ಶಾಸಕ ನಂಜೇಗೌಡ ಆಯ್ಕೆ ಅಸಿಂಧು; ಮರು ಮತ ಎಣಿಕೆಗೆ ಹೈಕೋರ್ಟ್‌ನಿಂದ ಆದೇಶ

0
24

ಮಾಲೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ವೈ. ನಂಜೇಗೌಡ ಅವರಿಗೆ ಕರ್ನಾಟಕ ಹೈಕೋರ್ಟ್‌ನಿಂದ ಭಾರಿ ಹಿನ್ನಡೆಯಾಗಿದೆ. ಅವರ ಶಾಸಕ ಸ್ಥಾನದ ಆಯ್ಕೆಯನ್ನು ಅಸಿಂಧುಗೊಳಿಸಿ ಹೈಕೋರ್ಟ್ ಮಹತ್ವದ ಆದೇಶವನ್ನು ಹೊರಡಿಸಿದೆ. ಇದರ ಜೊತೆಗೆ, 2023ರ ಮಾಲೂರು ಕ್ಷೇತ್ರದ ಮತಗಳನ್ನು ಮತ್ತೆ ಎಣಿಕೆ ಮಾಡುವಂತೆ ಸಹ ಹೈಕೋರ್ಟ್ ತೀರ್ಪು ನೀಡಿದೆ.

ಕಳೆದ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ವೈ. ನಂಜೇಗೌಡ ಅವರು ಬಿಜೆಪಿ ಅಭ್ಯರ್ಥಿ ಮಂಜುನಾಥಗೌಡ ಅವರ ವಿರುದ್ಧ ಕೇವಲ 248 ಮತಗಳ ಅಂತರದಿಂದ ಜಯಗಳಿಸಿದ್ದರು. ಆದರೆ, ಮತ ಎಣಿಕೆ ಪ್ರಕ್ರಿಯೆಯಲ್ಲಿ ಲೋಪಗಳಾಗಿವೆ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಮಂಜುನಾಥಗೌಡ ಆರೋಪಿಸಿದ್ದರು. ಅಲ್ಲದೆ, ನಂಜೇಗೌಡರ ಆಯ್ಕೆಯನ್ನು ಅಸಿಂಧುಗೊಳಿಸುವಂತೆ ಕೋರಿ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಜಿಲ್ಲಾ ಚುನಾವಣಾಧಿಕಾರಿಗಳು ಮತ ಎಣಿಕೆಯ ವಿಡಿಯೋವನ್ನು ನ್ಯಾಯಾಲಯಕ್ಕೆ ಸಲ್ಲಿಸದಿರುವುದನ್ನು ಗಂಭೀರವಾಗಿ ಪರಿಗಣಿಸಿತು. ಈ ಹಿನ್ನೆಲೆಯಲ್ಲಿ, ಜಿಲ್ಲಾ ಚುನಾವಣಾಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ ನ್ಯಾಯಾಲಯ, ನಾಲ್ಕು ವಾರಗಳೊಳಗೆ ಮಾಲೂರು ಕ್ಷೇತ್ರದ ಮತಗಳನ್ನು ಮರು ಎಣಿಕೆ ಮಾಡುವಂತೆ ಆದೇಶಿಸಿದೆ. ಈ ತೀರ್ಪು, ಇತ್ತೀಚೆಗೆ ಕೆಎಂಎಫ್ ಅಧ್ಯಕ್ಷರಾಗುವ ಕನಸು ಕಾಣುತ್ತಿದ್ದ ನಂಜೇಗೌಡರಿಗೆ ದೊಡ್ಡ ನಿರಾಸೆಯನ್ನುಂಟು ಮಾಡಿದೆ.

ತಮ್ಮ ಆಯ್ಕೆ ಅಸಿಂಧು ಎಂದು ಆದೇಶ ಹೊರಬರುತ್ತಿದ್ದಂತೆಯೇ, ಈ ತೀರ್ಪಿಗೆ ತಡೆ ನೀಡುವಂತೆ ನಂಜೇಗೌಡರ ಪರ ವಕೀಲೆ ನಳಿನಾ ಮಾಯಗೌಡ ಮನವಿ ಮಾಡಿದರು. ಈ ಮನವಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ಹೈಕೋರ್ಟ್ ಪೀಠವು, ತನ್ನದೇ ಆದೇಶಕ್ಕೆ 30 ದಿನಗಳ ಕಾಲ ತಾತ್ಕಾಲಿಕ ತಡೆ ನೀಡಿದೆ. ಇದರಿಂದ ನಂಜೇಗೌಡರಿಗೆ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಸಿಕ್ಕಿದೆ.

ಮುಂದಿನ ಒಂದು ತಿಂಗಳೊಳಗೆ ನಂಜೇಗೌಡರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿ, ಹೈಕೋರ್ಟ್ ಆದೇಶಕ್ಕೆ ತಡೆ ತರಬೇಕಿದೆ. ಒಂದು ವೇಳೆ ಅವರು ಹೀಗೆ ಮಾಡಲು ವಿಫಲವಾದರೆ, ತಮ್ಮ ಶಾಸಕ ಸ್ಥಾನವನ್ನು ಕಳೆದುಕೊಳ್ಳಬೇಕಾಗುತ್ತದೆ. ಈ ಪ್ರಕರಣವು ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.

ಶಾಸಕ ನಂಜೇಗೌಡ ರಿಯಾಕ್ಷನ್: “ಎಂಎಲ್ಎ ಎಂದು ಪ್ರಕಟವಾದಮೇಲೆ ನನ್ನ ವಿರುದ್ಧ ಸೋತಿರುವಂಥ ಅಭ್ಯರ್ಥಿಗೆ ಮತ ಎಣಿಕೆಯ ಮೇಲೆ ನಂಬಿಕೆ ಬಾರದೆ ಮರು ಎಣಿಕೆಗೆ ಹೋಗಿದ್ದಾರೆ. ನ್ಯಾಯಾಲಯವು ಮರು ಎಣಿಕೆಗೆ ಆದೇಶಿಸಿದೆ ನಾನು ಅದನ್ನು ಸ್ವಾಗತಿಸುತ್ತೇನೆ. ಆದರ ಕುರಿತಾಗಿ ನಾನು ಯಾವುದೇ ಚಾಲೆಂಜ್ ಮಾಡುವದಿಲ್ಲ. ನ್ಯಾಯಾಲಯ ಅಸಿಂಧು ಗೊಳಿಸಿರುವದು ಬೇಜಾರಾಗಿದೆ. ಈ ಆದೇಶವನ್ನು ಸುಪ್ರೀಂ ಕೋರ್ಟ್ ನಲ್ಲಿ ಚಾಲೆಂಜ್ ಮಾಡುತ್ತೇನೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ

Previous articleBCCI: ಭಾರತೀಯ ಕ್ರಿಕೆಟ್ ತಂಡದ ಪ್ರಾಯೋಜಕರಾಗಿ ಅಪೊಲೊ ಟೈಯರ್ಸ್
Next articleದೆಹಲಿ: ನರೇಂದ್ರ ಮೋದಿ ಜನ್ಮದಿನಕ್ಕಾಗಿ ವಿಶೇಷ ಗೀತೆ ಬಿಡುಗಡೆ

LEAVE A REPLY

Please enter your comment!
Please enter your name here