ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ: ಗೈರಾದರೆ ಯಾವ ಕ್ರಮ?

0
26

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2025 ಕರ್ನಾಟಕದಲ್ಲಿ ನಡೆಯಲಿದೆ. ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7ರವರೆಗೆ ಬೆಂಗಳೂರು ದಕ್ಷಿಣ ಜಿಲ್ಲೆಯ ಮನೆ- ಮನೆಗಳಲ್ಲಿ ನಡೆಸಲಾಗುವ ಸಮೀಕ್ಷಾ ಕಾರ್ಯವನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಸಂಬಂಧಿಸಿದ ಎಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯದ ಕುರಿತು ಚರ್ಚಿಸಲು ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯಲ್ಲಿ 3,62,000 ಮನೆಗಳಿದ್ದು, ಈ ಮನೆಗಳಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯವನ್ನು 15 ದಿನಗಳಲ್ಲಿ ಪೂರ್ಣಗೊಳಿಸಬೇಕು, ಅದಕ್ಕಾಗಿ 150 ಮನೆಗಳನ್ನು ಒಂದು ಬ್ಲಾಕ್ ಆಗಿ ರಚಿಸಲಾಗಿದೆ.

ಈ ಬ್ಲಾಕ್ ಗಳಲ್ಲಿ ಒಬ್ಬ ಗಣತಿದಾರರನ್ನು (ಎನ್ಯೂಮರೆಟರ್) ನಿಯೋಜಿಸಲಾಗುವುದು, ಅವರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಬಗ್ಗೆ ಪ್ರತಿ ಮನೆಗೆ ತೆರಳಿ 60 ಪ್ರಶ್ನೆಗಳನ್ನು ಆಪ್ ಮೂಲಕ ಕೇಳುವರು, ಜಿಲ್ಲೆಯಲ್ಲಿ ಅಂದಾಜು 2,500 ಗಣತಿದಾರರನ್ನು ಈ ಕಾರ್ಯಕ್ಕೆ ನಿಯೋಜಿಸಲಾಗುವುದು, ಈ ಗಣತಿದಾರರ ಮೇಲೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಾರೆ ಎಂದರು.

ಜಿಲ್ಲೆಯ ಸಂಬಂಧಿಸಿದ ತಾಲ್ಲೂಕುಗಳಲ್ಲಿ ಆಯಾ ತಹಶೀಲ್ದಾರರು ಹಾಗೂ ತಾಲ್ಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳು ಪ್ರತಿದಿನವೂ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಪ್ರಗತಿಯನ್ನು ಪರಿಶೀಲಿಸಬೇಕು. ಈ ಕಾರ್ಯದಲ್ಲಿ ಯಾವುದೇ ವಿವಾದಗಳು, ಸಮಸ್ಯೆಗಳು ಎದುರಾಗಬಾರದು, ಜಿಲ್ಲೆಯಲ್ಲಿ ಕಾಡಂಚಿನ ಪ್ರದೇಶಗಳು ಅಥವಾ ಸಂಪರ್ಕದಿಂದ ದೂರ ಇರುವ ಪ್ರದೇಶಗಳಲ್ಲೇನಾದರೂ ಜನರು ವಾಸವಿದ್ದಲ್ಲೀ ಆ ಮನೆಗಳಲ್ಲಿಯೂ ಕೂಡ ಸರ್ವೇ ನಡೆಸಬೇಕು, ಯಾರೂ ಕೂಡ ಈ ಸಮೀಕ್ಷೆಯಿಂದ ಹೊರಗೂಳಿಯಬಾರದು ಎಂದು ಅವರು ಹೇಳಿದರು.

ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಅಧಿಕಾರಿ ಬಿಲಾಲ್ ಮಾತನಾಡಿ, “ಈ ಸಮೀಕ್ಷಾ ಕಾರ್ಯಕ್ಕೆ ಜಿಲ್ಲೆಯ ಮಾಸ್ಟರ್ ಟ್ರೈನರ್ಗಳಿಗೆ ತರಬೇತಿ ನೀಡಲು 5 ಜನ ತರಬೇತುದಾರರನ್ನು ರಾಜ್ಯಮಟ್ಟದ ತರಬೇತಿಗೆ ನಿಯೋಜಿಸಲಾಗಿದೆ. ಅವರು 65 ಜನ ಮಾಸ್ಟರ್ ಟ್ರೈನರ್‌ಗಳಿಗೆ ತರಬೇತಿ ನೀಡುವರು, ನಂತರದಲ್ಲಿ 2,500 ಗಣತಿದಾರರಿಗೆ ತರಬೇತಿ ನೀಡಲಾಗುವುದು” ಎಂದು ತಿಳಿಸಿದರು.

“ಒಂದು ತಾಲ್ಲೂಕಿಗೆ ಅಂದಾಜು 500 ಗಣತಿದಾರರಿಗೆ ತರಬೇತಿ ನೀಡಲಾಗುವುದು. ತರಬೇತಿಗೆ ಗೈರುಹಾಜರಾದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದರು.

Previous articleಸೆ. 10 ವಿಶ್ವ ಆತ್ಮಹತ್ಯೆ ತಡೆ ದಿನ: ಬದುಕಿನ ದೀಪ ಆರುವ ಮುನ್ನ

LEAVE A REPLY

Please enter your comment!
Please enter your name here