ಡಿಕೆ ಶಿವಕುಮಾರ್ ಅವರ ಮಹತ್ವಾಕಾಂಕ್ಷೆಯ ಬಿಡದಿ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್ ಯೋಜನೆಗೆ ಜೆಡಿಎಸ್ ಪಕ್ಷದಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಸರ್ಕಾರದ ಕ್ರಮವನ್ನು ಖಂಡಿಸಿ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಬೃಹತ್ ಪ್ರತಿಭಟನೆಗೆ ಕರೆ ನೀಡಿದ್ದಾರೆ.
ರೈತರೊಂದಿಗೆ ಕೈಜೋಡಿಸಿ, ಈ ಯೋಜನೆ ಕೈಬಿಡುವವರೆಗೂ ಹೋರಾಟ ಮುಂದುವರಿಸುವುದಾಗಿ ಘೋಷಿಸಿದ್ದಾರೆ. ಬಿಡದಿ ಭಾಗದ ಸಾವಿರಾರು ರೈತರು ತಮ್ಮ ಜಮೀನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಸರ್ಕಾರವು ಸ್ಥಳೀಯ ರೈತರೊಂದಿಗೆ ಯಾವುದೇ ಸಭೆ ನಡೆಸದೆ, ರೈತ ಅಹವಾಲುಗಳನ್ನು ಕೇಳದೆ ತರಾತುರಿಯಲ್ಲಿ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿರುವುದು ನಿಖಿಲ್ ಕುಮಾರಸ್ವಾಮಿ ಆಕ್ರೋಶಕ್ಕೆ ಕಾರಣವಾಗಿದೆ.
“ರೈತ ಬೀದಿಗೆ ಬರ್ತಾನೆ ಅದಕ್ಕೆ ಸಾಮಾಜಿಕ ಸಮೀಕ್ಷೆ ಮಾಡಿದ್ದೀರಾ? ಜಿಲ್ಲೆಯಲ್ಲಿ ನಾಲ್ಕು ಕಾಂಗ್ರೆಸ್ ಶಾಸಕರು ಇದ್ದಾರೆ. 10 ಹಳ್ಳಿಗಳ ರೈತರ ಜೊತೆ ಮಾತನಾಡಿದ್ದೀರಾ? ಇದು ಪ್ರಜಾಪ್ರಭುತ್ವ ವಿರೋಧಿ” ಎಂದು ನಿಖಿಲ್ ವಾಗ್ದಾಳಿ ನಡೆಸಿದರು.
ಪ್ರತಿಭಟನೆ ಮತ್ತು ಬೇಡಿಕೆಗಳು: ಭಾನುವಾರ (ಸೆಪ್ಟೆಂಬರ್ 28) ರಾಮನಗರ ಜಿಲ್ಲೆಯ ಬೈರಮಂಗಲ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ. ಈ ಪ್ರತಿಭಟನೆಯಲ್ಲಿ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗುವ ನಿರೀಕ್ಷೆಯಿದೆ.
ಜೆಡಿಎಸ್‌ನ ಪ್ರಮುಖ ಆಗ್ರಹಗಳು ಹೀಗಿವೆ:
ಭೂಸ್ವಾಧೀನ ಪ್ರಕ್ರಿಯೆ ನಿಲುಗಡೆ: ಶೇ. 80 ರಷ್ಟು ರೈತರು ವಿರೋಧಿಸುತ್ತಿರುವುದರಿಂದ, ಕೂಡಲೇ ಭೂಸ್ವಾಧೀನ ಪ್ರಕ್ರಿಯೆಯನ್ನು ನಿಲ್ಲಿಸಬೇಕು.
ದೌರ್ಜನ್ಯಕ್ಕೊಳಗಾದ ರೈತರಿಗೆ ನ್ಯಾಯ: ಜಿಬಿಐಟಿ ಅಧಿಕಾರಿಗಳು ಮತ್ತು ಪೊಲೀಸರು ರೈತರ ಮೇಲೆ ನಡೆಸುತ್ತಿರುವ ದೌರ್ಜನ್ಯವನ್ನು ನಿಲ್ಲಿಸಿ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು.
ಯೋಜನಾ ವರದಿ ಸಾರ್ವಜನಿಕಗೊಳಿಸಬೇಕು: ಬಾಸ್ಟನ್ ಕನ್ಸಲ್ಟಿಂಗ್ ಗ್ರೂಪ್ ಸಲ್ಲಿಸಿರುವ ಯೋಜನಾ ವರದಿಯನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಬೇಕು.
