ಹುಬ್ಬಳ್ಳಿ: ನೂರು ದಿನಗಳಲ್ಲಿ ಪಾಲಿಕೆ ಆಸ್ತಿ ಗುರುತು ಮಾಡಿ – ಮೇಯರ್‌

0
73

ಧಾರವಾಡ: ಹು-ಧಾ ಅವಳಿ ನಗರದಲ್ಲಿ ಮಹಾನಗರ ಪಾಲಿಕೆ ಒಡೆತನದ ಆಸ್ತಿಗಳು ಎಷ್ಟಿದೆ. ಯರ‍್ಯಾರು ಅದರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವುದನ್ನು ಉಪಮಹಾಪೌರರ ಅಧ್ಯಕ್ಷತೆಯಲ್ಲಿ ಉಪಸಮಿತಿ ರಚಿಸಿ ನೂರು ದಿನಗಳಲ್ಲಿ ಪಾಲಿಕೆಗೆ ಸಮಿತಿ ವರದಿ ಸಲ್ಲಿಸಬೇಕು ಎಂದು ಮಹಾಪೌರ ಜ್ಯೋತಿ ಪಾಟೀಲ ಆದೇಶಿಸಿದರು.

ಹು-ಧಾ ಮಹಾನಗರ ಪಾಲಿಕೆಯ ಅಮೃತ ಮಹೋತ್ಸವ ಸಭಾಭವನದಲ್ಲಿ ಶುಕ್ರವಾರ ನಡೆದ ಹು-ಧಾ ಮಹಾನಗರ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಬಂದ ವಿಷಯಕ್ಕೆ ಉತ್ತರಿಸುತ್ತ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಪಾಲಿಕೆಯ ಜಾಗೆಗಳನ್ನು ವಸತಿ, ವಾಣಿಜ್ಯ ಹಾಗೂ ಇತರೆ ಉದ್ದೇಶಕ್ಕಾಗಿ ಭೂಬಾಡಿಗೆಯಿಂದ ನೀಡಲಾಗಿದ್ದು, ಇದರಲ್ಲಿ ಸಾಕಷ್ಟು ಜನರು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಮೇಲಿಂದ ಮೇಲೆ ಕೇಳಿಬರುತ್ತಿದೆ. ಅದಕ್ಕಾಗಿ ಸದಸ್ಯರ ಒತ್ತಾಯದ ಮೇರೆಗೆ ಉಪಸಮಿತಿಯನ್ನು ಉಪಮಹಾಪೌರರ ಅಧ್ಯಕ್ಷತೆಯಲ್ಲಿ ರಚಿಸಿ ಅದಕ್ಕೆ ನೂರು ದಿನಗಳ ಗಡುವು ನೀಡಲಾಗುವುದು ಎಂದರು.

ಸಭಾನಾಯಕ ಈರೇಶ ಅಂಚಟಗೇರಿ ಮಾತನಾಡಿ, ಇಲ್ಲಿಯ ರಿಗಲ್ ವೃತ್ತದಲ್ಲಿ ಮಹಾನಗರ ಪಾಲಿಕೆ ಒಡೆತನದ ಜಾಗೆಯಲ್ಲಿಯೇ ಓರ್ವ ವ್ಯಾಪಾರಿ ವಾಣಿಜ್ಯ ಮಳಿಗೆ ನಿರ್ಮಿಸಿ ಬಾಡಿಗೆ ನೀಡಿ ಈಗ ಮುಂಬೈಗೆ ಹೋಗಿ ನೆಲೆಸಿದ್ದಾನೆ. ಇದೇ ರೀತಿಯಲ್ಲಿ ಸಾಕಷ್ಟು ಜಾಗೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಇದರ ಸಂಪೂರ್ಣ ಸರ್ವೇ ಆಗಬೇಕು. ಇದಾದ ಬಳಿಕವೇ ಭೂಬಾಡಿಗೆ ವಸೂಲಿ ಸೇರಿದಂತೆ ಇತರೆ ಚರ್ಚೆಗಳನ್ನು ಮಾಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಸರ್ವ ಸದಸ್ಯರು ಪಕ್ಷಾತೀತವಾಗಿ ಬೆಂಬಲಿಸಿದ ಹಿನ್ನೆಲೆಯಲ್ಲಿ ಮಹಾಪೌರರು ಉಪಸಮಿತಿ ರಚನೆಗೆ ಹಸಿರು ನಿಶಾನೆ ತೋರಿಸಿದರು.

ನೀರಸಾಗರ ನಿರ್ವಹಣೆ ಗೊಂದಲ: ಕಲಘಟಗಿ ತಾಲೂಕಿನ ದುಮ್ಮವಾಡದ ನೀರಸಾಗರ ಕೆರೆಯ ನಿರ್ವಹಣೆ ಮಹಾನಗರ ಪಾಲಿಕೆ ತೆಗೆದುಕೊಳ್ಳುವ ವಿಷಯ ಚರ್ಚೆಗೆ ಬಂದಾಗ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸದಸ್ಯರು, ಈಗಾಗಲೇ ಜಲಮಂಡಳಿ ಅದರ ನಿರ್ವಹಣೆ ಹೆಸರಿನಲ್ಲಿ ಬಿಲ್ ತೆಗೆದಿದೆ, ಇತ್ತ ಸಣ್ಣ ನೀರಾವರಿ ಇಲಾಖೆಯೂ ಬಿಲ್ ತೆಗೆದಿದೆ. ಇದು ಜಲಮಂಡಳಿ ಸುಪರ್ದಿಗೆ ಬರುತ್ತಿದ್ದು, ಸದ್ಯ ಮಹಾನಗರ ಪಾಲಿಕೆ ನಿರ್ವಹಣೆ ಜವಾಬ್ದಾರಿ ತೆಗೆದುಕೊಳ್ಳಲು ಹೊರಟಿರುವುದು ಸರಿಯಲ್ಲ ಎಂದು ಸಭಾನಾಯಕ ಈರೇಶ ಅಂಚಟಗೇರಿ ಆಗ್ರಹಿಸಿದರು.

