ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್: ಪ್ರತಾಪ್ ಸಿಂಹ ಅಪಸ್ವರ

0
87

ಮೈಸೂರು: “ಬಾನು ಮುಷ್ತಾಕ್‍ಗೆ ತಾಯಿ ಚಾಮುಂಡಿ ಮೇಲೆ ನಂಬಿಕೆ ಇದೆಯೇ, ಬಾನು ಮುಷ್ತಾಕ್ ಚಾಮುಂಡಿ ಭಕ್ತೆ ಎಂದು ಹೇಳಿದ್ದಾರೆಯೇ?” ಎಂದು ಬಿಜೆಪಿ ನಾಯಕ, ಮೈಸೂರು-ಕೊಡಗು ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.

ಮೈಸೂರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, “ಬಾನು ಮುಷ್ತಾಕ್ ಅವರ ಬಗ್ಗೆ ನಮಗೆ ಹೆಮ್ಮೆ ಇದೆ. ಮುಸ್ಲಿಮರು ಎನ್ನುವ ಕಾರಣಕ್ಕೆ ನನ್ನ ಅಪಸ್ವರ ಎತ್ತುತ್ತಿಲ್ಲ. ಬಾನು ಮುಷ್ತಾಕ್ ಅವರ ಸಾಹಿತ್ಯದ ಬಗ್ಗೆ ಗೌರವವಿದೆ. ದಸರಾ ಇದು ಜಾತ್ಯಾತೀತತೆಯ ಪ್ರತೀಕ ಅಲ್ಲ. ಇದು ಧಾರ್ಮಿಕ ಆಚರಣೆ. ದಸರಾ ಶೇ.100 ಧಾರ್ಮಿಕ ಆಚರಣೆ. ದುರ್ಗಾ ಪೂಜೆ, ನವರಾತ್ರಿ ಉತ್ಸವ ಇರುತ್ತದೆ” ಎಂದರು.

“ಇದು ಧಾರ್ಮಿಕ ಹಬ್ಬ. ಯದುವಂಶ ಆರಂಭಿಸಿದ ಧಾರ್ಮಿಕ ಹಬ್ಬ ಇದು. ಜಾತ್ಯಾತೀತ ಪ್ರತೀಕ ಅಲ್ಲ. ತಾಯಿ ಚಾಮುಂಡಿಗೆ ಪೂಜೆ ಸಲ್ಲಿಸಿ ದಸರಾಗೆ ಚಾಲನೆ ಕೊಡಲಾಗುತ್ತದೆ. ಬಾನು ಮುಷ್ತಾಕ್ ಅವರಿಗೆ ತಾಯಿ ಚಾಮುಂಡಿ ಮೇಲೆ ನಂಬಿಕೆ ಇದೆಯೇ, ಬಾನು ಮುಷ್ತಾಕ್ ಚಾಮುಂಡಿ ಭಕ್ತೆ ಎಂದು ಹೇಳಿದ್ದಾರೆಯೇ?” ಎಂದು ಪ್ರಶ್ನೆ ಮಾಡಿದರು.

“ಭಕ್ತಿ ಭಾವದಿಂದ ಮಾಡುವ ಆಚರಣೆ ದಸರಾ. ತಾಯಿ ಚಾಮುಂಡಿ ಮೇಲೆ ಭಕ್ತಿ ತೋರ್ಪಡಿಸುವ ಹಬ್ಬ ಇದು. ಧಾರ್ಮಿಕ ಸಂಕೇತವಾದ ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಹೇಗೆ ಸೂಕ್ತ ವ್ಯಕ್ತಿ ಆಗುತ್ತಾರೆ?. ಇದು ನನ್ನ ಪ್ರಶ್ನೆ. ಬದಲಾಗಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಬಾನು ಮುಷ್ತಾಕ್‌ರನ್ನು ಘೋಷಿಸಿ. ಯಾರ ತಕಾರರೂ ಇಲ್ಲ” ಎಂದರು.

