ರೈಲುಗಳಲ್ಲಿ ಮಹಿಳೆಯರಿಗೆ ‘ಮೇರಿ ಸಹೇಲಿ’ ವರದಾನ

0
74

ಹರ್ಷ ಕುಲಕರ್ಣಿ

ರೈಲುಗಳಲ್ಲಿ ದೂರದ ಊರುಗಳಿಗೆ ಏಕಾಂಗಿಯಾಗಿ ಪ್ರಯಾಣಿಸುವ ಮಹಿಳೆಯರ ರಕ್ಷಣೆ ಹಾಗೂ ಅವರನ್ನು ಸುರಕ್ಷಿತವಾಗಿ ತಲುಪಿಸುವ ಉದ್ದೇಶದಿಂದ ಆರಂಭವಾದ ‘ಆಪರೇಷನ್ ಮೇರಿ ಸಹೇಲಿ’ ಯೋಜನೆ ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಯಶಸ್ಸು ಕಂಡಿದೆ.

ಒಂಟಿಯಾಗಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ರೈಲ್ವೆ ರಕ್ಷಣಾ ದಳದ (ಆರ್‌ಪಿಎಫ್) 2020ರ ನವೆಂಬರ್‌ನಲ್ಲಿ ರಚಿಸಿರುವ ಆಪರೇಷನ್‌ ಮೇರಿ ಸಹೇಲಿ, ನೈಋತ್ಯ ರೈಲ್ವೆ ವಲಯದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ.

2024-25ರ ಸಾಲಿನಲ್ಲಿ 7,075 ರೈಲುಗಳಲ್ಲಿ ಪ್ರಯಾಣಿಸುತ್ತಿದ್ದ 2,84,156 ಒಂಟಿ ಮಹಿಳೆಯರನ್ನು ಗುರುತಿಸಿ, ಅವರೊಂದಿಗೆ ಸಂವಾದ ನಡೆಸಿದೆ. ಪ್ರಯಾಣದುದ್ದಕ್ಕೂ ಅವರಿಗೆ ಸುರಕ್ಷತೆ ನೀಡಿದ್ದಲ್ಲದೆ, ಮನೆ ತಲುಪಿದ ಮಾಹಿತಿಯ ಪಡೆದುಕೊಳ್ಳಲಾಗುತ್ತಿದೆ.

ಆಪರೇಷನ್ ಮೇರಿ ಸಹೇಲಿ ತಂಡ ಮಹಿಳೆ ಇರುವ ಬೋಗಿಗೆ ತೆರಳಿ, ಅವರೊಂದಿಗೆ ಸಂವಾದ ನಡೆಸುತ್ತದೆ. ಮಹಿಳೆಯರು ಇಳಿಯಬೇಕಿದ್ದ ನಿಲ್ದಾಣಗಳಲ್ಲಿ ಆರ್‌ಪಿಎಫ್ ತಂಡಕ್ಕೆ ಮಾಹಿತಿ ನೀಡಿ, ಅವರು ವಾಹನ ಹತ್ತುವವರೆಗೂ ಬೆನ್ನೆಲುಬಾಗಿ ನಿಲ್ಲುತ್ತದೆ.

2020 ನವೆಂಬರ್‌ನಲ್ಲಿ ನಡೆಸಿದ ಪ್ರಾಯೋಗಿಕ ಕಾರ್ಯಾಚರಣೆ ಸಂದರ್ಭದಲ್ಲಿ 32 ರೈಲುಗಳನ್ನು ಗುರುತಿಸಲಾಗಿತ್ತು. ಆಗ ಇದಕ್ಕಾಗಿ 10 ತಂಡಗಳನ್ನು ರಚಿಸಿ, 72 ಆರ್‌ಪಿಎಫ್ ಸಿಬ್ಬಂದಿ ನಿಯೋಜಿಸಲಾಗಿದೆ.

ಇನ್ನೂ ಹಲವು ಯೋಜನೆ: ಪ್ರಯಾಣದ ಸಂದರ್ಭದಲ್ಲಿ ತೊಂದರೆಗೀಡಾಗಿದ್ದ ಅಥವಾ ಯಾತನೆಗೆ ಒಳಗಾದ 66 ಪ್ರಯಾಣಿಕರಿಗೆ (44 ಪುರುಷರು. 24 ಮಹಿಳೆಯರು) ಆಪರೇಷನ್ ಡಿಗ್ನಿಟಿ ಅಡಿ ಸಹಾಯ ಒದಗಿಸಲಾಗಿದೆ.

ಪ್ರಯಾಣದ ಸಮಯದಲ್ಲಿ ಲ್ಯಾಪ್‌ಟಾಪ್, ಮೊಬೈಲ್, ಚಿನ್ನ ಅಥವಾ ಬೆಳ್ಳಿ ಆಭರಣಗಳನ್ನು ಕಳೆದುಕೊಂಡ 660 ಪ್ರಯಾಣಿಕರಿಗೆ ಆಪರೇಷನ್ ಅಮಾನತ್ ಅಡಿ ಅಂದಾಜು 1.99 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಮರಳಿಸಲಾಗಿದೆ. ಆಪರೇಷನ್ ಸಂರಕ್ಷಕ, ಆಪರೇಷನ್ ಜೀವನ್ ರಕ್ಷಾ ಹೀಗೆ ವಿವಿಧ ಯೋಜನೆಗಳಡಿ ರೈಲ್ವೆ ಇಲಾಖೆ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡುತ್ತಿದೆ.

ಈ ಕುರಿತು ನೈಋತ್ಯ ರೈಲ್ವೆ ವಲಯ ಸಿಪಿಆರ್‌ಒ ಡಾ.ಮಂಜುನಾಥ ಕನಮಡಿ ಮಾತನಾಡಿ, “ಪ್ರಯಾಣಿಕರ ಸುರಕ್ಷತೆಗೆ ರೈಲ್ವೆ ಇಲಾಖೆ ಆದ್ಯತೆ ನೀಡಿದೆ. ಒಂಟಿ ಮಹಿಳೆಯರು ಪ್ರಯಾಣಿಸುತ್ತಿದ್ದರೆ ಅವರಿಗೆ ಅಗತ್ಯ ನೆರವು ನೀಡುವುದಷ್ಟೇ ಅಲ್ಲದೇ, ವೃದ್ಧ ಪ್ರಯಾಣಿಕರಿಗೂ ನೆರವು ನೀಡುತ್ತಿದ್ದೇವೆ” ಎಂದು ಹೇಳಿದ್ದಾರೆ.

Previous articleಉಪರಾಷ್ಟ್ರಪತಿ ಚುನಾವಣೆ 2025: ಮೋದಿ ಮತದಾನ
Next articleಧಾರವಾಡ: ಇಬ್ಬರ ಗುದ್ದಾಟದಲ್ಲಿ ವಿವಿ ಆಡಳಿತ ವ್ಯವಸ್ಥೆ ಅತಂತ್ರ!

LEAVE A REPLY

Please enter your comment!
Please enter your name here