ಚಾಮರಾಜನಗರ: ವ್ಯಾಘ್ರನ ಪತ್ತೆಗೆ ಕೂಂಬಿಂಗ್ ಆರಂಭ, ರೈತರ ವಿರುದ್ಧ ದೂರು ದಾಖಲು

0
43

ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ಹುಲಿ ಸೆರೆಗೆ ಬಂಡೀಪುರ ಅರಣ್ಯಾಧಿಕಾರಿಗಳು ಕೂಂಬಿಂಗ್ ಆರಂಭಿಸಿದ್ದು, ಸಾಕಾನೆ ಮೂಲಕ ಕಾರ್ಯಾಚರಣೆಗೆ ಇಳಿದಿದ್ದಾರೆ. ಹುಲಿ ಸೆರೆ ಹಿಡಿಯಲು ಅರಣ್ಯಾಧಿಕಾರಿಗಳು ವಿಫಲರಾದ ಹಿನ್ನೆಲೆ ಆಕ್ರೋಶಗೊಂಡ ರೈತರು ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಬೋನಿನಲ್ಲಿ ಕೂಡಿ ಹಾಕಿ ಅಸಮಾಧಾನ ಹೊರ ಹಾಕಿದ್ದರು.

ಇದಕ್ಕೆ ಮಣಿದ ಎಸಿಎಫ್‌ ಸುರೇಶ್ ಹಾಗೂ ನವೀನ್ ಕುಮಾರ್ ಕೂಂಬಿಂಗ್ ನಡೆಸಿ ಹುಲಿ ಸೆರೆ ಹಿಡಿಯುವುದಾಗಿ ಭರವಸೆ ನೀಡಿದ್ದರು. ಅದರಂತೆ ಗುಂಡ್ಲುಪೇಟೆ ಬಫರ್ ಜೋನ್ ಅರಣ್ಯಾಧಿಕಾರಿಗಳು ಬುಧವಾರ ಬೆಳಗ್ಗೆಯಿಂದ ಪಾರ್ಥ ಸಾರಥಿ ಎಂಬ ಸಾಕಾನೆಯನ್ನು ಬಳಕೆ ಮಾಡಿಕೊಂಡು ಸಿಎಫ್‌ ಪ್ರಭಾಕರನ್‌ ಮಾರ್ಗದರ್ಶನ ಹಾಗೂ ಎಸಿಎಫ್ ನೇತೃತ್ವದಲ್ಲಿ ಸುಮಾರು 30ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಡಿಆ‌ರ್‌ಎಫ್‌ಓ ಶಿವಕುಮಾರ್‌ ಮಾಹಿತಿ ನೀಡಿದರು.

ಕ್ಯಾಮಾರಾ ಅಳವಡಿಕೆ: ಸಾಕಾನೆ ಬಳಕೆ ಮಾಡಿಕೊಂಡು ಬೊಮ್ಮಲಾಪುರದ ಕೆಇಬಿ ಆಸುಪಾಸು, ವಡೆಯ್ಯನಪುರ ಮತ್ತು ಬೊಮ್ಮಲಾಪುರ ಅಕ್ಕಪಕ್ಕದಲ್ಲಿ ಕೂಂಬಿಂಗ್‌ ಆರಂಭಿಸಿರುವ ಅರಣ್ಯಾಧಿಕಾರಿಗಳ ತಂಡ ಹೆಜ್ಜೆ ಗುರುತಿನ ಆಧರಿಸಿ ಕಾರ್ಯಾಚರಣೆ ನಡೆಸುತ್ತಿದೆ.

ಜೊತೆಗೆ ಪ್ರಮುಖ ಸ್ಥಳಗಳಲ್ಲಿ 10 ಕಡೆ ಕ್ಯಾಮಾರಾ ಅಳವಡಿಕೆ ಮಾಡಲಾಗುತ್ತಿದೆ. ಇನ್ನೂ ಹೆಚ್ಚುವರಿ 10 ಕ್ಯಾಮರಾ ಬಳಕೆ ಮಾಡಲು ನಿರ್ಧರಿಸಲಾಗಿದೆ ಎಂದು ಡಿಆರ್‌ಎಫ್‌ಓ ತಿಳಿಸಿದರು. ಬುಧವಾರ ಬೆಳಗ್ಗೆಯಿಂದ ಸಂಜೆವರೆಗೆ ವಿವಿಧ ಸ್ಥಳಗಳಲ್ಲಿ ಕಾರ್ಯಾಚಣೆ ನಡೆಸಿದ್ದರೂ ಕೂಡ ಹುಲಿ ಕಾಣಸಿಕ್ಕಿಲ್ಲ. ಜೊತೆಗೆ ಕ್ಯಾಮರಾ ಕಣ್ಣಿಗೂ ಕೂಡ ಹುಲಿ ಚಲನವಲನ ಬಿದ್ದಿಲ್ಲ ಎಂದು ಅರಣ್ಯ ಇಲಾಖೆ ಮೂಲಗಳಿಂದ ತಿಳಿದು ಬಂದಿದೆ.

