ಮೈಸೂರು ದಸರಾ 2025: ಜಂಬೂ ಸವಾರಿ ನೋಡುಗರಿಗೆ ಮಹತ್ವದ ಸೂಚನೆ

0
37

ಮೈಸೂರು ದಸರಾ 2025ರ ತಯಾರಿ ನಡೆಯುತ್ತಿದೆ. ಸೆಪ್ಟೆಂಬರ್ 22ರಂದು ದಸರಾ ಉದ್ಘಾಟಿಸಲಾಗುತ್ತದೆ. ಅಕ್ಟೋಬರ್ 2ರಂದು ಜಂಬೂ ಸವಾರಿ ಮೂಲಕ ವಿಶ್ವವಿಖ್ಯಾತ ಮೈಸೂರು ದಸರಾಗೆ ತೆರೆ ಬೀಳಲಿದೆ.

ಜಂಬೂ ಸವಾರಿ ನೋಡಲು ಲಕ್ಷಾಂತರ ಜನರು ಆಗಮಿಸುತ್ತಾರೆ. ಆದ್ದರಿಂದ ಮೈಸೂರು ನಗರ ಪೊಲೀಸರು ಮಹತ್ವದ ಮಾಹಿತಿಯೊಂದನ್ನು ನೀಡಿದ್ದಾರೆ. ಜಂಬೂ ಸವಾರಿ ನೋಡಲು ತೆರಳುವ ಜನರು ಈ ಕುರಿತು ಮಾಹಿತಿ ತಿಳಿದಿರುವುದು ಅಗತ್ಯವಾಗಿದೆ.

ಪೊಲೀಸರ ಆದೇಶ 2025ನೇ ಸಾಲಿನ ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ ಹಳೆ ಕಟ್ಟಡಗಳು, ಶಿಥಿಲ ಕಟ್ಟಡಗಳ ಮೇಲಿನಿಂದ ಸಾರ್ವಜನಿಕರಿಗೆ ಜಂಬೂ ಸವಾರಿ ವೀಕ್ಷಣೆಯನ್ನು ನಿರ್ಭಂಧಿಸಿರುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ.

ಆದೇಶದ ವಿವರ: 2024ನೇ ಸಾಲಿನ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿ ದಿನದಂದು ಅರಮನೆಯಿಂದ ಬನ್ನಿಮಂಟಪದ ಮೈದಾನದವರೆಗೆ ಜಂಬೂ ಸವಾರಿ ಸಾಗುವ ಮಾರ್ಗದ ರಸ್ತೆಯ ಎರಡೂ ಕಡೆಗಳಲ್ಲಿ ಹಳೆ ಕಟ್ಟಡಗಳು, ಶಿಥಿಲ ಕಟ್ಟಡಗಳು, ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ಮೇಲೆ ನೂರಾರು ಸಾರ್ವಜನಿಕರು ನಿಂತು ಜಂಬೂ ಸವಾರಿ ವೀಕ್ಷಣೆ ಮಾಡಿರುವುದು ಕಂಡು ಬಂದಿರುತ್ತದೆ.

ಈ ರೀತಿಯಾಗಿ ಹಳೆಯ/ ಶಿಥಿಲ ಕಟ್ಟಡಗಳು ಮತ್ತು ನಿರ್ಮಾಣ ಹಂತದ ಕಟ್ಟಡಗಳ ಮೇಲೆ ಒಮ್ಮೆಲೆ ನೂರಾರು ಜನರು ಸೇರುವುದರಿಂದ ಯಾವುದೇ ರೀತಿಯ ಅನಾಹುತಗಳಿಗೆ ಕಾರಣವಾಗುವ ಸಾಧ್ಯತೆ ಇರುತ್ತದೆ.

