ವಿಶೇಷ ವರದಿ ಪಿ.ವೈ.ರವಿಂದ್ರ ಹೇರ್ಳೆ
ರಾಮನಗರ ಜಿಲ್ಲೆಯ ಪ್ರವಾಸೋದ್ಯಮ ಉತ್ತೇಜಿಸಲು ಇಲಾಖೆ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಜಿಲ್ಲೆಯ 4 ಕೆರೆಗಳಲ್ಲಿ ದೋಣಿ ವಿಹಾರ (ಬೋಟಿಂಗ್) ಚಾಲನೆ ನೀಡಲು ಸಿದ್ಧತೆ ಮಾಡಿಕೊಂಡಿದೆ. ರಾಮನಗರ ಟೌನ್‌ನಲ್ಲಿರುವ ರಂಗರಾಯನದೊಡ್ಡಿ ಕೆರೆ, ಬಿಡದಿಯಲ್ಲಿನ ನಲ್ಲಿಗುಡ್ಡೆಕೆರೆ, ಮಾಗಡಿ ತಾಲೂಕಿನ ವೈ.ಜಿ.ಗುಡ್ಡ ಹಾಗೂ ಹಾರೋಹಳ್ಳಿ ತಾಲೂಕಿನ ರಾವುತಳ್ಳಿ ಕೆರೆಗಳಲ್ಲಿ ದೋಣಿ ವಿಹಾರ ಪ್ರಾರಂಭಿಸಲಾಗುತ್ತಿದ್ದು, ಇದಕ್ಕಾಗಿ ಎಲ್ಲ ತಯಾರಿಗಳು ನಡೆದಿವೆ.
ಸೆಪ್ಟೆಂಬರ್ 27ರ ವಿಶ್ವ ಪ್ರವಾಸೋದ್ಯಮ ದಿನಾಚರಣೆ ದಿನದಂದೇ 4 ಕೆರೆಗಳಲ್ಲೂ ದೋಣಿ ವಿಹಾರಕ್ಕೆ ಚಾಲನೆ ನೀಡಬೇಕೆಂಬುದು ಪ್ರವಾಸೋದ್ಯಮ ಇಲಾಖೆ ಉದ್ದೇಶ. ಆದರೆ, ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ಆ ದಿನ ಲಭ್ಯವಿಲ್ಲದ ಕಾರಣ ರಾಮನಗರದಲ್ಲಿನ ರಂಗರಾಯರದೊಡ್ಡಿ ಕೆರೆಯಲ್ಲಿ ದೋಣಿ ವಿಹಾರಕ್ಕೆ ಚಾಲನೆ ನೀಡಲು ನಿರ್ಧರಿಸಲಾಗಿದೆ. ಕೆರೆಯಲ್ಲಿ ಬೋಟಿಂಗ್ ನಡೆಸಲು ಟೆಂಡರ್ ಆಹ್ವಾನಿಸಲಾಗಿತ್ತು. ಇಂಡಿಯನ್ ಅಡ್ವೆಂಚರ್ ಅಂಡ್ ನೇಚರ್ ಟ್ರಾವೆಲ್ ಕಂಪನಿ 4 ಕೆರೆಗಳಲ್ಲಿ ದೋಣಿ ವಿಹಾರದ ಗುತ್ತಿಗೆ ಪಡೆದಿದೆ. ಈ ಕಂಪನಿ ಮಾರ್ಕೋನಹಳ್ಳಿ ಡ್ಯಾಮ್ ಮತ್ತು ಅವತಿ ಕೆರೆಗಳಲ್ಲಿಯೂ ದೋಣಿ ವಿಹಾರ ನಡೆಸಿದ ಅನುಭವ ಹೊಂದಿದೆ. ಇದೀಗ ಮೊದಲ ಹಂತದಲ್ಲಿ ರಂಗರಾಯರದೊಡ್ಡಿ ಕೆರೆಯಲ್ಲಿ ದೋಣಿ ವಿಹಾರ ಪ್ರಾರಂಭಿಸಲಾಗುತ್ತಿದೆ.
