ಬಾಗಲಕೋಟೆ: ಚಾಮುಂಡೇಶ್ವರಿ ದೇವಾಲಯ, ಮೈಸೂರು ದಸರಾ-2025 ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಮಾಡುವ ಕುರಿತು ಭಾರೀ ಚರ್ಚೆಗಳು ನಡೆಯುತ್ತಿವೆ. ಈಗ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಈ ಕುರಿತು ಮಾತನಾಡಿದ್ದಾರೆ.
ಶುಕ್ರವಾರ ಬಾಗಲಕೋಟೆಯಲ್ಲಿ ಮಾತನಾಡಿದ ಅವರು, “ಮೂರ್ತಿ ಪೂಜೆಯನ್ನು ಒಪ್ಪದ, ನಮ್ಮ ಪವಿತ್ರವಾದ ಗೋವಿನ ಮಾಂಸವನ್ನು ತಿನ್ನುವ, ಮೂರ್ತಿ ಹಾಗೂ ದೇವಸ್ಥಾನದ ಭಂಜಕರಾದ ಮುಸ್ಲಿಂ ಮಹಿಳೆಯಿಂದ ನಾಡದೇವಿಯ ಪೂಜೆಯನ್ನು ಮಾಡಿಸುವುದರ ಮೂಲಕ ವಿಶ್ವವಿಖ್ಯಾತ ನಾಡಹಬ್ಬ ದಸರೆಗೆ ಚಾಲನೆ ನೀಡುತ್ತಿರುವುದು ಯಾವುದೇ ರೀತಿಯಿಂದಲೂ ಒಪ್ಪಲು ಸಾಧ್ಯವಿಲ್ಲ” ಎಂದರು.
“ನಾಡಿನ ಸಮಸ್ತ ಹಿಂದೂಗಳ ನಂಬಿಕೆಗೆ ಧಕ್ಕೆ ತರುವಂತ ಈ ನಿರ್ಧಾರದಿಂದ ಸರ್ಕಾರ ಕೂಡಲೇ ಹಿಂದೆ ಸರಿಯಬೇಕು” ಎಂದು ಪ್ರಮೋದ್ ಮುತಾಲಿಕ್ ಕರ್ನಾಟಕ ಸರ್ಕಾರವನ್ನು ಆಗ್ರಹಿಸಿದರು.
ಬಾಗಲಕೋಟ ಜಿಲ್ಲೆಯ ಕಲಾದಗಿಯಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು, “ಭಾನು ಮುಷ್ತಾಕ್ ಅವರ ಸಾಹಿತ್ಯದ ಸಾಧನೆ ಬಗ್ಗೆ ನಮಗೆ ಅಭಿಮಾನವಿದೆ. ಹಾಗಂತ ಮಾತ್ರಕ್ಕೆ ಅವರನ್ನು ನಾಡ ದೇವಿಯ ಪೂಜೆಗೆ ಒಪ್ಪಲು ಸಾಧ್ಯವಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಇದು ಕಾಂಗ್ರೆಸ್ಸಿನ ಅತ್ಯಂತ ಮೂರ್ಖ ತನದ ನಿರ್ಧಾರವಾಗಿದ್ದು ನಿಮ್ಮ ಓಟು ಬ್ಯಾಂಕಿನ ಸಲುವಾಗಿ ನಾಡಿನ ಸಮಸ್ತ ಹಿಂದೂಗಳ ನಂಬಿಕೆ ಹಾಗೂ ಸಂಪ್ರದಾಯದ ಮೇಲೆ ದಬ್ಬಾಳಿಕೆ ಮಾಡಲು ಹೊರಟಿರುವುದು ಅದೆಷ್ಟು ಸರಿ?” ಎಂದು ಸರ್ಕಾರವನ್ನು ಪ್ರಶ್ನೆ ಮಾಡಿದರು.
“ನಾಡ ದೇವಿಯ ಪೂಜೆ ಮಾಡಲು ಯೋಗ್ಯವಾದ ಹಿಂದೂಗಳು ಯಾರು ನಿಮಗೆ ಸಿಗಲಿಲ್ಲವೆ?. ಇದೊಂದು ಅಶುಭದ ಸಂಕೇತ, ಇದು ನಾಡಿಗೆ ಶೋಭೆ ತರುವಂತದ್ದಲ್ಲ. ಚಾಮುಂಡೇಶ್ವರಿ ಶಾಪ ಈ ಕಾಂಗ್ರೆಸ್ ಸರ್ಕಾರಕ್ಕೆ ತಟ್ಟುತ್ತದೆ” ಎಂದು ಕಿಡಿ ಕಾರಿದರು.