ಕಲಬುರಗಿ: ಕಳೆದ ವಾರದಿಂದ ಎಡಬಿಡದೆ ಸುರಿಯುತ್ತಿರುವ ಮಳೆಗೆ ಕಲ್ಯಾಣ ನಾಡಿನ ರೈತರು ಕಂಗಾಲಾಗಿದ್ದಾರೆ.
ಕಳೆದ ಬುಧವಾರ ರಾತ್ರಿಯಿಂದ ನಿರಂತರವಾಗಿ ಬೀಳುತ್ತಿರುವ ಮಳೆ ಜಿಲ್ಲೆಯಾದ್ಯಂತ ಅವಾಂತರ ಸೃಷ್ಟಿಸಿದೆ. ಸದಾ ಸುರಿಯುತ್ತಿರುವ ಮಳೆಯ ಕಾರಣದಿಂದಾಗಿ ಜನರು ಮನೆಯಿಂದ ಹೊರಗೆ ಬಾರದಂತೆ ದಿಗ್ಬಂಧನ ಹೇರಿದಂತಾಗಿದೆ. ಕೃಷಿಕಾರ್ಯವಂತೂ ಸಂಪೂರ್ಣ ಸ್ಥಗಿತಗೊಂಡಿದೆ. ದೈನಂದಿನ ಕೆಲಸಗಳಿಗೂ ಮಳೆ ಕಿರಿಕಿರಿಉಂಟು ಮಾಡುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಮಹಾರಾಷ್ಟ್ರದ ವೀರ್, ಉಜನಿ, ಸಿನಾ ಜಲಾಶಯ ಮತ್ತು ಬೋರಿ ನದಿಯಿಂದ ಅಪಾರ ಪ್ರಮಾಣದ ನೀರು ಭೀಮಾ ನದಿಗೆ ಹರಿಬಿಟ್ಟ ಕಾರಣ ಜಿಲ್ಲೆಯಲ್ಲಿ ಪ್ರವಾಹದ ಭೀತಿ ಎದುರಾಗಿದೆ.
ಜಿಲ್ಲೆಯ ದೇವಲ ಗಾಣಗಾಪುರ-ಇಟಗಾ ಸಂಪರ್ಕ ಕಲ್ಪಿಸುವ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಸಂಗಮಕ್ಕೆ ತೆರಳುವ ಸಂಪರ್ಕ ಕಡಿತವಾಗಿದೆ. ಹಲವಾರು ದೇವಸ್ಥಾನಗಳು ಮತ್ತು ಮಠಗಳು ಮುಳುಗಡೆಯಾಗಿವೆ ಮತ್ತು ಅಪಾರ ಪ್ರಮಾಣದಲ್ಲಿ ಜಮೀನುಗಳಿಗೆ ನೀರು ನುಗ್ಗಿದೆ.
ಜಿಲ್ಲೆಯಲ್ಲಿ ಸತತ ಮಳೆಯಿದ್ದು ಹವಾಮಾನ ಇಲಾಖೆಯು ಮುಂದಿನ ಎರಡ್ಮೂರು ದಿನ ಇಲ್ಲಿ ಆರೆಂಜ್ ಅಲರ್ಟ್ ಮತ್ತು ಮಹಾರಾಷ್ಟ್ರದ ಭೀಮಾ ಪ್ರದೇಶದಲ್ಲಿ ರೆಡ್ ಅಲರ್ಟ್ ಘೋಷಿಸಿದ್ದು, ಇನ್ನು ಹೆಚ್ಚಿನ ಪ್ರಮಾಣದ ನೀರು ಭೀಮೆಗೆ ಬರುವ ಸಾಧ್ಯತೆ ಇದೆ.
ಮಹಾರಾಷ್ಟ್ರದ ಜಲಾಶಯದಿಂದ ಅಪಾರ ಪ್ರಮಾಣದ ನೀರು ಭೀಮಾ ನದಿಗೆ ಹರಿಬಿಟ್ಟ ಪರಿಣಾಮ ಇಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಇದನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಸ್ಥಳದಲ್ಲಿ ಠಿಕಾಣಿ ಹೂಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ತಂಡ ಸಹ ನಿಯೋಜಿಸಲಾಗಿದೆ.