ಮೈಸೂರು ನಗರದಲ್ಲಿನ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ರಾಷ್ಟ್ರಪತಿ ದ್ರೌಪದಿ ಮುರ್ಮು ಸೆಪ್ಟೆಂಬರ್ 1ರಂದು ನಗರಕ್ಕೆ ಆಗಮಿಸಲಿದ್ದಾರೆ. ಮಧ್ಯಾಹ್ನ 3.10ಕ್ಕೆ ಮೈಸೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಅವರು ಸಂಜೆ 4 ಗಂಟೆಗೆ ಮಾನಸಗಂಗೋತ್ರಿಯ ನೈಮಿಶಾಮ್ ಕ್ಯಾಂಪಸ್ನಲ್ಲಿ ಹಮ್ಮಿಕೊಳ್ಳಲಾಗಿರುವ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
ಸಂಜೆ ಚಾಮುಂಡಿಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ದರ್ಶನ ಪಡೆಯಲಿದ್ದಾರೆ. ನಂತರ ಅವರು ನಗರದ ಖಾಸಗಿ ಹೋಟೆಲ್‍ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಸೆಪ್ಟೆಂಬರ್ 2ರಂದು ಅರಮನೆಗೆ ಭೇಟಿ ನೀಡಿ ರಾಜ ವಂಶಸ್ಥರ ಆತಿಥ್ಯ ಸ್ವೀಕರಿಸುವರು. ಈ ವೇಳೆ ಡಾ.ಪ್ರಮೋದೇವಿ ಒಡೆಯರ್ ಅವರೊಡನೆ ಕೆಲಕಾಲ ಮಾತುಕತೆ ನಡೆಸಿ, ನಂತರ ಅರಮನೆ ವೀಕ್ಷಿಸುವರು. ನಂತರ ಬೆಳಗ್ಗೆ 10.20ಕ್ಕೆ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.
ರಾಷ್ಟ್ರಪತಿ ಭೇಟಿ ಹಿನ್ನೆಲೆಯಲ್ಲಿ ನಗರದಲ್ಲಿ ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಎಲ್ಲ ರೀತಿಯ ಮುಂಜಾಗರೂಕತಾ ಕ್ರಮ ಕೈಗೊಂಡಿದ್ದಾರೆ. ರಾಷ್ಟ್ರಪತಿಗಳು ಸಾಗುವ ಮಾರ್ಗದೆಲ್ಲೆಡೆ ಅಗತ್ಯ ಸಂಖ್ಯೆಯಲ್ಲಿ ಹಿರಿಯ ಅಧಿಕಾರಿಗಳ ಅಡಿಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಇದಲ್ಲದೆ, ಈಗಾಗಲೇ ಬೆಂಗಾವಲು ಪಡೆಯಿಂದ ತಾಲೀಮು ಸಹ ನಡೆದಿದೆ. ಜೊತೆಗೆ, ಆ ಮಾರ್ಗಗಳಲ್ಲಿ ರಸ್ತೆಗಳಲ್ಲಿ ಗುಂಡಿ ಮುಚ್ಚುವ ಜೊತೆಗೆ, ಅಗತ್ಯವಿರುವ ಕಡೆ ಪೂರ್ಣ ಪ್ರಮಾಣದಲ್ಲಿ ಡಾಂಬರು ಹಾಕುವುದು ಸಹ ಪೂರ್ಣಗೊಂಡಿದೆ.