ಬಾಗಲಕೋಟೆ:‌ ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ಹುದ್ದೆ, ಮೂವರಿಗೆ ಜೈಲು ಶಿಕ್ಷೆ…!

0
33

ಬಾಗಲಕೋಟೆ: ನಕಲಿ ಅಂಕಪಟ್ಟಿ ನೀಡಿ ಗ್ರಾಮ ಲೆಕ್ಕಾಧಿಕಾರಿ ಹುದ್ದೆಯನ್ನು ಗಿಟ್ಟಿಸಿಕೊಂಡಿದ್ದ ಮೂವರಿಗೆ ಇಲ್ಲಿನ ಹಿರಿಯ ದಿವಾಣಿ ಮತ್ತು ಸಿಜೆಎಂ ನ್ಯಾಯಾಲಯ 4 ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡವನ್ನು ವಿಧಿಸಿದೆ.

ನೇರ ನೇಮಕಾತಿ ಮೂಲಕ ಗ್ರಾಮ ಲೆಕ್ಕಿಗರ ಹುದ್ದೆಯನ್ನು ಭರ್ತಿ ಮಾಡಲು 2011ರಲ್ಲಿ ಆನ್‌ಲೈನ್ ಮೂಲಕ ಅರ್ಜಿ ಕರೆದಾಗ ಆರೋಪಿತರಾದ ನಟರಾಜ ಮುನಿಯಪ್ಪ, ಡಿ. ನವ್ಯಶ್ರೀ, ಎನ್.ಸಿ. ಸುಬ್ರಮಣಿ ಎನ್ನುವವರು ನಕಲಿ ಅಂಕಪಟ್ಟಿಯನ್ನು ಸಿದ್ಧಪಡಿಸಿ ಬಾಗಲಕೋಟೆ ಜಿಲ್ಲಾಧಿಕಾರಿಗಳಿಗೆ ನೀಡಿದ್ದರು. ಈ ಬಗ್ಗೆ 2014ಲ್ಲಿ ನವನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅಂದಿನ ಪಿಎಸ್‌ಐ ಪಿ. ಚಂದ್ರಶೇಖರ ಅವರು ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಬೀಳಗಿ ಪೊಲೀಸ್ ಠಾಣೆಯ ನ್ಯಾಯಾಲಯ ಸಿಬ್ಬಂದಿ ರಾಜೇಶ ಬಂಡಿ ಅವರು ಸರಿಯಾದ ಸಮಯಕ್ಕೆ ಸಾಕ್ಷಿಗಳನ್ನು ಹಾಜರಪಡಿಸಿದ್ದರು.

ಪ್ರಕರಣದ ವಿಚಾರಣೆ ಕೈಗೊಂಡ ಹಿರಿಯ ದಿವಾಣಿ ಮತ್ತು ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶ ಮಹೇಶ ಪಾಟೀಲ ಅವರು, ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಭಾರತ ದಂಡ ಸಂಹಿತೆ 420, 465, 468, 471 ಅಡಿಯಲ್ಲಿ 4 ವರ್ಷ ಜೈಲು ಶಿಕ್ಷೆ, ಪ್ರತಿ ಕಾಯ್ದೆಗೆ 25 ಸಾವಿರ ರೂ.ಗಳ ದಂಡದಂತೆ ತಲಾ 1.25 ಲಕ್ಷ ರೂ.ಗಳ ವಿಧಿಸಿದ್ದಾರೆ. ದಂಡ ತುಂಬಲು ತಪ್ಪಿದಲ್ಲಿ ಹೆಚ್ಚಿನ ಮೂರು ತಿಂಗಳ ಜೈಲ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಪ್ರಕರಣದಲ್ಲಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ಮಹಾಂತೇಶ ಚಂದ್ರಶೇಖರ ಮಸಲಿ ಅವರು ವಾದ ಮಂಡಿಸಿದ್ದರು.

ನಕಲಿ ಅಂಕಪಟ್ಟಿ ನೀಡಿದ್ದ ನಟರಾಜ ಮುನಿಯಪ್ಪ ಅವರು ಚಿಕ್ಕಬಳ್ಳಾಪುರದ ಶಾಂತಿನಗರ ನಿವಾಸಿಯಾಗಿದ್ದು, ಜಮಖಂಡಿ ತಾಲೂಕಿನ ಹನಗಂಡಿಯಲ್ಲಿ ಗ್ರಾಮಲೆಕ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ. ಡಿ.ನವ್ಯಶ್ರೀ ಮೂಲತ ತುಮಕೂರು ಜಿಲ್ಲೆ ಡಿಎಂ ಪಾಳ್ಯದವಳಾಗಿದ್ದು, ಮುಧೋಳ ತಾಲೂಕಿನ ಜಿರಗಾಳ ಹಾಗೂ ಚಿಚಖಂಡಿಯಲ್ಲಿ ಕಾರ್ಯನಿರ್ವಹಿಸಿದ್ದಾಳೆ. ಎನ್.ಎಸ್ ಸುಬ್ರಮಣಿ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ನಲ್ಲೇನಹಳ್ಳಿ ಗ್ರಾಮದವನಾಗಿದ್ದು, ಜಮಖಂಡಿ ಹಾಗೂ ರಬಕವಿ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ.

Previous articleಬಳ್ಳಾರಿಯನ್ನು ದೇಶದ ಎರಡನೇ ಮಾರ್ಕೆಟಿಂಗ್ ಹಬ್ ಮಾಡುವ ಗುರಿ -‌ ಇ. ತುಕಾರಾಮ್
Next articleಬೆಳಗಾವಿ: ಶಿಂಧಿಕುರಬೇಟ ಗ್ರಾಪಂ ಅಧ್ಯಕ್ಷೆ, ಉಪಾಧ್ಯಕ್ಷರು ಸೇರಿ 28 ಮಂದಿ ಅನರ್ಹ

LEAVE A REPLY

Please enter your comment!
Please enter your name here