ಧರ್ಮಸ್ಥಳ ವಿವಾದ ಕುರಿತು ಮೌನ ಮುರಿದಿರುವ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಪತ್ರಿಕಾ ಹೇಳಿಕೆ ನೀಡಿದ್ದಾರೆ. ನಾಡಿನ ಪ್ರಸಿದ್ಧ ಶ್ರದ್ಧೆ ಹಾಗೂ ಭಕ್ತಿಯ ಧಾರ್ಮಿಕ ಕೇಂದ್ರಗಳಲ್ಲಿ ಧರ್ಮಸ್ಥಳ ಕ್ಷೇತ್ರವೂ ಒಂದು. ಇಂದು ಕ್ಷೇತ್ರವನ್ನು ವಿವಾದಿತ ಕೇಂದ್ರವನ್ನಾಗಿಸಲು ಕೆಲವರು ಯತ್ನಿಸುತ್ನಿಸುತ್ತಿರುವುದು ವಿಷಾದನೀಯ ಎಂದಿದ್ದಾರೆ.
ನಂಬಿಕೆ ಎಂಬುದು ಬಹು ಸೂಕ್ಷ್ಮವಾದ ಸಂಗತಿ. ಅದು ಕನ್ನಡಿಯಿದ್ದಂತೆ. ಒಮ್ಮೆ ಅದು ಒಡೆದು ಹೋದರೆ ಮತ್ತೆ ಸರಿಪಡಿಸಲಾಗುವುದಿಲ್ಲ. ಒಡೆದ ಕನ್ನಡಿಯ ಪ್ರತಿಚೂರಿನಲ್ಲೂ ಪ್ರತ್ಯೇಕ ಪ್ರತ್ಯೇಕ ಬಿಂಬಗಳು ಕಾಣುತ್ತಿರುತ್ತವೆ. ಹೀಗೆ ಕಂಡ ಕಂಡ ಬಿಂಬಗಳನ್ನೆಲ್ಲ ನಂಬಿ ವಿಭಿನ್ನವಾಗಿ ಅರ್ಥೈಸುತ್ತಾ ಹೋಗುವುದು ಸೂಕ್ತವಾದುದಲ್ಲ. ಒಂದು ವಿವಾದವನ್ನು ಮುನ್ನೆಲೆಗೆ ತರುತ್ತಿರುವ ಪ್ರಯತ್ನಗಳು ಸೂಕ್ತವಾದುವಲ್ಲ.
ಧರ್ಮಸ್ಥಳ ಕ್ಷೇತ್ರ ಕರ್ನಾಟಕ ಮಾತ್ರವಲ್ಲದೇ ಇಡೀ ಭಾರತದ, ಜಗತ್ತಿನ ಅನೇಕ ಭಾಗಗಳ ಪರಂಪರಾಗತ ಸಹಬಾಳ್ವೆಗೆ ದ್ಯೋತಕ. ಅಲ್ಲಿ ಶಿವ ದೇವಾಲಯ ಪೂಜಿಸುವ ಅರ್ಚಕರು ವಿಷ್ಣುವನ್ನೇ ಪರಮ ದೈವವೆಂದು ನಂಬುವ ಮಾಧ್ವ ಸಂಪ್ರದಾಯದವರು, ಉಸ್ತುವಾರಿ ನೋಡಿಕೊಳ್ಳುತ್ತಿರುವವರು ಶ್ರಮಣ ಧರ್ಮದ ಜೈನ ಸಮುದಾಯದವರು. ಈ ಮೂರು ವಿಭಿನ್ನ ನಂಬಿಕೆಗಳು ಒಗ್ಗೂಡಿರುವ ಶ್ರೀಕ್ಷೇತ್ರದ ಮೂಲ ದೈವಕ್ಕೆ ಹೆಗ್ಗಡೆ ಕುಟುಂಬ ಶ್ರದ್ಧಾ-ಭಕ್ತಿಗಳಿಂದ ನಡೆದುಕೊಳ್ಳುತ್ತಿರುವುದು ಹಾಗೂ ಯಾವುದೇ ಚ್ಯುತಿಬಾರದಂತೆ ನಿರ್ವಹಿಸುತ್ತಿರುವುದು ಹೆಮ್ಮೆ ಪಡುವ ವಿಚಾರ. ಇದು ಭಾವೈಕ್ಯತೆಗೆ ನಿಜವಾದ ತೋರುಗನ್ನಡಿ ಎಂದಿದ್ದಾರೆ.
ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಿ. ವೀರೇಂದ್ರ ಹೆಗ್ಗಡೆ ಗ್ರಾಮೀಣಾಭಿವೃದ್ಧಿ ಯೋಜನೆಯ ಮೂಲಕ ಗ್ರಾಮೀಣ ಜನರ ಬದುಕನ್ನು ಸಮೃದ್ಧಗೊಳಿಸಲು ಹಮ್ಮಿಕೊಂಡಿರುವ ಕಾರ್ಯಗಳು ಅಪೂರ್ವವಾದುವು. ಗ್ರಾಮಗಳಿಗೆ ಕುಡಿಯುವ ನೀರು ಮತ್ತು ಮೂಲಭೂತ ಸೌಕರ್ಯಗಳನ್ನು ಕಲ್ಪಿಸುತ್ತಿರುವವರು. ದೇವಾಲಯಗಳ ಜೀರ್ಣೋದ್ಧಾರ, ಪ್ರಾಚೀನ ವಸ್ತುಗಳು, ಸ್ಮರಣಿಕೆಗಳು ಹಾಗೂ ಹಸ್ತಪ್ರತಿಗಳ ಸಂಗ್ರಹ ಮತ್ತು ಪ್ರದರ್ಶನ ವ್ಯವಸ್ಥೆ ಮಾಡಿರುವರು. ಸ್ತ್ರೀಶಕ್ತಿ ಸಂಘಗಳ ಮೂಲಕ ಗ್ರಾಮೀಣ ಮಹಿಳೆಯರ ಆರ್ಥಿಕ ಭದ್ರತೆಯನ್ನು ಹೆಚ್ಚಿಸುತ್ತಿದ್ದಾರೆ ಎಂದು ವಿವರಿಸಿದ್ದಾರೆ.
