ಬೆಳಗಾವಿ: ಚಾಕಲೇಟು ತರಲೆಂದು ಮನೆಯಿಂದ ಪಕ್ಕದ ಕಿರಾಣಿ ಅಂಗಡಿಗೆ ತೆರಳಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿ ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿ ಬಾವಿಗೆ ಎಸೆದು ಅಮಾನುಷವಾಗಿ ಕೊಲೆ ಮಾಡಿದ ಪ್ರಕರಣದ ಆರೋಪಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ವಿಶೇಷ ಶೀಘ್ರಗತಿ ಪೋಕ್ಸೊ ನ್ಯಾಯಾಲಯ-1 ಗಲ್ಲು ಶಿಕ್ಷೆ ಮತ್ತು 10 ಲಕ್ಷ ದಂಡ ವಿಧಿಸಿ ತೀರ್ಪು ನೀಡಿದೆ.
ನ್ಯಾಯಾಧೀಶರಾದ ಸಿ.ಎಂ. ಪುಷ್ಪಲತಾ ಅವರು ಪ್ರಕರಣ ವಿಚಾರಣೆ ಮಾಡಿ 20 ಸಾಕ್ಷಿಗಳ ವಿಚಾರಣೆ ಹಾಗೂ 106 ದಾಖಲೆ ಮತ್ತು 22 ಮುದ್ದೆಮಾಲುಗಳ ಆಧಾರದ ಮೇಲೆ ಆರೋಪಿ ಮೇಲಿನ ಆರೋಪ ಸಾಬೀತಾಗಿವೆ ಎಂದು ತೀರ್ಪು ನೀಡಿ, ಆರೋಪಿ ಭರತೇಶ ರಾವಸಾಬ ಮಿರ್ಜಿಗೆ ಮರಣದಂಡನೆ ಶಿಕ್ಷೆ ವಿಧಿಸಿದ್ದಾರೆ.
ಬಾಲಕಿಯ ತಂದೆ – ತಾಯಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ 10 ಲಕ್ಷ ರೂ. ಪರಿಹಾರ ಪಡೆಯಲು ನ್ಯಾಯಾಲಯ ಆದೇಶ ಮಾಡಿದೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಎಲ್.ವಿ. ಪಾಟೀಲ ವಾದ ಮಂಡಿಸಿದ್ದರು.
2019ರ ಅ. 15ರಂದು ರಾಯಬಾಗ ತಾಲ್ಲೂಕಿನ ಗ್ರಾಮವೊಂದರಲ್ಲಿ ನಡೆದಿದ್ದ ಈ ಘಟನೆಗೆ ಸಂಬಂಧಿಸಿದಂತೆ ಆರೋಪಿ ಭರತೇಶ ರಾವಸಾಬ ಮಿರ್ಜಿ(28) ಎಂಬುವನನ್ನು ಪೊಲೀಸರು ಬಂಧಿಸಿದ್ದರು.
ಸಂತ್ರಸ್ತ ಬಾಲಕಿಯ ನೆರೆ ಮನೆಯಲ್ಲಿ ವಾಸವಿದ್ದ ಪಿ. ಭರತೇಶ ರಾವಸಾಬ ಮಿರ್ಜಿ ಚಾಕಲೇಟಿನೊಂದಿಗೆ ಮನೆಗೆ ಬರುತ್ತಿದ್ದ ಬಾಲಕಿಗೆ ಸ್ವೀಟು ಕೊಡುವ ಆಮಿಷ ತೋರಿಸಿ ತನ್ನ ಮನೆಗೆ ಕರೆದೊಯ್ದು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ. ಬಾಲಕಿ ಕಿರುಚಲು ಆರಂಭಿಸಿದಾಗ ಹೆದರಿ ಆಕೆಯ ಕತ್ತು ಹಿಚುಕಿ ಕೊಲೆ ಮಾಡಿದ ಸೊಂಟಕ್ಕೆ ಕಲ್ಲು ಕಟ್ಟಿ ಮನೆ ಪಕ್ಕದ ಬಾವಿಗೆ ಎಸೆದು ಮನೆಗೆ ಬೀಗ ಹಾಕಿ ಹೋಗಿದ್ದ.
ಆದರೆ, ಪೊಲೀಸ್ ಶ್ವಾನ ಬಾಲಕಿ ನಡೆದು ಹೋದ ದಾರಿ ಹಾಗೂ ಆರೋಪಿಯ ಮನೆ ಮುಂದೆ ನಿಂತು ಸುತ್ತಾಡಿ ಬಾವಿಯ ಕಡೆ ಹೋಗಿ ನಿಂತಿತ್ತು. ಆ ಮೂಲಕ ಆರೋಪಿಯ ಪತ್ತೆಗೆ ನೆರವಾಗಿತ್ತು.