ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯ ಹಾಗೂ ಸುರಕ್ಷತೆ ದೃಷ್ಟಿಯಿಂದ ಆಗಸ್ಟ್ 20ರಂದು ಜಿಲ್ಲೆಯ ಎಲ್ಲ ಅಂಗನವಾಡಿ ಕೆಂದ್ರಗಳಿಗೆ, ಪ್ರಾಥಮಿಕ ಶಾಲೆಗಳಿಗೆ, ಪ್ರೌಢಶಾಲೆಗಳಿಗೆ ಮತ್ತು ಪದವಿ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯಗಳಿಗೆ ಒಂದು ದಿನದ ರಜೆ ಘೋಷಿಸಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಆದೇಶ ಹೊರಡಿಸಿದ್ದಾರೆ.
ಮಳೆ ಹಿನ್ನೆಲೆಯಲ್ಲಿ ಆ. 19ರಂದು ರಜೆ ಘೋಷಿಸಲಾಗಿತ್ತು. ಮಳೆ ನಿರಂತರ ಸುರಿಯುತ್ತಿರುವುದರಿಂದ ಇನ್ನೊಂದು ದಿನ ರಜೆ ಮುಂದುವರೆಸಲಾಗಿದೆ. ಆಗಸ್ಟ್ 20ರ ರಜಾ ದಿನವನ್ನು ಮುಂದಿನ ಸಾರ್ವತ್ರಿಕ ರಜಾ ದಿನಗಳಲ್ಲಿ ವರ್ಗಗಳನ್ನು ನಡೆಸುವ ಮೂಲಕ ಹೊಂದಾಣಿಕೆ ಮಾಡಲು ಸಂಬಂಧಿಸಿದ ಇಲಾಖೆ ಮುಖ್ಯಸ್ಥರಿಗೆ ಆದೇಶದಲ್ಲಿ ನಿರ್ದೇಶಿಸಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿಯೂ ರಜೆ ಘೋಷಣೆ: ಬೆಳಗಾವಿ ಜಿಲ್ಲೆಯ ಅಂಗನವಾಡಿ, ಶಾಲಾ ಹಾಗೂ ಪಿಯು ಕಾಲೇಜಿಗೆ ರಜೆ ನೀಡಲಾಗುತ್ತಿದೆ. ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಆಗಸ್ಟ್ 20ರಂದು ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಹಾವೇರಿ ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ: ಹಾವೇರಿ ಜಿಲ್ಲೆಯಲ್ಲಿ ನಿರಂತರ ಮಳೆ, ಶೀತ ಗಾಳಿ ಬೀಸುತ್ತಿರುವ ಹಿನ್ನಲೆಯಲ್ಲಿ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ರಜೆ ಹಾವೇರಿ ಜಿಲ್ಲಾಧಿಕಾರಿ ವಿಜಯ್ ಮಹಾಂತೇಶ್ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಬಾಗಲಕೋಟೆ: ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಬಾಗಲಕೋಟೆ ಜಿಲ್ಲೆಯಾದ್ಯಂತ ಆಗಸ್ಟ್ 20ರಂದು ಅಂಗನವಾಡಿ, ಶಾಲಾ-ಕಾಲೇಜು ಮುಂತಾದ ಶೈಕ್ಷಣಿಕ ಸಂಸ್ಥೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿಯ ಅಧ್ಯಕ್ಷ ಎಂ. ಸಂಗಪ್ಪ ಆದೇಶ ಹೊರಡಿಸಿದ್ದಾರೆ.
ಕಾರವಾರ: ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆ ಮತ್ತು ಆರೆಂಜ್ ಅಲರ್ಟ್ ಘೋಷಣೆಯ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಆಗಸ್ಟ್ 20ರಂದು ಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀ ಪ್ರಿಯಾ ಅವರು ಆದೇಶಿಸಿದ್ದಾರೆ. ಈ ಆದೇಶವು ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ದಾಂಡೇಲಿ ಮತ್ತು ಜೋಯಿಡಾ ತಾಲೂಕುಗಳಿಗೆ ಮಾತ್ರ ಅನ್ವಯಿಸುತ್ತದೆ. ಈ ಪ್ರದೇಶಗಳಲ್ಲಿನ ಅಂಗನವಾಡಿಗಳು, ಪ್ರಾಥಮಿಕ, ಪ್ರೌಢ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ರಜೆ ಇರಲಿದೆ.
ದಕ್ಷಿಣ ಕನ್ನಡ, ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಂಭವವಿದೆ ಎಂದು ಹೇಳಲಾಗಿದ್ದು, ಈ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.
