಮಾರಾಟವಾಗಲಿದೆ ಎಂಬುದು ಅಧಿಕಾರಿಗಳ ಅಂದಾಜು.

ಜಿಲ್ಲೆಯ ಪ್ರಥಮ ಲಿಡ್‍ಕರ್ ಮಳಿಗೆ ಕಾರ್ಯಾರಂಭ ಮಾಡಿದೆ. ದೊಡ್ಡ ಕಾರ್ಯಕ್ರಮ ಆಯೋಜಿಸದೆ ಗಾಂಧಿ ತತ್ವದ ಆಧಾರದ ಮೇಲೆ ಸರಳವಾಗಿ ಮಳಿಗೆ ಶುಭಾರಂಭ ಮಾಡಿದೆ ಎಂದು ಡಾ.ವಸುಂಧರಾ, ವ್ಯವಸ್ಥಾಪಕ ನಿರ್ದೇಶಕಿ, ಕರ್ನಾಟಕ ಚರ್ಮೋದ್ಯಮ ಅಭಿವೃದ್ಧಿ ನಿಗಮ ನಿಯಮಿತ ಹೇಳಿದ್ದಾರೆ.

ಲಿಡ್‍ಕರ್‌ನಲ್ಲಿ ಮಾರಾಟಕ್ಕೆ ಲಭ್ಯವಿರುವ ವಸ್ತುಗಳು ಬೇರೆ ಖಾಸಗಿ ಕಂಪನಿಗಳ ಉತ್ಪನ್ನಕ್ಕೆ ಹೋಲಿಸಿದರೆ ಶೇ. 50ರಷ್ಟು ಹಣ ಕಡಿಮೆ ಇದೆ. ಬೇರೆ ಕಂಪನಿಯ ಲೇದರ್ ಚಪ್ಪಲಿ (ಪಾದರಕ್ಷೆ) 3ಸಾವಿರ ಬೆಲೆಗೆ ಮಾರಾಟವಾದರೆ ಇಲ್ಲಿ ಅದರ ಅರ್ಧದಷ್ಟು ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ಲಿಡ್‍ಕರ್ ಮಳಿಗೆಯಲ್ಲಿ ಚರ್ಮ ಉತ್ಪನ್ನಗಳನ್ನು ಖರೀದಿಸಿದರೆ, ತೆರಿಗೆ ರೂಪದಲ್ಲಿ ಮತ್ತೆ ಸರ್ಕಾರಕ್ಕೆ ಹಣ ವಾಪಸ್ಸು ಹೋಗಲಿದೆ.

ಲಿಡ್‍ಕರ್ ಮಳಿಗೆಯಲ್ಲಿ ಚಪ್ಪಲಿ, ಶೂಗಳು ಅತೀ ಹೆಚ್ಚು ಮಾರಾಟವಾಗಲಿದೆ. ಇದರ ಜತೆಗೆ, ಬೆಲ್ಟ್, ಪುರುಷರು ಹಾಗೂ ಮಹಿಳೆಯ ಪರ್ಸ್, ಲೇದರ್ ಜಾಕೇಟ್ ಸೇರಿದಂತೆ ಹಲವು ಉತ್ಪನ್ನಗಳು ಲಭ್ಯವಿದೆ. ಲಿಡ್‍ಕರ್ ಮಳಿಗೆಯಲ್ಲಿ ಪ್ರಾರಂಭಿಕ ಬೆಲೆ 350 ರೂ. ಆಗಿದ್ದು ಗರಿಷ್ಠ 4 ರಿಂದ 5 ಸಾವಿರ ರೂ. ಉತ್ಪನ್ನಗಳ ಮಾರಾಟವಾಗುತ್ತಿದೆ. ಪುರುಷ ಪರ್ಸ್(ವ್ಯಾಲೆಟ್) 350 ರಿಂದಆರಂಭವಾಗಲಿದ್ದು, ಲ್ಯಾಪ್‍ಟಾಪ್ ಬ್ಯಾಗ್ ಗರಿಷ್ಠ 4 ಸಾವಿರ ತನಕ ಮಾರಾಟವಾಗುತ್ತಿದೆ. ಗ್ರಾಹಕರಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಲಿಡ್‍ಕರ್‍ಉತ್ಪನ್ನಗಳ ಖರೀದಿಗೆ ಜಿಲ್ಲೆಯ ಗ್ರಾಹಕರು ಮುಂದಾಗಿದ್ದಾರೆ. ದಿನ ಕಳೆದಂತೆ ಸಾಕಷ್ಟು ಮಂದಿ ಸಾರ್ವಜನಿಕರು ಆಗಮಿಸಿ ಮಳಿಗೆಯಲ್ಲಿನ ಉತ್ಪನ್ನಗಳ ಖರೀದಿಸುತ್ತಿದ್ದಾರೆ. ಮಳಿಗೆ ಉದ್ಘಾಟನೆಯಾದ ಸುದ್ದಿ ಒಬ್ಬರಿಂದ ಒಬ್ಬರಿಗೆ ತಲುಪುತ್ತಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

“ಲಿಡ್‍ಕರ್ ಮಳಿಗೆಗಳು ಉತ್ಪನ್ನಗಳಿಂದಲೇ ಹೆಸರುವಾಸಿಯಾಗಿದೆ. ಜಿಲ್ಲೆಯಲ್ಲಿ ಮಳಿಗೆ ತೆರೆದಿರುವುದು ಸಾಕಷ್ಟು ಮಂದಿಗೆ ಅನುಕೂಲವಾಗಲಿದೆ. ಗುಣಮಟ್ಟದ ಚರ್ಮದ ಉತ್ಪನ್ನಗಳು ಗ್ರಾಹಕರಿಗೆ ಕಡಿಮೆ ಬೆಲೆಗೆ ಸಿಗುತ್ತದೆ” ಎಂದು ಗ್ರಾಹಕ ಎಂ. ಗಿರೀಶ್ ರಾವ್ ಹೇಳಿದ್ದಾರೆ.

Previous articleSL Bhyrappa: ಇನ್ನು ಬರವಣಿಗೆ ಸಾಕು ಎಂದು 8 ವರ್ಷದ ಹಿಂದೆ ಪೆನ್ನಿಟ್ಟರು
Next articleಪ್ರವಾಸೋದ್ಯಮ ಪಟ್ಟಣ ದಾಂಡೇಲಿ: ಸ್ವಚ್ಛತೆಗಾಗಿ ವಿಶೇಷ ಅಭಿಯಾನ ಆರಂಭ

LEAVE A REPLY

Please enter your comment!
Please enter your name here