ರಬಕವಿ-ಬನಹಟ್ಟಿ: ಮಹಾರಾಷ್ಟ್ರದಿಂದ ಹೆಚ್ಚುವರಿ ನೀರು ಹಾಗೂ ಮಳೆಯ ಅಬ್ಬರದಿಂದ ಕಳೆದ ಮೂರ್ನಾಲ್ಕು ದಿನಗಳಿಂದ ಪ್ರವಾಹದಿಂದ ಮುಳುಗಡೆಯಾಗಿದ್ದ ಸುತ್ತಲಿನ ಗ್ರಾಮಗಳ ರಸ್ತೆಗಳು ಸಂಪೂರ್ಣ ಸಂಚಾರಕ್ಕೆ ಸುಗಮವಾಗಿದ್ದರೆ, ಇತ್ತ ಹಿಪ್ಪರಗಿ ಜಲಾಶಯದಲ್ಲಿ 2 ಲಕ್ಷ ಕ್ಯುಸೆಕ್‌ವರೆಗೂ ತಲುಪಿದ್ದ ಒಳ ಹರಿವಿನ ಪ್ರಮಾಣ ಗುರುವಾರ 65 ಸಾವಿರ ಕ್ಯೂಸೆಕ್‌ನಷ್ಟು ಭಾರಿ ಇಳಿಕೆ ಕಂಡಿರುವುದು ಸುತ್ತಲಿನ ಗ್ರಾಮಸ್ಥರು ಹಾಗೂ ರೈತರು ನಿಟ್ಟುಸಿರು ಬಿಡುವಲ್ಲಿ ಕಾರಣವಾಗಿದೆ.
ಕುಲಹಳ್ಳಿ, ಹಿಪ್ಪರಗಿ, ಆಸಂಗಿ-ಅಸ್ಕಿ, ಮದನಮಟ್ಟಿ, ಸಸಾಲಟ್ಟಿ, ಹಳಿಂಗಳಿ ಹೀಗೆ ಅನೇಕ ಗ್ರಾಮಗಳ ರೈತರ ಹೊಲ-ಗದ್ದೆಗಳ ಕೃಷಿ ಚಟುವಟಿಕೆಗಳಿಗೆ ತೆರಳಿದ್ದ ನೀರು, ಕೆಲವೆಡೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿವೆ.
ಸದ್ಯ `ಮಹಾ’ ನೀರು ರಾಜ್ಯಕ್ಕೆ ಹರಿವಿನ ಪ್ರಮಾಣ ಕಡಿಮೆಯಾಗಿದ್ದು, ಅಲ್ಲಿಯೂ ಸಹಿತ ಮಳೆಯ ಆರ್ಭಟ ನಿಂತಿದೆ. ಇದೀಗ ಪ್ರವಾಹಕ್ಕೆ ರಸ್ತೆ ಹಾಗೂ ಕೆಲ ಪ್ರದೇಶಗಳಲ್ಲಿ ನಿಂತ ನೀರು ಹಾಗೇ ಉಳಿದಿದ್ದು, ದುರ್ವಾಸನೆಯಿಂದ ಜನತೆ ಮೂಗು ಮುಚ್ಚಿಕೊಂಡೇ ತೆರಳಬೇಕಾದ ಅನಿವಾರ್ಯತೆಯಾಗಿದ್ದರೆ, ಸುತ್ತಲೂ ವಾಸಿಸುವ ಜನರಿಗೆ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.
ಹಿಪ್ಪರಗಿ ಬ್ಯಾರೇಜ್‌ನಿಂದ ಬಂದಷ್ಟೇ ನೀರನ್ನು ಹೊರಕ್ಕೆ ಹಾಕಲಾಗುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲ 22 ಗೇಟ್‌ಗಳಿಂದಲೂ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ.