ದಾಂಡೇಲಿ : ಕಳೆದೊಂದು ವಾರದಿಂದ ಒಂಟಿ ಸಲಗವೊಂದು ದಾಂಡೇಲಿ ತಾಲೂಕಿನ ಬೇಡರ ಶಿರಗೂರು, ಆಲೂರು ಮತ್ತಿತರೆ ಗ್ರಾಮಗಳಲ್ಲಿ ರಾತ್ರಿಯ ವೇಳೆ ರೈತರ ತೋಟ, ಗದ್ದೆಗಳಿಗೆ ನುಗ್ಗಿ ಬೆಳೆ ನಾಶ ಮಾಡಿ ರೈತರನ್ನು ಆತಂಕಕ್ಕೀಡು ಮಾಡಿದೆ.
ಇತ್ತಿಚೆಗೆ ಕಾಡಿನಿಂದ ನಾಡಿಗೆ ಆಹಾರವನ್ನರಸಿ ಆನೆಗಳ ಹಿಂಡು ಗ್ರಾಮೀಣ ಪ್ರದೇಶಗಳಾದ ಬೊಮ್ಮನಹಳ್ಳಿ, ಕೇಗದಾಳ, ಡೋಣ ಶಿರಗೂರು ಮತ್ತಿತರ ಗ್ರಾಮಗಳಲ್ಲಿ ದಾಳಿ ನಡೆಸಿ ಬೆಳೆ ಹಾನಿ ಮಾಡಿತ್ತು. ಇದೀಗ ಒಂಟಿ ಸಲಗವೊಂದು ಆಲೂರು, ಬೇಡರ ಶಿರಗೂರು ಮತ್ತು ಗೋಬ್ರಾಳ ಗ್ರಾಮಗಳ ಸುತ್ತ-ಮುತ್ತ ಸಂಚರಿಸುತ್ತಿದ್ದು ರಾತ್ರಿಯ ವೇಳೆ ತೋಟ, ಗದ್ದೆಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿದೆ.
ಕಳೆದೊಂದು ವಾರದಿಂದ ಪ್ರತಿನಿತ್ಯ ಮಧ್ಯರಾತ್ರಿ ನಿದ್ದೆಗೆಟ್ಟು ಆನೆಯಿಂದ ಬೆಳೆ ರಕ್ಷಿಸಿಕೊಳ್ಳಲು ರೈತರು ಕಷ್ಟ ಪಡುತ್ತಿದ್ದಾರೆ. ಒಂಟಿ ಸಲಗವನ್ನು ಬೆದರಿಸಿ ಓಡಿಸುತ್ತಿದ್ದರೂ ಮತ್ತೇ ತಿರುಗಿ ಬಂದು ರೈತರ ನೆಮ್ಮದಿಗೆಡಿಸುತ್ತಿದೆ. ಈ ಕುರಿತು ಅರಣ್ಯಾಧಿಕಾರಿಗಳ ಗಮನಕ್ಕೂ ತರಲಾಗಿದೆ.ಕಾಳಿ ಜಲ ವಿದ್ಯುತ್ ಯೋಜನೆ, ಜಲಾಶಯಗಳ ನಿರ್ಮಾಣದಿಂದಾಗಿ ಆನೆಗಳ ಆವಾಸಸ್ಥಾನಗಳು, ಅವುಗಳು ಚಲಿಸುವ ಪಥಗಳ ಬದಲಾವಣೆ, ಕಾಡಿನಲ್ಲಿ ಆಹಾರದ ಕೊರತೆ, ಬಿದಿರು ನಾಶದಿಂದಾಗಿ ಅವು ನಾಡಿನತ್ತ ನುಗ್ಗುತ್ತಿದೆ.
ಇತ್ತಿಚೆಗೆ ಈ ಭಾಗದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಕಬ್ಬು ಬೆಳೆಯುತ್ತಿದ್ದು, ಆನೆಗಳ ಪ್ರಮುಖ ಆಹಾರ ಬಿದಿರಿನ ಕೊರತೆಯಿಂದಾಗಿ ಕಬ್ಬು, ಮೆಕ್ಕೆಜೋಳದಂತ ಬೆಳೆಗಳತ್ತ ಆಕರ್ಷಿತವಾಗುತ್ತಿದೆ. ಇದರಿಂದ ರೈತರು ಬೆಳೆದ ಬೆಳೆ ಕೈಗೆಟುಕುವ ಮುನ್ನವೇ ಆನೆಗಳ ದಾಳಿಗೆ ಸಿಲುಕಿ ಬೆಳೆ ನಾಶವಾಗುತ್ತಿದೆ.
ಆನೆಗಳು ತಿನ್ನುವುದಕ್ಕಿಂತ ಹೆಚ್ಚು ಬೆಳೆಗಳನ್ನು ತುಳಿದು ನಾಶ ಪಡಿಸುತ್ತಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಸರಕಾರ ಆನೆಗಳ ಸಂರಕ್ಷಣೆಗೆ ಎಲಿಫೆಂಟ್ ಕಾರಿಡಾರ್ ನಿರ್ಮಿಸಿ, ಅವುಗಳ ಚಲಿಸುವ ಪಥಗಳ ಅಭಿವೃಧ್ಧಿ ಮಾಡಿದಲ್ಲಿ ಈ ಭಾಗದ ರೈತರು ಆನೆಗಳ ದಾಳಿಯಿಂದ ಬೆಳೆಯನ್ನು ರಕ್ಷಿಸಿ ಕೊಳ್ಳಲು ಸಾಧ್ಯ. ಇದಕ್ಕೆ ಸರ್ಕಾರ ಮನಸ್ಸು ಮಾಡಬೇಕಿದೆ.