ಮಲ್ಲಿಕಾರ್ಜುನ ಚಿಲ್ಕರಾಗಿ
ಬಳ್ಳಾರಿ: ದರ್ಶನ್ ಜಾಮೀನು ರದ್ದುಗೊಂಡಿದ್ದು, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ2 ಆರೋಪಿ ದರ್ಶನ್ರನ್ನು ಬಂಧಿಸಿಡುವುದೇ ಕಾರಾಗೃಹ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.
ಪರಪ್ಪನ ಅಗ್ರಹಾರ ಜೈಲಿನಿಂದ ಸ್ಥಳಾಂತಿಸಬೇಕು ಎನ್ನುವ ಅರ್ಜಿ ವಿಚಾರಣೆ ನಡೆಯುತ್ತಿರುವ ಬೆನ್ನಲ್ಲೇ ಯಾವ ಜೈಲೂ ಅವರನ್ನು ಇರಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ನಮ್ಮ ಜೈಲಿಗೆ ಅವರನ್ನು ಕಳುಹಿಸುವುದು ಬೇಡ ಎನ್ನುತ್ತಿದ್ದಾರೆ.
ಬಳ್ಳಾರಿ ಜೈಲರ್ಗಳು ಸೇರಿ ಇತರೆ ಜೈಲು ಅಧಿಕಾರಿಗಳು ತಮ್ಮ-ತಮ್ಮ ಜೈಲಿನ ವಾಸ್ತವತೆ, ದರ್ಶನ್ರನ್ನು ಸ್ಥಳಾಂತರಿಸಿದರೆ ಆಗುವ ಸಮಸ್ಯೆಗಳನ್ನೇ ಪಟ್ಟಿ ಮಾಡಿ ಐಜಿಪಿಗೆ ಕಳುಹಿಸಿದ್ದು, ಅಲ್ಲಿಂದ ಮೇಲಧಿಕಾರಿಗೆ ಸಂದೇಶ ಮುಟ್ಟಿಸಿದ್ದಾರೆ. ಇದರ ಮೂಲಕ ಪರೋಕ್ಷವಾಗಿ ದರ್ಶನ್ರನ್ನು ತಮ್ಮ ಜೈಲುಗಳಿಗೆ ವರ್ಗಾಯಿಸುವುದು ಬೇಡ ಎನ್ನುವ ಮನವಿಯನ್ನು ಮೇಲಧಿಕಾರಿಗಳ ಮುಂದೆ ಇಟ್ಟಿದ್ದಾರೆ.
11 ಜೈಲಿನ ಸಮಸ್ಯೆ ಪ್ರಸ್ತಾಪ: ಬೆಂಗಳೂರಿನ ಪರಪ್ಪನ ಅಗ್ರಹಾರ, ಬಳ್ಳಾರಿ, ಮೈಸೂರು, ಶಿವಮೊಗ್ಗ, ವಿಜಯಪುರ ಸೇರಿ ಒಟ್ಟು 8 ಕೇಂದ್ರ ಕಾರಾಗೃಹ, 3 ಕಂದಾಯ ಕಾರಾಗೃಹ, ಒಂದು ಓಪನ್ ಜೈಲು ಸೇರಿ 11 ಸೆಂಟ್ರಲ್ ಜೈಲು, 21 ಜಿಲ್ಲಾ, 17 ತಾಲೂಕು ಕಾರಾಗೃಹಗಳಿವೆ.
ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳು ದರ್ಶನ್ ಇಲ್ಲಿರುವುದು ಸೂಕ್ತವಲ್ಲ ಎನ್ನುವ ಪ್ರಸ್ತಾವನೆ ಇಟ್ಟರೆ. ಬಳ್ಳಾರಿ ಸೇರಿ ಉಳಿದ ಸೆಂಟ್ರಲ್ ಜೈಲು ಅಧಿಕಾರಿಗಳು ದರ್ಶನ್ ಸ್ಥಳಾಂತರ ಬೇಡ, ಬಂದರೆ ಏನು ಸಮಸ್ಯೆ ಆಗಲಿದೆ ಎನ್ನುವುದನ್ನು ಮೇಲಧಿಕಾರಿಗಳ ಗಮನ ಸೆಳೆದಿದ್ದಾರೆ.
ಸುಪ್ರೀಂಕೋರ್ಟ್ ಜಾಮೀನು ರದ್ದು ಮಾಡಿ ದರ್ಶನ್ ಜೈಲು ಸೇರಿದ ಮೇಲೆ ಎಲ್ಲಾ ಸೆಂಟ್ರಲ್ ಜೈಲು ಅಧಿಕಾರಿಗಳಿಗೆ ಆತಂಕ ಶುರುವಾಗಿದೆ. ಜೈಲಿನಲ್ಲಿ ದರ್ಶನ್ ಮೆಂಟೇನ್ ಮಾಡುವುದು ಕಷ್ಟ ಎನ್ನುವುದು ಜೈಲರ್ಗಳ ಅನಿಸಿಕೆ. ಜೈಲು ನಿಯಮದಂತೆ ಸೌಲಭ್ಯ ನೀಡಿದರೂ ಕಷ್ಟ ನೀಡದಿದ್ದರು ಕಷ್ಟ ಎನ್ನುವಂತಾಗಿದೆ. ಹೀಗಾಗಿ ವಿವಾದ ಮೈಮೇಲೆ ಎಳೆದುಕೊಳ್ಳುವುದು ಯಾಕೆ? ಎನ್ನುತ್ತಿದ್ದಾರೆ ಕಾರಾಗೃಹ ಅಧಿಕಾರಿಗಳು.
ಆಗಸ್ಟ್ 14ರಂದು ನಟ ದರ್ಶನ್, ಪವಿತ್ರಾ ಗೌಡ ಸೇರಿ ರೇಣುಕಾಸ್ವಾಮಿ ಕೊಲೆ ಪ್ರಕರಣದ 7 ಆರೋಪಿಗಳ ಜಾಮೀನು ಸುಪ್ರೀಂಕೋರ್ಟ್ ರದ್ದು ಮಾಡಿತ್ತು. ಕೋರ್ಟ್ ಸೂಚನೆಯಂತೆ ಅಂದೇ ಅವರನ್ನು ಬಂಧಿಸಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಲಾಗಿದೆ. ಆದರೆ ಈಗ ಆರೋಪಿಗಳನ್ನು ಬೇರೆ ಬೇರೆ ಜೈಲಿಗೆ ಸ್ಥಳಾಂತರ ಮಾಡಬೇಕು ಎಂಬ ಚರ್ಚೆ ನಡೆಯುತ್ತಿದೆ.