ಪರ್ಯಾಯ ಭೂಮಿ ಬಳಕೆ: ಕೈಗಾರಿಕಾ ಉದ್ದೇಶಕ್ಕಾಗಿ ಬೆಂಗಳೂರು ಸುತ್ತಮುತ್ತ ಲಭ್ಯವಿರುವ ಭೂಮಿಯಲ್ಲಿ ಈ ಯೋಜನೆಯನ್ನು ಜಾರಿಗೊಳಿಸಬೇಕು. ಸರ್ಕಾರವು ಈ ಕುರಿತು ಶ್ವೇತಪತ್ರ ಹೊರಡಿಸಬೇಕು.
ಮುಂದಿನ ಹೋರಾಟದ ರೂಪುರೇಷೆ: ಬಿಡದಿ ರೈತರ ಹೋರಾಟಕ್ಕೆ ಜೆಡಿಎಸ್ ಸಂಪೂರ್ಣ ಬೆಂಬಲ ನೀಡಿದ್ದು, ಈ ಯೋಜನೆ ಕೈಬಿಡುವವರೆಗೂ ತಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. “ಇದು ಯಾವ ಹಂತಕ್ಕೆ ಹೋಗಲಿ. ನಾವು ರೈತರ ಬೆನ್ನೆಲುಬು ಆಗಿ ಇರುತ್ತೇವೆ” ಎಂದು ಅವರು ಘೋಷಿಸಿದ್ದಾರೆ. ಒಟ್ಟಾರೆ, ಬಿಡದಿ ಜಿಬಿಐಟಿ ಯೋಜನೆಯು ರಾಜ್ಯದಲ್ಲಿ ಹೊಸ ರಾಜಕೀಯ ತಿಕ್ಕಾಟಕ್ಕೆ ಕಾರಣವಾಗಿದ್ದು, ಜೆಡಿಎಸ್ ಮತ್ತು ಸರ್ಕಾರದ ನಡುವೆ ತೀವ್ರ ಹೋರಾಟ ನಡೆಯುವ ಲಕ್ಷಣಗಳು ಕಂಡುಬರುತ್ತಿವೆ.
ಡಿಕೆಶಿ ರಿಯಾಕ್ಷನ್: ಯೋಜನೆಯನ್ನು ದೇವೇಗೌಡರ ಪುತ್ರನೇ ರೂಪಿಸಿದ್ದು, ಈಗ ವಿರೋಧಿಸಿ ಹೋರಾಟಕ್ಕೆ ಇಳಿದಿರುವುದು ಏಕೆ ಎಂದು ಡಿಕೆಶಿ ಪ್ರಶ್ನಿಸಿದ್ದಾರೆ. ರೈತರ ಧರಣಿಗೆ ದೇವೇಗೌಡರು ಭಾನುವಾರ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಡಿಕೆಶಿ ಈ ಹೇಳಿಕೆ ನೀಡಿದ್ದಾರೆ. ಯೋಜನೆಗೆ ಆರಂಭದಲ್ಲಿ ಸಹಕಾರ ನೀಡಿದ ದೇವೇಗೌಡರು, ಈಗ ಡಿನೋಟಿಫಿಕೇಶನ್‌ಗೆ ಕೇಳುವುದು ಸರಿಯಲ್ಲ. ಯಡಿಯೂರಪ್ಪ ಸರ್ಕಾರವಿದ್ದಾಗಲೂ ಈ ವಿಚಾರ ಪ್ರಸ್ತಾಪಿಸಬಹುದಿತ್ತು ಎಂದು ಡಿಕೆಶಿ ವ್ಯಂಗ್ಯವಾಡಿದ್ದಾರೆ.
“ಗೌಡರ ಮಾತು ಕೇಳಲು ನಾನು ಸಿದ್ಧನಿಲ್ಲ. ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುತ್ತೇವೆ. ರೈತರ ಸಹಕಾರವಿದೆ, ಯೋಜನೆ ನಿಲ್ಲುವುದಿಲ್ಲ” ಎಂದು ಡಿಕೆಶಿ ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ರಾಜಕೀಯ ಮಾಡುತ್ತಿವೆ ಎಂದು ಆರೋಪಿಸಿದರು, ಯೋಜನಾ ಪ್ರದೇಶದಲ್ಲಿ ಟೊಯೊಟಾ ಸೇರಿದಂತೆ ಹಲವರು ಜಮೀನು ಕೇಳಿದ್ದಾರೆ. ವಿರೋಧ ಎಷ್ಟೇ ಬಂದರೂ ಯೋಜನೆ ಜಾರಿಗೊಳಿಸುವುದಾಗಿ ಡಿಕೆಶಿ ಪುನರುಚ್ಚರಿಸಿದ್ದಾರೆ.