ಬಂಡೀಪುರ: ಸಂಜೆ 6 ಗಂಟೆ ನಂತರ ಲಾರಿ ಸಂಚಾರ ನಿಷೇಧಕ್ಕೆ ಚಿಂತನೆ

0
47

ಚಾಮರಾಜನಗರ: ಬಂಡೀಪುರ ಕಾಡಾನೆ ಉಪಟಳದ ಬಳಿಕ ಮತ್ತೆ ಸುದ್ದಿಯಲ್ಲಿದೆ. ಈಗ ಚಾಮರಾಜನಗರ ಜಿಲ್ಲಾಧಿಕಾರಿಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಪತ್ರವೊಂದನ್ನು ಬರೆದಿದ್ದಾರೆ. ಬಂಡೀಪುರ-ತಮಿಳುನಾಡು ಸಂಪರ್ಕ ರಸ್ತೆಯಲ್ಲಿ ರಾತ್ರಿ ವೇಳೆ ಕಾಡಾನೆ ಉಪಟಳ ಹೆಚ್ಚಿದ್ದು, ತರಕಾರಿ ಸಾಗಣೆ ಲಾರಿಗಳನ್ನು ಅಡ್ಡಗಟ್ಟಿ ಸಂಚಾರಕ್ಕೆ ತೊಂದರೆ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಸಂಜೆ 6 ಗಂಟೆ ನಂತರ ಲಾರಿಗಳ ಸಂಚಾರಕ್ಕೆ ನಿಷೇಧ ಹೇರುವ ಕುರಿತು ಅರಣ್ಯ ಇಲಾಖೆ ಚಿಂತನೆ ನಡೆಸಿದೆ.

ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯದ ಮೂಲಕ ತಮಿಳುನಾಡು ಹಾಗೂ ಕೇರಳ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿದೆ. ಈ ಮಧ್ಯೆ ಬಂಡೀಪುರದಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ-766ರಲ್ಲಿ ರಾತ್ರಿ ವೇಳೆಯಲ್ಲಿ ಸಾಗುವ ಹಣ್ಣು, ತರಕಾರಿ ಲಾರಿಗಳನ್ನು ಗುರಿಯಾಗಿಸಿ ಕಾಡಾನೆಯೊಂದು ದಾಳಿ ನಡೆಸುತ್ತಿದೆ.

ದಾಳಿ ತಡೆಯಲು ಇಲಾಖೆ ಸಿಬ್ಬಂದಿ ಅರಣ್ಯದೊಳಗೆ ಓಡಿಸಿದರೂ ಒಂದಷ್ಟು ದೂರ ಅಥವಾ ಹಿಂದಕ್ಕೆ ಸಾಗಿ ಇನ್ನೊಂದು ಜಾಗದಲ್ಲಿ ರಸ್ತೆಗೆ ಬಂದು ಲಾರಿಗಳನ್ನು ತಡೆಯಲು ನಿಲ್ಲುವ ಮೂಲಕ ಆತಂಕ ಸೃಷ್ಟಿಸುತ್ತಿದೆ. ಕೆಲವು ದಿನಗಳ ಹಿಂದೆ ಕಾಡಾನೆ ಹಣ್ಣು, ತರಕಾರಿ ಲಾರಿ ಅಡ್ಡಗಟ್ಟಿ ನಿಲ್ಲಿಸಿ ಮೂಟೆಗಳನ್ನು ಕೆಳಗೆ ಬೀಳಿಸಿಕೊಂಡು ತಿನ್ನುವ ಪ್ರಯತ್ನವನ್ನು ಕೂಡ ನಡೆಸಿದೆ. ಈ ಸಂದರ್ಭದಲ್ಲಿ ಚಾಲಕರು ಹಿಂದೆ ಬರುವ ವಾಹನ ಚಾಲಕರು ವಿಚಲಿತರಾಗಿದ್ದಾರೆ.

ಆ.3ರಂದು ಫೋಟೋ ತೆಗೆದುಕೊಳ್ಳಲು ಕಾರಿನಿಂದ ಕೆಳಗಿಳಿದಿದ್ದ ನಂಜನಗೂಡಿನ ಬಸವರಾಜು ಎಂಬ ವ್ಯಕ್ತಿ ಮೇಲೆ ಕಾಡಾನೆ ಸಿಟ್ಟಿಗೆದ್ದು ಅಟ್ಟಾಡಿಸಿತ್ತು. ಆಯತಪ್ಪಿ ರಸ್ತೆಗೆ ಬಿದ್ದ ಇವರು ಅದೃಷ್ಟವಶಾತ್ ತುಳಿತದಿಂದ ತಪ್ಪಿಸಿಕೊಂಡರು.