ಇದಕ್ಕೆ ಸಾಥ್ ನೀಡಿದ ಸದಸ್ಯ ತಿಪ್ಪಣ್ಣ ಮಜ್ಜಗಿ, ಈಗ ಅದು ಜಲಮಂಡಳಿ ಅಡಿಯಲ್ಲಿ ಬರುತ್ತಿದ್ದು, ಮೊದಲು ನೀರಸಾಗರ ಕೆರೆಯನ್ನು ಮಹಾನಗರ ಪಾಲಿಕೆ ವ್ಯಾಪ್ತಿಗೆ ಪಡೆದುಕೊಳ್ಳಲಿ. ಇದಾದ ಬಳಿಕ ಅದರ ನಿರ್ವಹಣೆ ಬಗೆಗೆ ಚರ್ಚೆ ಮಾಡೋಣ. ವಿನಾಕಾರಣ ಅದರ ನಿರ್ವಹಣೆ ಮಾಡಬೇಕು ಎಂದರೆ ಆಗದು ಎಂದಾಗ ಸದಸ್ಯರು ಇದಕ್ಕೆ ಬೆಂಬಲ ವ್ಯಕ್ತಪಡಿಸಿದರು. ಇದರ ಕುರಿತು ಕ್ರಮ ಕೈಗೊಂಡ ಬಳಿಕ ಮುಂದಿನ ದಿನಗಳಲ್ಲಿ ನಿರ್ವಹಣೆ ಜವಾಬ್ದಾರಿ ನೋಡೋಣ ಎಂದು ಮಹಾಪೌರರು ಸೂಚಿಸಿದರು.

ಅನಧಿಕೃತ ಅಂಗಡಿ ಬಂದ್ ಮಾಡಿ: ಹು-ಧಾ ಅವಳಿ ನಗರದಲ್ಲಿ ಮಹಾನಗರ ಪಾಲಿಕೆಯಿಂದ ಅನುಮತಿ ಪಡೆಯದೇ ನಡೆಸಲಾಗುತ್ತಿರುವ ಮಾಂಸದ ಅಂಗಡಿ ಮತ್ತು ವಧಾಲಯಗಳನ್ನು ಕೂಡಲೇ ಬಂದ್ ಮಾಡುವಂತೆ ಮಹಾಪೌರ ಜ್ಯೋತಿ ಪಾಟೀಲ ಅಧಿಕಾರಿಗಳಿಗೆ ಖಡಕ್ ಸಂದೇಶ ನೀಡಿದರು. ಸದಸ್ಯ ಶಂಕರ ಶೇಳಕೆ ವಿಷಯ ಪ್ರಸ್ತಾಪಿಸುತ್ತ, ಇಲ್ಲಿಯ ಶ್ರೀರಾಮ ಮಂದಿರದಿಂದ ಮಣಕಿಲ್ಲಾವರೆಗೆ ಸಾಕಷ್ಟು ವಧಾಲಯ ಇವೆ. ಇದಕ್ಕೆ ಹೇಳುವವರೇ ಇಲ್ಲದಾಗಿದೆ. ಅಲ್ಲದೇ ಗೋವುಗಳನ್ನು ಇಲ್ಲಿ ಕತ್ತರಿಸಲಾಗುತ್ತಿದೆ. ಅಧಿಕಾರಿಗಳಿಗೆ ಗೊತ್ತಿದ್ದರೂ ಸುಮ್ಮನಿರುವುದು ನೋವಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈಗಾಗಲೇ ಶಿವಾಜಿ ವೃತ್ತದಲ್ಲಿ ಮೊನ್ನೆ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಗೋವುಗಳನ್ನು ಕತ್ತರಿಸಲು ತಂದಿದ್ದ ಅಂಗಡಿಕಾರರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಪೊಲೀಸ್ ಇಲಾಖೆಯೂ ತನಿಖೆ ನಡೆಸುತ್ತಿದೆ ಎಂದು ಅಧಿಕಾರಿಗಳು ಸಭೆಗೆ ಉತ್ತರಿಸಿದರು. ಈ ಹಿಂದೆ ಜಿಲ್ಲಾಡಳಿತ ವಧಾಲಯಗಳಿಗೆ ಜಾಗೆ ನಿಗದಿಪಡಿಸಿತ್ತು. ಅಲ್ಲಿ ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಮಹಾಪೌರರು ಅಧಿಕಾರಿಗಳಿಗೆ ಸೂಚಿಸಿದರು.

Previous articleSIT ರಚಿಸಿದ ಸರ್ಕಾರಕ್ಕೆ ಆಭಾರಿ – ಸತ್ಯ ಹೊರಬರುತ್ತಿದೆ: ವೀರೇಂದ್ರ ಹೆಗ್ಗಡೆ
Next articleಸಿನಿಮಾ ಟಿಕೆಟ್ ಮೇಲೆ ಶೇ. 2ರಷ್ಟು ಸೆಸ್: ಏನಿದು ರಾಜ್ಯ ಸರ್ಕಾರದ  ನಿರ್ಧಾರ!

LEAVE A REPLY

Please enter your comment!
Please enter your name here