ಐವರ ವಿರುದ್ಧ ಎಫ್‌ಐಆರ್ ದಾಖಲು: ಹುಲಿ ಸೆರೆ ಹಿಡಿಯಲು ಇರಿಸಿದ್ದ ಬೋನಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಕೂಡಿ ಹಾಕಿ ದಿಗ್ಧಂಧನ ಹಾಕಿದ ಪ್ರಕರಣ ಸಂಬಂಧ ಬೊಮ್ಮಲಾಪುರದ ಐವರು ರೈತರ ಮೇಲೆ ಪ್ರಕರಣ ದಾಖಲಾಗಿದೆ.

ಗ್ರಾಮದ ರಘು, ಪ್ರಸಾದ್‌, ದೀಪ, ಗಂಗಾಧರಸ್ವಾಮಿ, ರೇವಣ್ಣ ಅವರ ವಿರುದ್ಧವೇ ಗುಂಡ್ಲುಪೇಟೆ ಠಾಣೆಯಲ್ಲಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ ಜೀವ ಬೆದರಿಕೆ ಹಾಕಿದ ಪ್ರಕರಣ ದಾಖಲಾಗಿದೆ. ಗುಂಡ್ಲುಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ದೂರು ನೀಡಿದ್ದಾರೆ.

ದೂರಿನಲ್ಲಿ ಗುಂಡ್ಲುಪೇಟೆ ಬಫರ್ ವಲಯ ವ್ಯಾಪ್ತಿಗೆ ಬರುವ ಬೊಮ್ಮಲಾಪುರ ಗ್ರಾಮದಲ್ಲಿ ಕಾಡುಪ್ರಾಣಿಗಳ ಕೂಂಬಿಂಗ್ ಕಾರ್ಯಾಚರಣೆಗೆ ವಿಶೇಷ ಹುಲಿ ಸಂರಕ್ಷಣಾ ದಳದ ಉಪ ವಲಯ ಅರಣ್ಯಾಧಿಕಾರಿಗಳಾದ ಜ್ಞಾನಶೇಖರ್, ಕಾರ್ತಿಕ್ ಯಾದವ್, ವಿನಯ್, ಗಸ್ತು ಪಾಲಕರಾದ ಬಸವೇಗೌಡ ಹಾಗೂ ಸುಚಿತ್ರಾ ಇಲಾಖೆಯ ವಾಹನದಲ್ಲಿ ಹೋಗುವಾಗ ಅವರನ್ನು ಅಡ್ಡಗಟ್ಟಿದ ಸ್ಥಳೀಯರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ವಾಹನದ ಚಕ್ರಗಳ ಗಾಳಿ ತೆಗೆದು ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಬಲವಂತವಾಗಿ ಕೆಳಗಿಳಿಸಿ ಪಾಣಿಗಳ ಸೆರೆಗೆ ಇರಿಸಲಾಗಿದ್ದ ಬೋನಿನೊಳಗೆ ಕೂಡಿ ಹಾಕಿದ್ದಾರೆ. ಬಫರ್ ವಲಯದ ಸಿಬ್ಬಂದಿ ಸಂತೋಷ್, ಪ್ರವೀಣ್, ಸುಬ್ರಹ್ಮಣ್ಯ, ಮಣಿಕಂಠ, ಶಿವಣ್ಣ, ರಾಜಪ್ಪ, ಬಸವರಾಜು, ರಾಘವೇಂದ್ರ ಅವರನ್ನೂ ಬೋನಿನ ಒಳಗೆ ಕೂಡಿಹಾಕಿ ಸಜೀವವಾಗಿ ಸುಟ್ಟು ಹಾಕುವ ಬೆದರಿಕೆ ಹಾಕಿದ್ದಾರೆ.

ಈ ಘಟನೆಯಿಂದ ಇಲಾಖೆಯ ಸಿಬ್ಬಂದಿಯ ಮನೋಸ್ಥೈರ್ಯ ಕುಗ್ಗಿದ್ದು ಜೀವ ಭಯದಿಂದ ಕರ್ತವ್ಯ ನಿರ್ವಹಿಸುವಂತಾಗಿದೆ. ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿ ಮಾಡಲಾಗಿದೆ ಎಂದು ಉಲ್ಲೇಖಿಸಿದ್ದಾರೆ.

Previous articleದಸರಾ 2025: ಮೈಸೂರು-ಬೆಂಗಳೂರು ನಡುವೆ ವಿಶೇಷ ರೈಲು, ವೇಳಾಪಟ್ಟಿ
Next articleವಿಷ್ಣುವರ್ಧನ್​​, ಬಿ. ಸರೋಜಾದೇವಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಘೋಷಣೆ

LEAVE A REPLY

Please enter your comment!
Please enter your name here