ದೇವನಹಳ್ಳಿ ರೈತರು ಟೊಮ್ಯಾಟೋ ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ. ಲಾಟರಿ ಬೆಳೆ ಎಂದೇ ಖ್ಯಾತಿ ಪಡೆದಿರುವ ಟೊಮ್ಯಾಟೋ ಬೆಲೆ ಇಲ್ಲದೆ ಇರುವುದು ರೈತರನ್ನು ಸಂಕಷ್ಟಕ್ಕೆ ದೂಡಿದೆ.
15 ದಿನಗಳಿಂದ ಚೇತರಿಸಿಕೊಂಡಿದ್ದ ಟೊಮ್ಯಾಟೋ ದರ ದಿಢೀರನೆ ಕುಸಿದಿದ್ದು, ಬೆಳೆಗಾರರಿಗೆ ಸಂಕಷ್ಟ ತಂದಿದೆ. ಮಳೆ, ಮೋಡ ಕವಿದ ವಾತಾವರಣ, ರೋಗಬಾಧೆಯಿಂದ ಟೊಮ್ಯಾಟೋ ಗುಣಮಟ್ಟ ಕಳೆದುಕೊಳ್ಳುತ್ತಿದ್ದು, ಮಾರುಕಟ್ಟೆಯಲ್ಲಿ ಬೆಲೆ ಕುಸಿತಕ್ಕೆ ಕಾರಣವಾಗಿದೆ.
ಕಳೆದ 15 ದಿನಗಳಿಂದ ನಿಧಾನಗತಿಯಲ್ಲಿ ಏರುತ್ತಿದ್ದ ಟೊಮ್ಯಾಟೋ ಬೆಲೆ ಈಗ ದಿಢೀರನೆ ಕುಸಿದಿದೆ.
ಮಾರುಕಟ್ಟೆಯಲ್ಲಿ 15 ಕೆಜಿ ತೂಕದ ಒಂದು ಬಾಕ್ಸ್ ಟೊಮ್ಯಾಟೋ ಬೆಲೆ 750ರೂ.ಗೆ ಮಾರಾಟವಾಗುತ್ತಿತ್ತು. ಈಗ 250 ರಿಂದ 300ರೂ.ಗೆ ಇಳಿದಿದೆ. ಇದರಿಂದ ಟೊಮ್ಯಾಟೋ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕಳೆದ ವಾರ ಚಿಲ್ಲರೆಯಾಗಿ ಒಂದು ಕೆಜಿ ಟೊಮ್ಯಾಟೋ 40 ರಿಂದ 50ರೂ.ಗೆ ಮಾರಾಟವಾಗುತ್ತಿತ್ತು. ಆದರೆ, ಈಗ 15 ರಿಂದ 20ರೂ.ಗೆ ಕುಸಿದಿದೆ. ಮಳೆ ಹಾಗೂ ಸಾಲುಸಾಲು ಹಬ್ಬ, ಶುಭಸಮಾರಂಭಗಳ ಹಿನ್ನೆಲೆಯಲ್ಲಿ ಲಾಭದ ಖುಷಿಯಲ್ಲಿದ್ದ ಬೆಳೆಗಾರರಿಗೆ ಬೆಲೆ ಕುಸಿತ ಬರ ಸಿಡಿಲಿನಂತೆ ಬಡಿದಿದೆ.
ಟೊಮ್ಯಾಟೋ ಖರೀದಿಸಿ ಸರಬರಾಜು ಮಾಡಿದರೆ ಗುಣಮಟ್ಟವಿಲ್ಲದೆ ಹಣ್ಣು ಬೇಗ ಹಾಳಾಗುತ್ತಿದ್ದು, ನಷ್ಟವಾಗುತ್ತಿದೆ. ಇದರಿಂದ ವರ್ತಕರು ಖರೀದಿಗೆ ಹಿಂದೇಟು ಹಾಕುತ್ತಿರುವುದು ಬೆಲೆ ಕುಸಿತಕ್ಕೆ ಕಾರಣವಾಗಿದೆ ಎಂದು ವ್ಯಾಪಾರಿಯೊಬ್ಬರೂ ಹೇಳುತ್ತಾರೆ.
ಹವಾಮಾನ ವೈಪರೀತ್ಯ, ರೋಗಬಾಧೆ ಹಾಗೂ ಮಳೆಯಿಂದ ಬೆಳೆ ನಾಶವಾಗಿದ್ದು, ಟೊಮ್ಯಾಟೋ ಬೆಲೆ ಹೆಚ್ಚಳವಾಗಬೇಕಾಗಿತ್ತು. ಆದರೆ, ಬೆಲೆ ಕುಸಿತವಾಗಿದೆ. ಇದಕ್ಕೆ ಟೊಮ್ಯಾಟೋ ಒಂದು ರೀತಿಯ ಲಾಟರಿ ಬೆಳೆಯಾಗಿದ್ದು, ಯಾವಾಗ ಬೆಲೆ ಬರುತ್ತೋ, ಕುಸಿಯುತ್ತೋ ಎಂಬುದನ್ನು ಯಾರೂ ಕೂಡ ಅಂದಾಜು ಮಾಡಲಾಗುವುದಿಲ್ಲ. ಏರಿದರೆ ಒಮ್ಮೆಲೇ ಶತಕ ಬಾರಿಸುತ್ತದೆ, ಮತ್ತೊಮ್ಮೆ ಪಾತಾಳ ತಲುಪಿ ಕೆಜಿಗೆ 10ರೂ., 5ರೂ.ಗೆ ಮಾರಾಟವಾಗುತ್ತದೆ. ಏನೇ ಆದರೂ ನಷ್ಟ ಅನುಭವಿಸುವುದು ಮಾತ್ರ ರೈತರು.
“ಉತ್ತಮ ಇಳುವರಿ ಬಂದರೂ ಸಹ ಟೊಮ್ಯಾಟೋ ಬೆಲೆ ಕುಸಿತ ಕಂಡಿದೆ. ಸಾಲ ಹೊಲ ಮಾಡಿ ಟೊಮ್ಯಾಟೋ ಬೆಳೆದಿದ್ದೇವೆ. ಮಾರುಕಟ್ಟೆಯಲ್ಲಿ ಕೇಳುವರೇ ಇಲ್ಲದಂತಾಗಿದೆ. ಟೊಮ್ಯಾಟೋ ರೋಗ ಬಾದೆ ಕಾಡುತ್ತಿದೆ” ಎಂದು ರೈತ ರಾಮಾಂಜಿನಪ್ ಹೇಳದ್ದಾರೆ.
“ಟೊಮ್ಯಾಟೋ ಬೆಲೆ ಕುಸಿತ ಕಂಡಿದೆ. ವಿವಿಧ ಮಾರುಕಟ್ಟೆಗಳಿಂದ ಟೊಮ್ಯಾಟೋ ಯಥೇಚ್ಛವಾಗಿ ಬರುತ್ತಿದೆ. ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಕಂಡಿದೆ” ಎಂದು ವ್ಯಾಪಾರಿ ಆನಂದ್ ತಿಳಿಸಿದ್ದಾರೆ.