ಮಂಗಳೂರು: ಹಿರಿಯ ಸಾಹಿತಿ ಎಸ್. ಎಲ್. ಭೈರಪ್ಪರಿಗೂ ದಕ್ಷಿಣ ಕನ್ನಡಕ್ಕೂ ಅವಿನಾಭವ ಸಂಬಂಧ. ಜಿಲ್ಲೆಯಲ್ಲಿ ನಡೆದ ಹಲವು ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಿದ್ದಾರೆ. 2016ರಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯದ ೩೪ನೇ ವಾರ್ಷಿಕ ಘಟಿಕೋತ್ಸವದಲ್ಲಿ ಭೈರಪ್ಪರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನಿಸಲಾಗಿತ್ತು.
ಬೈರಪ್ಪನವರು ಕೊನೆ ಸಲ ಮಂಗಳೂರಿಗೆ ಬಂದಿರುವುದು ಈ ವರ್ಷದ ಜನವರಿ 11ರಂದು ಭಾರತ್ ಫೌಂಡೇಶನ್ ವತಿಯಿಂದ ಆಯೋಜಿಸಲಾದ ಮಂಗಳೂರು ಸಾಹಿತ್ಯೋತ್ಸವದ ಏಳನೇ ಆವೃತ್ತಿಗೆ ನಗರದ ಡಾ. ಟಿ. ಎಂ. ಎ. ಪೈ ಇಂಟರ್ ನ್ಯಾಷನಲ್ ಕನ್ವೆನ್ಸನ್ ಸೆಂಟರ್‌ನಲ್ಲಿ ಭೃರಪ್ಪ ಚಾಲನೆ ನೀಡಿದ್ದರು.
ಈ ಸಂದರ್ಭ ಮಾತನಾಡಿದ ಅವರು, ‘ನನ್ನನ್ನು ಮಂಗಳೂರು ಲಿಟ್ ಫೆಸ್ಟ್‌ಗೆ ಆಹ್ವಾನಿಸಿದ ವೇಳೆ, ಸರ್ ನೇರವಾಗಿ ಮಾತನಾಡಿದರೆ ಎಲ್ಲೆಲ್ಲೊ ಹೋಗುವ ಸಾಧ್ಯತೆಯಿದೆ. ಅದಕ್ಕೆ ನಿಮ್ಮ ಭಾಷಣ ಬರೆದುಕೊಂಡು ಬಂದು ಓದಿ ಅಂತ ಹೇಳಿದ್ದರು. ಹಾಗಾಗಿ ನಾನು ಈಗ ಬರೆದುಕೊಂಡು ಬಂದ ಭಾಷಣ ಓದುತ್ತೇನೆ ಎಂದು ಹೇಳುವ ಮೂಲಕ ಮಾತು ಆರಂಭಿಸಿದ್ದರು.
ಶಿಕ್ಷಣ ಕ್ಷೇತ್ರ, ವೈದ್ಯಕೀಯ ಕ್ಷೇತ್ರದಲ್ಲಿ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ಇಡೀ ದೇಶಕ್ಕೆ ಮಾದರಿಯಾಗಿದೆ. ಈ ಭೂಮಿ ಕನ್ನಡ ನಾಡಿಗೆ ಅನೇಕ ವೈದ್ಯರು, ಶಿಕ್ಷಕರು ಸೇರಿದಂತೆ ಕೋಟ ಶಿವರಾಮ ಕಾರಂತ, ರಾಷ್ಟ್ರಕವಿ ಗೋವಿಂದ ಪೈ, ಪಂಜೆ ಮಂಗೇಶರಾಯರು, ಸೇಡಿಯಾಪು, ವ್ಯಾಸರಾಯ ಬಲ್ಲಾಳರಂತಹ ಹೆಸರಾಂತ ಸಾಹಿತಿಗಳನ್ನು ನೀಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.