ಬಳ್ಳಾರಿ: ಇತ್ತೀಚೆಗೆ ಬಳ್ಳಾರಿಯಲ್ಲಿ ನಡೆದ ಕೊಲೆ ಪ್ರಕರಣವೊಂದನ್ನು ಬಳ್ಳಾರಿ ಪೊಲೀಸರು ಬೇಧಿಸಿದ್ದಾರೆ. ಮದ್ಯ ಸೇವನೆಗಾಗಿ 300 ರೂ. ಕೊಡಲಿಲ್ಲ ಎನ್ನುವ ಕಾರಣಕ್ಕಾಗಿ ಕೊಲೆ ಮಾಡಿರುವುದು ಗೊತ್ತಾಗಿದೆ.
ನಗರದ ಎಸ್ಪಿ ಕಚೇರಿಯಲ್ಲಿ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಪ್ರಕರಣದ ಕುರಿತು ಮಾಹಿತಿ ನೀಡಿದ ಎಸ್ಪಿ ಡಾ. ಶೋಭರಾಣಿ, ಬಳ್ಳಾರಿಯ ಇ ಹುಸೇನ್‌ನಗರದ ಬಾಲರಾಜ್ (22) ಹಾಗೂ ಹನುಮಾನ್ ನಗರದ ಹನುಮಂತ (20) ಆರೋಪಿಗಳನ್ನು ಬಂಧಿಸಲಾಗಿದೆ.
ಸೆ. 5ರಂದು ಆರೋಪಿಗಳಿಬ್ಬರು ಹಾಗೂ ಅಪರಿಚಿತ ಸೇರಿ ಮದ್ಯ ಸೇವಿಸಿದ್ದರು. ಮತ್ತೆ ಮದ್ಯ ಸೇವನೆಗಾಗಿ ಮೃತನಿಗೆ 300 ರೂ. ಕೊಡಲು ಬೇಡಿಕೆ ಇಟ್ಟಿದ್ದರು. ಹಣ ಕೊಡಲು ಒಪ್ಪಲಿಲ್ಲವೆಂದು ಆರೋಪಿಗಳು ಕಲ್ಲಿನಿಂದ ತಲೆಗೆ ಜಜ್ಜಿ ಕೊಲೆ ಮಾಡಿದ್ದರು.
ಪ್ರಕರಣ ದಾಖಲೆಯಾದ ಒಂದೂವರೆ ದಿನದೊಳಗೆ ಆರೋಪಿಗಳನ್ನು ಬಂಧಿಸಲಾಗಿದೆ. ಮೃತ ವ್ಯಕ್ತಿ ಹಾಗೂ ಕುಟುಂಬದ ಬಗ್ಗೆ ಯಾವುದೇ ವಿವರ ಪತ್ತೆಯಾಗಿಲ್ಲ. ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ ಎಂದು ವಿವರಿಸಿದರು.
ಏನಿದು ಘಟನೆ?: ಇಲ್ಲಿನ ರೂಪನಗುಡಿ ರಸ್ತೆಯಲ್ಲಿ ತಲೆ ಹಾಗೂ ಮುಖದ ಮೇಲೆ ಕಲ್ಲಿನಿಂದ ಜಜ್ಜಿ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಸೆ. 5ರಂದು ನಡೆದಿತ್ತು. ಕೊಲೆಗೀಡಾದ ವ್ಯಕ್ತಿ ಅಪರಿಚಿತನಾಗಿದ್ದು, ಶವದ ಬಳಿ ರಕ್ತಸಿಕ್ತವಾದ ಕಲ್ಲು ದೊರೆತಿತ್ತು. ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರಬಹುದು ಎಂದು ಪೋಲಿಸರು ಶಂಕೆ ವ್ಯಕ್ತಪಡಿಸಿ, ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.