ಬಳ್ಳಾರಿ: ಮಾಜಿ ದೇವದಾಸಿಯ ಪುತ್ರಿಗೆ 4 ಚಿನ್ನದ ಪದಕ

0
40

ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲ ಕೋಟೆಯ ಮಾಜಿ ದೇವದಾಸಿಯ ಪುತ್ರಿ ವಾಣಿಜ್ಯಶಾಸ್ತ್ರದ ಸ್ನಾತಕೋತ್ತರ ಪದವಿಯಲ್ಲಿ ನಾಲ್ಕು ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾಳೆ!.

ಬಳ್ಳಾರಿಯ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಹಂಸಾ ಎನ್. 4 ಗೋಲ್ಡ್ ಮೆಡಲ್‌ಗಳಿಗೆ ಭಾಜನಳಾಗಿದ್ದಾಳೆ. ಮೂಲತಃ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ನಿವಾಸಿ ನಾಗಮ್ಮಳ ಪುತ್ರಿ ಹಂಸಾ ವಿಶಿಷ್ಟ ಸಾಧನೆ ಗೈದ ವಿದ್ಯಾರ್ಥಿನಿ.

ಸೆ. 4ರಂದು ವಿಎಸ್‌ಕೆ ವಿವಿಯ ಬಯಲು ರಂಗಮಂದಿರದಲ್ಲಿ ನಡೆಯುವ ಘಟಿಕೋತ್ಸವದಲ್ಲಿ ಈ ನಾಲ್ಕು ಚಿನ್ನದ ಪದಕಗಳಿಗೆ ಕೊರಳೊಡ್ಡಿದ್ದಾಳೆ.

ಕಷ್ಟ ಮೆಟ್ಟಿ ನಿಂತ ದಿಟ್ಟೆ: ಅನಾದಿ ಕಾಲದಿಂದಲೂ ಸಾಮಾಜಿಕ ಪಿಡುಗು ಎನಿಸಿದ ದೇವದಾಸಿ ಪದ್ಧತಿ ಈಗ ಕ್ರಮೇಣ ಕಡಿಮೆಯಾಗಿದೆ. ಆದರೆ ಇಂತಹ ಕುಟುಂಬದಲ್ಲಿ ಹುಟ್ಟಿದ ಹಂಸಾ, ತಾಯಿ ನಾಗರತ್ನ ಸಮಾಜದ ಅಪಮಾನ, ಅವಮಾನವನ್ನು ಮೆಟ್ಟಿ ನಿಂತು ಮಾದರಿಯಾಗುವ ಸಾಧನೆಗೈದಿದ್ದಾಳೆ.

ಕಷ್ಟ-ಕಾರ್ಪಣ್ಯ, ಬಡತನವಿದ್ದರೂ ಓದಬೇಕೆನ್ನುವ ಛಲ `ಚಿನ್ನದ ಸಾಧನೆ’ ವರೆಗೂ ಕೊಂಡೊಯ್ದಿದೆ. ಒಟ್ಟು ಮೂವರು ಅಣ್ಣಂದಿರು ಒಬ್ಬ ತಂಗಿಯನ್ನು ಹೊಂದಿರುವ ಹಂಸಾ, ತನ್ನ ತಾಯಿ ನಾಗರತ್ನ ಅವರ ಅವಿರತ ಶ್ರಮವೇ ಸಾಧನೆಗೆ ಪ್ರೇರಣೆ ಎನ್ನುತ್ತಾಳೆ.

ಬಡತನ ಕಷ್ಟದ ಕಾಲದಲ್ಲಿ ಕೇವಲ ತರಕಾರಿ ವ್ಯಾಪಾರ ಮಾಡಿಯೇ ನಮ್ಮ ತಾಯಿ ಕುಟುಂಬ ಸಲುಹಿದ್ದಾಳೆ. ತೆಕ್ಕಲಕೋಟೆಯಲ್ಲಿಯ ಸಣ್ಣ ತರಕಾರಿ ಅಂಗಡಿಯೇ ನಮ್ಮ ಕುಟುಂಬಕ್ಕೆ ಜೀವನಾಧಾರ. ಹಿರಿಯ ಸಹೋದರರು ಇದೇ ವ್ಯಾಪಾರ ಮುಂದುವರಿಸಿದ್ದಾರೆ. ಒಬ್ಬ ಸಹೋದರ ಈಗ ಸಿವಿಲ್ ಪೇದೆಯಾಗಿ ತರಬೇತಿಯಲ್ಲಿದ್ದಾರೆ. ಸಹೋದರಿ ಪದವಿ ಓದುತ್ತಿದ್ದಾಳೆ. 4 ಮೆಡಲ್ ಬಂದಿದ್ದು ನನ್ನ ಕುಟುಂಬಕ್ಕೆ ಇದು ಅಪಾರ ಸಂತೋಷ ನೀಡಿದೆ ಎಂದು `ಸಂಯುಕ್ತ ಕರ್ನಾಟಕ’ ಜತೆ ಸಂತಸ ಹಂಚಿಕೊಂಡಳು.

“ಸಣ್ಣ ತರಕಾರಿ ಅಂಗಡಿಯೇ ನಮ್ಮ ಕುಟುಂಬಕ್ಕೆ ಜೀವನಾಧಾರ. ಸಹೋದರಿ ಪದವಿ ಓದುತ್ತಿದ್ದಾಳೆ. ನಾಲ್ಕು ಮೆಡಲ್ ಬಂದಿದ್ದು ಅಪಾರ ಸಂತೋಷ ನೀಡಿದೆ.” ಎಂದು ಮೆಡಲ್ ವಿಜೇತೆ ಹಂಸಾ ಹೇಳಿದ್ದಾರೆ.

Previous articleಕೊತ್ತಲವಾಡಿ: ಯಶ್ ತಾಯಿ ನಿರ್ಮಾಣದ ಸಿನಿಮಾ ಒಟಿಟಿಗೆ
Next articleಚಿತ್ರದುರ್ಗ: ಹಿಂದೂ ಮಹಾಗಣಪತಿ ವಿಸರ್ಜನೆ, 4 ಲಕ್ಷ ಜನ ಸೇರುವ ನಿರೀಕ್ಷೆ

LEAVE A REPLY

Please enter your comment!
Please enter your name here