ಅರಣ್ಯ ಇಲಾಖೆ ಸಿಬ್ಬಂದಿ ಸಂಜೆ ವೇಳೆ ಹೆಚ್ಚಿನ ಗಸ್ತು ತಿರುಗುವ ಮೂಲಕ ರಸ್ತೆಗೆ ಕಾಡಾನೆ ಬರದಂತೆ ತಡೆಗಟ್ಟಲು ಮುಂದಾಗಿದ್ದಾರೆ. ಜೊತೆಗೆ ಪಟಾಕಿ ಸಿಡಿಸಿ ಕಾಡಿಗಟ್ಟುವ ಪ್ರಯತ್ನವನ್ನು ಸಹ ನಡೆಸಿದ್ದಾರೆ. ಈ ಎಲ್ಲಾ ಪ್ರಯತ್ನಗಳು ವಿಫಲವಾಗುತ್ತಿರುವುದರಿಂದ ಕತ್ತಲಾದ ನಂತರ ಕಾರ್ಯಾಚರಣೆ ನಡೆಸುವುದು ಅರಣ್ಯ ಸಿಬ್ಬಂದಿಗೆ ಸವಾಲಾಗಿ ಪರಿಣಮಿಸಿದೆ.

ಸಂಜೆ ಮತ್ತು ರಾತ್ರಿ ವೇಳೆ ವಾಹನ ಸವಾರರು ಹಾಗು ತರಕಾರಿ ಲಾರಿಗಳ ಮೇಲೆ ಕಾಡಾನೆ ಪದೇ ಪದೇ ಲಗ್ಗೆಯಿಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಇಲಾಖೆ ಬಂಡೀಪುರದಲ್ಲಿ ಅಹಿತಕರ ಘಟನೆ ನಡೆಯುವುದನ್ನು ತಡೆಗಟ್ಟಬೇಕು ಎಂಬ ಉದ್ದೇಶದಿಂದ ಸಂಜೆ 6 ಗಂಟೆಯ ನಂತರ ಹಣ್ಣು ಮತ್ತು ತರಕಾರಿ ಲಾರಿಗಳ ಸಂಚಾರ ನಿಷೇಧಿಸುವ ಕುರಿತು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲು ಮುಂದಾಗಿದ್ದಾರೆ.

ಪ್ರಭಾಕರನ್, ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಮಾತನಾಡಿ, “ಬಂಡೀಪುರ-ತಮಿಳುನಾಡು ಮಾರ್ಗ ಸಂಚರಿಸುವ ಲಾರಿಗಳನ್ನು ಕಾಡಾನೆ ರಾತ್ರಿ ಅಡ್ಡಗಟ್ಟುವ ಪ್ರವೃತ್ತಿ ರೂಢಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಸಂಜೆ 6ರ ನಂತರ ಹಣ್ಣು ತರಕಾರಿ ಲಾರಿಗಳ ಸಂಚಾರ ನಿಷೇಧಿಸಲು ಜಿಲ್ಲಾಧಿಕಾರಿ ಅವರಿಗೆ ಪತ್ರ ಬರೆಯುವ ವಿಷಯ ಚರ್ಚೆಯಾಯಿತು. ಆದರೆ ಈಗ ಕಾಡಾನೆ ಕಾಣಿಸಿಕೊಂಡಿಲ್ಲ. ಆದ್ದರಿಂದ ಮತ್ತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು” ಎಂದು ಹೇಳಿದ್ದಾರೆ.

Previous articleಚಿತ್ರದುರ್ಗ: ವಿದ್ಯಾರ್ಥಿನಿ ವರ್ಷಿತಾ ಕೊಲೆ ಅಪ್‌ಡೇಟ್, ಇತರ ಕ್ರೈಂ ಸುದ್ದಿಗಳು
Next articleಉಪ ರಾಷ್ಟ್ರಪತಿ ಚುನಾವಣೆ: ಬಿ. ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

LEAVE A REPLY

Please enter your comment!
Please enter your name here