ಸಿದ್ದರಾಮಯ್ಯ ಘೋಷಣೆ: ಕಳೆದ ವಾರ ಮುಖ್ಯಮಂತ್ರಿ ಸಿದ್ದರಾಮಯ್ಯ,ಈ ಬಾರಿ ವಿಶ್ವವಿಖ್ಯಾತ ದಸರಾ ಮಹೋತ್ಸವವನ್ನು ಬೂಕರ್ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಬಾನು ಮುಷ್ತಾಕ್ ಅವರು ಉದ್ಘಾಟಿಸಲಿದ್ದು, ಜಿಲ್ಲಾಡಳಿತದ ವತಿಯಿಂದ ಬಾನು ಮುಷ್ತಾಕ್ ಅವರನ್ನು ಗೌರವದಿಂದ ಆಹ್ವಾನಿಸಲಾಗುವುದು ಎಂದು ಹೇಳಿದ್ದರು.

ಬಾನು ಮುಷ್ತಾಕ್ ಅವರ ಕೃತಿ ‘ಎದೆಯ ಹಣತೆಗೆ’ ಬೂಕರ್ ಪ್ರಶಸ್ತಿ ದೊರೆತಿದ್ದು, ಕರ್ನಾಟಕದ ಲೇಖಕಿಗೆ ಈ ಪ್ರಶಸ್ತಿ ದೊರೆತಿರುವುದು ಸಂತಸ ತಂದಿದೆ. ರೈತ ಸಂಘ, ಕನ್ನಡ ಚಳವಳಿಯ ಜೊತೆಗೆ ಹೋರಾಟದ ಹಿನ್ನೆಲೆಯುಳ್ಳ ಬಾನು ಮುಷ್ತಾಕ್ ಅವರು ಪ್ರಗತಿಪರ ಚಿಂತಕಿಯೂ ಆಗಿದ್ದಾರೆ. ಅವರಿಂದಲೇ ದಸರಾ ಉದ್ಘಾಟಿಸಿ, ಅವರ ಸಾಧನೆಯನ್ನು ಗೌರವಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ತಿಳಿಸಿದ್ದರು.

ಮೈಸೂರು ದಸರಾ 2025ರ ತಯಾರಿ ನಡೆಯುತ್ತಿದೆ. ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳ ಮೊದಲ ತಂಡ ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಈಗಾಗಲೇ ಮೈಸೂರು ನಗರಕ್ಕೆ ಆಗಮಿಸಿವೆ. ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2ರವರೆಗೆ 11 ದಿನಗಳ ಕಾಲ ಈ ಬಾರಿಯ ಮೈಸೂರು ದಸರಾ ಮಹೋತ್ಸವ ನಡೆಯಲಿದೆ.

ಕಳೆದ ವಾರ ಮಾಧ್ಯಮಗಳಲ್ಲಿ ಈ ಬಾರಿಯ ದಸರಾವನ್ನು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಉದ್ಘಾಟಿಸಲಿದ್ದಾರೆ ಎಂಬ ವರದಿ ಬಂದಿತ್ತು. ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿ, ‘ಈ ಬಾರಿಯ ಮೈಸೂರು ದಸರಾ ಮಹೋತ್ಸವವನ್ನು ನಮ್ಮ ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿಯವರು ಉದ್ಘಾಟಿಸಲಿದ್ದಾರೆ ಎಂಬ ಕಾಲ್ಪನಿಕ ಸುದ್ದಿಯನ್ನು ಕೆಲ ಮಾಧ್ಯಮಗಳು ವರದಿ ಮಾಡಿರುವುದನ್ನು ಗಮನಿಸಿದೆ. ಇದು ಸತ್ಯಕ್ಕೆ ದೂರವಾದುದ್ದು. ಆ ರೀತಿಯ ಯೋಚನೆಯಾಗಲೀ, ಪ್ರಸ್ತಾವನೆಯಾಗಲಿ ಸರ್ಕಾರದ ಮುಂದೆ ಇಲ್ಲ’ ಎಂದು ಸ್ಪಷ್ಟನೆ ನೀಡಿದ್ದರು.

Previous articleಬಾಗಲಕೋಟೆ: 5,71,001 ರೂ.ಗೆ ಮಾಳಿಂಗರಾಯ ಗದ್ದುಗೆ ತೆಂಗಿನಕಾಯಿ ಹರಾಜು
Next articleಶಾಲೆಗಳಿಗೆ ಸ್ಥಳೀಯ ರಜೆ: ಶಿಕ್ಷಣ ಇಲಾಖೆ ಸ್ಪಷ್ಟೀಕರಣಗಳು

LEAVE A REPLY

Please enter your comment!
Please enter your name here