4 ಬಗೆಯ ಬೋಟಿಂಗ್ ವ್ಯವಸ್ಥೆ: ಈಗ ರಂಗರಾಯರದೊಡ್ಡಿ ಕೆರೆಯಲ್ಲಿ ದೋಣಿ ವಿಹಾರದಲ್ಲಿ ಪೆಟಲ್ ಬೋಟ್ , ಸ್ಪೀಡ್ ಬೋಟ್ , ಜೆಟ್ ಸಿ, ಬನಾನ ಬೋಟ್ ಗಳು ಪ್ರವಾಸಿಗರಿಗೆ ಮುದ ನೀಡಲಿದೆ. ಸದ್ಯ ಹೊಸದಾಗಿ 4 ಬೋಟ್‍ಗಳನ್ನು ಖರೀದಿಸಲಾಗಿದೆ. ಟೆಂಡರ್ ಪಡೆದ ಸಂಸ್ಥೆಯೇ ಬೋಟ್‍ಗಳ ಖರೀದಿಗೆ ಹಣ ಹೂಡಿಕೆ ಮಾಡಿದೆ. ಪ್ರತಿ ನಿತ್ಯ ಬೆಳಗ್ಗೆ 6 ರಿಂದ ಸಂಜೆ 6 ಗಂಟೆವರೆಗೆ ದೋಣಿ ವಿಹಾರ ಇರಲಿದ್ದು, ಸಾರ್ವಜನಿಕರಿಂದ ಶುಲ್ಕ ಸಂಗ್ರಹಿಸಲಾಗುತ್ತದೆ. ಒಬ್ಬರಿಗೆ ಪೆಟಲ್ ಬೋಟ್ ನಲ್ಲಿ 80 – 100 ರೂ., ಸ್ಪೀಡ್ ಬೋಟ್ ನಲ್ಲಿ 100 – 120 ರೂ., ಜೆಟ್ ಸಿ ನಲ್ಲಿ – 400 – 500 ರೂ. ಹಾಗೂ ಬನಾನ ಬೋಟ್ ನಲ್ಲಿ 100 – 150 ರೂಪಾಯಿ ದರ ನಿಗದಿ ಪಡಿಸಲು ಉದ್ದೇಶಿಸಲಾಗಿದೆ.
ಕೆರೆಯಲ್ಲಿ ಬೋಟಿಂಗ್‌ಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಟೆಂಡರ್ ಪಡೆದ ಸಂಸ್ಥೆಗೆ ನಿರ್ವಹಣೆ ಹೊಣೆ ನೀಡಲಾಗಿದೆ. ನಿಗದಿತ ಅವಧಿವರೆಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುತ್ತದೆ. ವರ್ಷಕ್ಕೆ ಇಂತಿಷ್ಟು ಎಂದು ಸಂಸ್ಥೆಯಿಂದ ಶುಲ್ಕ ಪಡೆಯಲಾಗುತ್ತದೆ. ಈ 4 ಕೆರೆಗಳ ಸುತ್ತಲು ಸಾರ್ವಜನಿಕರಿಗಾಗಿ ವಾಕಿಂಗ್ ಪಾತ್, ಕುಳಿತುಕೊಳ್ಳಲು ಆಸನ, ಶೌಚಾಲಯ , ಸ್ನಾನದ ಕೊಠಡಿ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಹಂತ ಹಂತವಾಗಿ ಕಲ್ಪಿಸಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ.