ಮನೆಯಿಂದ ಹೊರಬರಲು ಹಿಂದೇಟು: ಕಳೆದೆರಡು ದಿನಗಳಿಂದ ರಾತಿ ಪೂರ್ತಿ ಮಳೆಯಾಗುತ್ತಿದೆ. ಧಾರವಾಡದ ವಾತಾವರಣ ಪೂರ್ತಿ ಬದಲಾಗಿದ್ದು, ಮಲೆನಾಡಂತಾಗಿದೆ. ಅತೀವ ಥಂಡಿ ವಾತಾವರಣ ನಿರ್ಮಾಣವಾಗಿದೆ. ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುವಂತಾಗಿದೆ. ವಿವಿಧ ಕೆಲಸ ಕಾರ್ಯಕ್ಕೆ ಸರ್ಕಾರಿ ಕಚೇರಿಗಳಿಗೆ ಹಾಗೂ ಸಂತೆಗೆ ಹೋಗಬೇಕೆನ್ನುವರು ಮಳೆ ಉಪಟಳದಿಂದ ಬೇಸತ್ತು ಕೆಲವರು ಮನೆಯಲ್ಲೇ ಉಳಿತುಕೊಳ್ಳುವಂತಾಗಿದೆ. ಕೆಲವರು ಅನಿವಾರ್ಯ ಕೆಲಸ ದಿಂದ ಮಳೆ ಲೆಕ್ಕಿಸದೇ ಛತ್ರಿ, ಜರ್ಕಿನ್, ರೇನ್ಕೋಟ್ ಹಾಕಿಕೊಂಡು ಜನರು ಸಂಚರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿದೆ.
ವಾಡಿಕೆಗಿಂತ ಹೆಚ್ಚಿನ ಮಳೆ: ಹವಾಮಾನ ಇಲಾಖೆ ಅಂಕಿ-ಅಂಶಗಳ ಪ್ರಕಾರ ಧಾರವಾಡ ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ 2.9 ಮಿಮೀ ವಾಡಿಕೆ ಮಳೆ ಪೈಕಿ 12 ಮಿಮೀ ಆಗಿದೆ. ಧಾರವಾಡದಲ್ಲಿ 2.3 ಮಿಮೀ ಪೈಕಿ 12.3 ಮಿಮೀ, ಹುಬ್ಬಳ್ಳಿಯಲ್ಲಿ 2.6 ಪೈಕಿ 9 ಮಿಮೀ, ಕಲಘಟಗಿಯಲ್ಲಿ 24.4. ಮಿಮೀ, ಕುಂದಗೋಳದಲ್ಲಿ 11.7 ಮಿಮೀ, ನವಲಗುಂದದಲ್ಲಿ 5.3 ಮಿಮೀ, ಹುಬ್ಬಳ್ಳಿ ನಗರದಲ್ಲಿ 5.2 ಮಿಮೀ, ಅಳ್ನಾವರದಲ್ಲಿ 26.2 ಹಾಗೂ ಅಣ್ಣಿಗೇರಿಯಲ್ಲಿ 5.2 ಮಿಮೀ ಮಳೆಯಾಗಿದೆ. ಒಟ್ಟಾರೆ ಜಿಲ್ಲೆಯ ಎಲ್ಲ ಪ್ರದೇಶದಲ್ಲಿ ವಾಡಿಕೆಗಿಂತ ಹೆಚ್ಚಾಗಿಯೇ ಮಳೆಯಾಗಿದೆ. ಮಳೆ ಜತೆಗೆ ಶೀತ ಗಾಳಿ ಜನರನ್ನು ಮೆತ್ತಗಾಗಿಸಿದೆ.
ಮಳೆಗೆ ಹುಬ್ಬಳ್ಳಿಯಲ್ಲಿ 11 ಮನೆ ಕುಸಿತ: ಹುಬ್ಬಳ್ಳಿಯಲ್ಲಿ ಸತತ ಮಳೆಯಿಂದ ಮಹಾನಗರ ವ್ಯಾಪ್ತಿಯ ವಿವಿಧ ಬಡಾವಣೆ ಗಳಲ್ಲಿ ಒಟ್ಟು 11 ಮನೆಗಳು ಧರೆಗುರುಳಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಹುಬ್ಬಳ್ಳಿ ತಹಸೀಲ್ದಾರ್ ಮಹೇಶ ಗಸ್ತೆ ತಿಳಿಸಿದ್ದಾರೆ.
ಹಳೇ ಹುಬ್ಬಳ್ಳಿ ಭಾಗದಲ್ಲಿ 7 ಮನೆಗಳು, ಗೋಕುಲ ಎಂಟಿಎಸ್ ಕಾಲನಿಯಲ್ಲಿ 2 ಹಾಗೂ ಗಾಮನಗಟ್ಟಿ, ಕೇಶ್ವಾಪುರದಲ್ಲಿ ತಲಾ ಒಂದು ಕಡೆ ಮನೆಗಳು ಬಿದ್ದಿವೆ. ನಿರಂತರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಮಣ್ಣಿನ ಮನೆಗಳಲ್ಲಿ ವಾಸವಾಗಿರುವವರು ಮುನ್ನೆಚ್ಚರಿಕೆ ವಹಿಸಬೇಕು. ಮನೆ ಬೀಳುವಂತಹ ಸ್ಥಿತಿಯಲ್ಲಿದ್ದರೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರವಾಗಬೇಕು ಎಂದು ಜಿಲ್ಲಾಡಳಿತ ತಿಳಿಸಿದೆ.