ಆದ್ದರಿಂದ 2025ನೇ ಸಾಲಿನಲ್ಲಿ ಈ ರೀತಿಯ ಯಾವುದೇ ಅನಾಹುತಗಳಿಗೆ ಅವಕಾಶ ನೀಡಬಾರದೆಂಬ ಕಾರಣಕ್ಕಾಗಿ ಹಾಗೂ ಜನ ಸಂದಣಿ ನಿರ್ವಹಣಾ ಪ್ರಮಾಣಿತ ಕಾರ್ಯಾಚರಣೆ ವಿಧಾನ (SOP) ಅನುಸಾರವಾಗಿ ಮೈಸೂರು ನಗರ ಪೊಲೀಸ್ ಆಯುಕ್ತರು ತಮ್ಮ ಇತರೇ ಅಧಿಕಾರಿಗಳೊಂದಿಗೆ ಮೈಸೂರು ಮಹಾ ನಗರಪಾಲಿಕೆಯ ಅಧಿಕಾರಿಗಳ ಜೊತೆ ಜಂಬೂ ಸವಾರಿ ನಡೆಯುವ ಮಾರ್ಗದಲ್ಲಿ ಜಂಟಿ ಸಮೀಕ್ಷೆ ನಡೆಸಿದ್ದು, ಲ್ಯಾನ್ಸ್‌ಡೌನ್ ಬಿಲ್ಡಿಂಗ್, ಕೆ.ಆರ್. ವೃತ್ತದ ಕಟ್ಟಡಗಳು, ದೇವರಾಜ ಮಾರುಕಟ್ಟೆ, ಪಂಚಮುಖಿ ವೃತ್ತದ ಕಟ್ಟಡಗಳು, ಹಾರ್ಸ್ ಸ್ಟ್ಯಾಂಡ್ (Horse Stand) ಹಾಗೂ ಇನ್ನಿತರೇ ಕಟ್ಟಡಗಳನ್ನು ಹಳೆಯ ಕಟ್ಟಡಗಳೆಂದು ಗುರುತಿಸಲಾಗಿದೆ.

ಈ ಸಂಬಂಧ ಹಳೆಯ/ ಶಿಥಿಲ ಕಟ್ಟಡಗಳು, ನಿರ್ಮಾಣ ಹಂತದ ಕಟ್ಟಡಗಳ ಮಾಲೀಕರ ಸಭೆಯನ್ನು ನಡೆಸಲಾಗಿದ್ದು, 2025ನೇ ಸಾಲಿನ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿ ಸಮಯದಲ್ಲಿ ಹಳೆಯ ಕಟ್ಟಡಗಳು, ಶಿಥಿಲ ಕಟ್ಟಡಗಳು ಮತ್ತು ನಿರ್ಮಾಣ ಹಂತದ ಕಟ್ಟಡಗಳ ಮೇಲೆ ಜಂಬೂ ಸವಾರಿ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ನೀಡಬಾರದೆಂದು ಕಟ್ಟಡದ ಮಾಲೀಕರಿಗೆ ಸೂಕ್ತ ತಿಳುವಳಿಕೆ ನೀಡಲಾಗಿದೆ.

ಸಾರ್ವಜನಿಕರೂ ಸಹ ಜಂಬೂ ಸವಾರಿ ಮಾರ್ಗದ ಹಳೆಯ ಕಟ್ಟಡಗಳು, ಶಿಥಿಲ ಕಟ್ಟಡಗಳು, ನಿರ್ಮಾಣ ಹಂತದ ಕಟ್ಟಡಗಳು, ಮರಗಳು, ಕಂಬಗಳು ಇನ್ನಿತರೆ ಸುರಕ್ಷಿತವಲ್ಲದ ಸ್ಥಳಗಳ ಮೇಲೆ ಹತ್ತಿ ಜಂಬೂ ಸವಾರಿ ವೀಕ್ಷಣೆ ಮಾಡದೇ ಸುರಕ್ಷಿತ ಸ್ಥಳಗಳಲ್ಲಿ ಕುಳಿತು ಜಂಬೂ ಸವಾರಿ ವೀಕ್ಷಿಸಬೇಕೆಂದು ಕೋರಲಾಗಿದೆ.

Previous articleಜಿಎಸ್‌ಟಿ ಕಡಿತ: ಯಾವ್ಯಾವ ವಸ್ತುಗಳ ದರ ಇಳಿಕೆ?
Next articleಪ್ರತ್ಯೇಕ ಸಚಿವಾಲಯ: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಹೊಸ ವೇಗ

LEAVE A REPLY

Please enter your comment!
Please enter your name here