ರೇಷ್ಮೆನಾಡು ರಾಮನಗರದಲ್ಲಿರುವ ರಂಗರಾಯನದೊಡ್ಡಿ ಕೆರೆಯನ್ನು ಹಿಂದಿನ ರಾಮನಗರ—ಚನ್ನಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿಗೊಳಿಸಿತ್ತು. ಕೆರೆಯ ಏರಿಯ ಮೇಲೆ ವಾಕಿಂಗ್ ಪಾತ್ ನಿರ್ಮಿಸಿದೆ. ಗಿಡ, ಮರಗಳನ್ನು ಬೆಳೆಸಿದ್ದು, ಸುತ್ತಲು ಬೆಟ್ಟಗುಡ್ಡ ಮತ್ತು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಈ ಕೆರೆ ಸುಂದರ ತಾಣವಾಗಿ, ಜನಾಕರ್ಷಣೆಯ ಕೇಂದ್ರವಾಗಿದೆ. ಬೆಳಗ್ಗೆ ಮತ್ತು ಸಂಜೆ ಕೆರೆಯ ಬಳಿ ವಾಕಿಂಗ್ ಮಾಡಿ ಪ್ರಕೃತಿ ಸೌಂದರ್ಯ ಸವಿಯುವುದರ ಜೊತೆಗೆ ದೇಹದ ಆರೋಗ್ಯವನ್ನೂ ಕಾಪಾಡಿಕೊಳ್ಳುತ್ತಿದ್ದಾರೆ. ಈ ಕೆರೆಯಲ್ಲಿ ಬೋಟಿಂಗ್ ಆರಂಭಿಸುವುದರಿಂದ ಪ್ರವಾಸಿಗರ ಸಂಖ್ಯೆಯೂ ಹೆಚ್ಚಳವಾಗಲಿದೆ.
ಈ ಕುರಿತು ಮಾತನಾಡಿದ ರಾಮನಗರ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್, “ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಫುಲವಾದ ಅವಕಾಶಗಳಿವೆ. ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸುವುದು ಮಾತ್ರವಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯಬೇಕಾಗಿದೆ. ಹೀಗಾಗಿ ರಂಗರಾಯರದೊಡ್ಡಿಕೆರೆ, ರಾವುತಳ್ಳಿ ಕೆರೆ, ನಲ್ಲಿಗುಡ್ಡೆ ಕೆರೆ ಹಾಗೂ ವೈ.ಜಿ.ಗುಡ್ಡದಲ್ಲಿ ದೋಣಿ ವಿಹಾರ ಆರಂಭಿಸುವ ಕುರಿತು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ವಿಶ್ವ ಪ್ರವಾಸೋದ್ಯಮದ ದಿನದಂದು ರಂಗರಾಯರದೊಡ್ಡಿ ಕೆರೆಯಲ್ಲಿ ದೋಣಿ ವಿಹಾರಕ್ಕೆ ಚಾಲನೆ ನೀಡುತ್ತೇವೆ” ಎಂದು ಹೇಳಿದ್ದಾರೆ.
ರವಿಕುಮಾರ್ , ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಬೆಂಗಳೂರು ದಕ್ಷಿಣ ಜಿಲ್ಲೆ ಮಾತನಾಡಿ, “ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿನ ಪ್ರವಾಸಿ ತಾಣಗಳತ್ತ ಪ್ರವಾಸಿಗರನ್ನು ಸೆಳೆಯುವ ಪ್ರಯತ್ನಗಳು ಸಾಗಿವೆ. ಇದರ ಭಾಗವಾಗಿ ಜಿಲ್ಲೆಯ 4 ಕೆರೆಗಳಲ್ಲಿ ದೋಣಿ ವಿಹಾರ ಪ್ರಾರಂಭಿಸಲಾಗುತ್ತಿದೆ. ವಿಶ್ವ ಪ್ರವಾಸೋದ್ಯಮ ದಿನವಾದ ಸೆ.27ರಂದು ದೋಣಿ ವಿಹಾರಕ್ಕೆ ಚಾಲನೆ ಸಿಗಲಿದೆ” ಎಂದು ತಿಳಿಸಿದ್ದಾರೆ.