ಜಾತಿಗಣತಿ: ಹಾಡಿಗಳಲ್ಲಿ ಸಮೀಕ್ಷೆಗೆ ನೆಟ್‌ವರ್ಕ್ ಸಮಸ್ಯೆ

0
62

ಜಾತಿಗಣತಿ ಮಾಡುವ ಸಿಬ್ಬಂದಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದ ಸುತ್ತಲಿನ ಹಾಡಿಗಳಲ್ಲಿ ನೆಟ್‍ವರ್ಕ್ ಸಮಸ್ಯೆ ಎದುರಾಗಿದೆ. ಇದರ ಪರಿಣಾಮ, ಅಲ್ಲಿನ ಜನರನ್ನು ಬೆಟ್ಟದ ಹಾಡಿಯೊಂದಕ್ಕೆ ಕರೆತಂದು ಸಮೀಕ್ಷೆ ನಡೆಸಲಾಗುತ್ತಿದೆ.

ಬನದ ಸುತ್ತಲಿನ ಹತ್ತಾರು ಹಾಡಿಗಳಲ್ 1000ಕ್ಕೂ ಹೆಚ್ಚು ಕುಟುಂಬಗಳಿವೆ. ಎತ್ತರದ ಸ್ಥಳದಲ್ಲಿ ನೆಟ್‍ವರ್ಕ್ ಸಿಗುತ್ತದೆ. ದಟ್ಟ ಅರಣ್ಯದಲ್ಲಿ ಸಿಗ್ನಲ್ ಸಿಗುತ್ತಿಲ್ಲ. ಇದರಿಂದಾಗಿ ಸಮೀಕ್ಷೆ ಕುಂಟುತ್ತಿದೆ. ಆದ್ದರಿಂದ, ತಾಲೂಕು ಆಡಳಿತ ಹಲವು ಇಲಾಖೆಗಳ ವಾಹನಗಳನ್ನು ಬಳಸಿಕೊಂಡು ಗುಣಮಟ್ಟದ ನೆಟ್‍ವರ್ಕ್ ಸಿಗುವ ಸ್ಥಳಕ್ಕೆ ಜನರನ್ನು ಕರೆತಂದು ಸಮೀಕ್ಷೆ ನಡೆಸುತ್ತಿದೆ.

ಪುರಾಣಿ ಹಾಡಿಯಲ್ಲಿ 160 ಕುಟುಂಬಗಳ ಸಮೀಕ್ಷೆ ನಡೆಸಬೇಕಿದೆ. ನೆಟ್‍ವರ್ಕ್ ಸಮರ್ಪಕವಾಗಿಲ್ಲದ ಕಾರಣದಿಂದ, ಶೇ. 50ರಷ್ಟು ಸಮೀಕ್ಷೆ ಕಾರ್ಯ ಪೂರ್ಣಗೊಂಡಿಲ್ಲ. ಆದ್ದರಿಂದ, ಜನರನ್ನು ನೆಟ್‍ವರ್ಕ್ ಸಿಗುವ ಎರಕನಗದ್ದೆ ಸಮೀಪಕ್ಕೆ ಕರೆಸಿ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಸಮೀಕ್ಷಕರು ತಿಳಿಸಿದರು. ಅಕ್ಟೋಬರ್ 7ರೊಳಗೆ ಸಮೀಕ್ಷೆ ಮುಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಹಶೀಲ್ದಾರ್ ಎಸ್.ಎನ್. ನಯನಾ ಪ್ರತಿಕ್ರಿಯೆ ನೀಡಿದ್ದಾರೆ.

ಸೆಪ್ಟೆಂಬರ್ 22 ರಿಂದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ರಾಜ್ಯಾದ್ಯಂತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಡೆಸುತ್ತಿದೆ. ಅಕ್ಟೋಬರ್ 7ರೊಳಗೆ ಸಮೀಕ್ಷೆಯನ್ನು ಪೂರ್ಣಗೊಳಿಸಬೇಕು ಎಂದು ಸರ್ಕಾರ ಹೇಳಿದೆ.

ಸಮೀಕ್ಷೆ ಅನುಷ್ಠಾನವನ್ನು ಪರಿಶೀಲಿಸಲು ಆಯೋಗದ ಅಧಿಕಾರಿಗಳು ಚಾಮರಾಜನಗರ ಜಿಲ್ಲೆಯ ವಿವಿಧ ತಾಲೂಕು ಹಾಗೂ ಗ್ರಾಮಗಳಲ್ಲಿ ಖುದ್ದಾಗಿ ಭೇಟಿ ನೀಡಿ ಸಮೀಕ್ಷೆಯ ಪ್ರಗತಿಯನ್ನು ಸೆಪ್ಟೆಂಬರ್ 26ರಂದು ಅವಲೋಕಿಸಿದ್ದರು.

ಅಧಿಕಾರಿಗಳು ಸಮೀಕ್ಷಕರೊಂದಿಗೆ ಸಂವಾದ ನಡೆಸಿ, ಜನರಿಂದ ಪಡೆಯುತ್ತಿರುವ ಮಾಹಿತಿಯ ಶುದ್ಧತೆ ಹಾಗೂ ಸಮೀಕ್ಷಾ ಪ್ರಕ್ರಿಯೆಯ ಪರಿಣಾಮಕಾರಿತ್ವವನ್ನು ಖುದ್ದು ಭೇಟಿ ನೀಡಿ ಪರಿಶೀಲಿಸಿದ್ದರು. ಅಲ್ಲದೆ, ಸಮೀಕ್ಷೆ ಕಾರ್ಯಗಳು ನಿಗದಿತ ಅವಧಿಯಲ್ಲಿ ಪೂರ್ತಿಯಾಗುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದ್ದರು.

Previous articleಕೊಪ್ಪಳ : ಪ್ರತ್ಯೇಕ ಅಪಘಾತದಲ್ಲಿ ನಾಲ್ವರು ಸಾವು
Next articleಸಿಎಂ ಭೇಟಿ ಎಫೆಕ್ಟ್: ಕೊಪ್ಪಳದಲ್ಲಿ ಬಸ್ ಸಂಕಷ್ಟ, ಭಕ್ತರ ಪರದಾಟ

LEAVE A REPLY

Please enter your comment!
Please enter your name here