1972ರಿಂದಲೂ ಸಾಮೂಹಿಕ ವಿವಾಹಗಳನ್ನು ನಡೆಸುವ ಮೂಲಕ ಶ್ರೀಸಾಮಾನ್ಯರು ಆಡಂಬರದ ಆಚರಣೆಗಳಿಂದ ಅನುಭವಿಸುತ್ತಿದ್ದ ಆರ್ಥಿಕ ತೊಂದರೆಯಿಂದ ಮುಕ್ತರನ್ನಾಗಿರಿಸಿರುವುದು ಅನುಕರಣೀಯ. ಇಂತಹ ಪವಿತ್ರ ಕ್ಷೇತ್ರದಲ್ಲಿ ಕೆಲವು ಅಸಹಜ ಸಾವಿರನ ಪ್ರಕರಣಗಳು ಗಂಭೀರವಾದುವೇ ಆಗಿರಬಹುದು, ಆದರೆ ಇಂತಹ ಪ್ರಕರಣಗಳನ್ನು ಶ್ರೀಕ್ಷೇತ್ರದೊಂದಿಗೆ ತಳಕು ಹಾಕಲು ಪ್ರಯತ್ನಿಸುವುದು ದುಡುಕಿನ ನಿರ್ಧಾರವಾಗುತ್ತದೆ. ಸತ್ಯ ಸದಾ ಮೌನಿ, ಸುಳ್ಳಿಗೆ ಆರ್ಭಟ ಜಾಸ್ತಿ, ಇದರಿಂದ ಶ್ರದ್ಧಾವಂತ ಮನಸ್ಸುಗಳಿಗೆ ಧಕ್ಕೆಯುಂಟಾಗಬಾರದು ಎಂದು ಸಲಹೆ ನೀಡಿದ್ದಾರೆ.
ಇಂತಹ ಕೃತ್ಯಗಳನ್ನು ಸಮಗ್ರ ತನಿಖೆ ಮಾಡಿ ಸತ್ಯವನ್ನು ಅನಾವರಣ ಮಾಡಬೇಕಾದುದು ಸರ್ಕಾರದ ಜವಾಬ್ದಾರಿಯಾಗಿದ್ದು, ವಿಶೇಷ ತನಿಖಾ ತಂಡ ರಚಿಸಿದೆ. ಶ್ರೀಕ್ಷೇತ್ರದ ಬಗ್ಗೆ ಅಪಾರ ಭಕ್ತಿ ಮತ್ತು ಶ್ರದ್ಧೆ ಹೊಂದಿರುವ ಸದ್ಭಕ್ತರು ಶಾಂತಿ ಮತ್ತು ಸಂಯಮದಿಂದ ಇರಬೇಕಾದುದು ಅಗತ್ಯ. ಹಾಗೆಯೇ ನ್ಯಾಯಕ್ಕಾಗಿ ಆಗ್ರಹಿಸುವವರು ಕೂಡ ಯಾವುದೇ ಪೂರ್ವಾಗ್ರಹಗಳಿಗೆ ಒಳಗಾಗದೇ ತನಿಖೆ ಪೂರ್ಣಗೊಳ್ಳುವವರೆಗೆ ಅಸಹನೆಗೊಳ್ಳದೇ ತಾಳ್ಮೆಯಿಂದ ಇರಬೇಕಾದುದು ಅಗತ್ಯ.ಇಂಥ ಘಟನೆಗಳಿಂದ ಶ್ರೀಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮತ್ತು ಅವರ ಕುಟುಂಬ ವರ್ಗದವರು, ಶ್ರೀಕ್ಷೇತ್ರದ ಸೇವಾಕರ್ತರು, ಭಕ್ತಾದಿಗಳು ಹಾಗೂ ಅಭಿಮಾನಿಗಳು ವಿಚಲಿತರಾಗದೇ, ಧರ್ಯ ಹಾಗೂ ಸಮಾಧಾನದಿಂದಿರಬೇಕು.
ಶ್ರೀಕ್ಷೇತ್ರದ ಎಲ್ಲ ಧಾರ್ಮಿಕ ಚಟುವಟಿಕೆಗಳನ್ನು ಎಂದಿನಂತೆ ಮುಂದುವರಿಸಿಕೊಂಡು ಹೋಗುತ್ತಿರಬೇಕು. ಇಂಥ ಸೂಕ್ಷ್ಮ ಸಂದರ್ಭದಲ್ಲಿ ಎಲ್ಲರೂ ಅವರೊಂದಿಗೆ ಒಟ್ಟಾಗಿದ್ದು, ಕ್ಷೇತ್ರದ ಸಂರಕ್ಷಣೆಗೆ ಸಹಕರಿಸಬೇಕಾದುದು ಅತ್ಯಗತ್ಯ. ಮಂಜುನಾಥ ಸ್ವಾಮೀಜಿಯ ಕೃಪೆಯಿಂದ ಆದಷ್ಟು ಜಾಗ್ರತೆ ಎಲ್ಲ ಕಾರ್ಮೋಡಗಳು ಕರಗಿ ಶಾಂತಿ- ನೆಮ್ಮದಿಗಳು ನೆಲೆಸುವಂತಾಗಲೆಂದು ಶ್ರೀಗಳು ಹಾರೈಸಿದ್ದಾರೆ.