ಬಾಗಲಕೋಟೆ: ಗದಗ-ಹುಟಗಿ ಜೋಡಿ ಮಾರ್ಗ ಬಹುತೇಕ ಪೂರ್ಣ..!

0
23

ಅಭಯ ಮನಗೂಳಿ
ಬಾಗಲಕೋಟೆ:
ಗದಗ-ಹುಟಗಿ ಮಧ್ಯದ ರೈಲ್ವೆ ಜೋಡಿ ಮಾರ್ಗದ ಕಾರ್ಯ ಬಹುತೇಕ ಮುಕ್ತಾಯದ ಹಂತದಲ್ಲಿದ್ದು ಗದಗದಿಂದ ಆಲಮಟ್ಟಿವರೆಗಿನ ಸಂಚಾರದ ಸುರಕ್ಷತಾ ತಪಾಸಣಾ ಕಾರ್ಯ ಯಶಸ್ವಿಯಾಗಿದೆ.

ಈ ಭಾಗದಲ್ಲಿ ರೈಲ್ವೆ ಓಡಾಟಕ್ಕಿದ್ದ ಅಡತಡೆಗಳು ಇನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗಲಿದೆ ಎಂದು ನಿರೀಕ್ಷಿಸಲಾಗಿದೆ. 284 ಕಿ.ಮೀ. ಉದ್ದದ ಗದಗ-ಹುಟಗಿ ಮಧ್ಯದ ರೈಲ್ವೆ ಹಳಿ ಡಬ್ಲಿಂಗ್ ಕಾರ್ಯವು 2013ರಲ್ಲಿ ಆರಂಭಗೊಂಡಿದ್ದು ಕಾಮಗಾರಿಗಾಗಿ ಆಗಾಗ್ಗೆ ಈ ಮಾರ್ಗದಲ್ಲಿ ರೈಲು ಓಡಾಟದಲ್ಲಿ ವಿಳಂಬ, ಕೆಲವೊಮ್ಮೆ ಸ್ಥಗಿತಗೊಂಡಿದ್ದ ಉದಾಹರಣೆಯೂ ಇದೆ.

ಅಮೃತ್ ಭಾರತ ರೈಲ್ವೆ ನಿಲ್ದಾಣ ಯೋಜನೆಯಡಿ ಬಾಗಲಕೋಟೆ ನಿಲ್ದಾಣವು ಆಧುನಿಕ ಸ್ಪರ್ಶ ಪಡೆದ ಬೆನ್ನಲ್ಲೇ ಡಬ್ಲಿಂಗ್ ಕಾರ್ಯವೂ ಮುಕ್ತಾಯದ ಹಂತ ತಲುಪಿದ್ದು, ರೈಲುಗಳ ವೇಗದ ಓಡಾಟಕ್ಕೆ ಅವಕಾಶವಾಗಲಿದೆ. ಇನ್ನು ಮುಂದೆ ಕ್ರಾಸಿಂಗ್‌ಗಾಗಿ ಕಾಲಹರಣ ಕಡಿಮೆ ಆಗಲಿದೆ. ಗೂಡ್ಸ್ ಹಾಗೂ ಪ್ಯಾಸೆಂಜರ್ ಟ್ರೇನ್‌ಗಳ ಓಡಾಟ ಯಾವುದೇ ಅಡಚಣೆ ಇಲ್ಲದೇ ಆಗಲಿದ್ದು, ನಿಗದಿತ ಸಮಯದಲ್ಲಿ ರೈಲುಗಳ ಓಡಾಟಕ್ಕೂ ಇದರಿಂದ ಅನುಕೂಲವಾಗಲಿದೆ.

ಗದಗದಿಂದ ಆಲಮಟ್ಟಿಯವರೆಗೆ ಡಬ್ಲಿಂಗ್ ಕಾರ್ಯಪೂರ್ಣಗೊಂಡಿದ್ದು, ಆಲಮಟ್ಟಿಯಿಂದ ವಂದಾಲದವರೆಗೆ 10 ಕಿ.ಮೀ. ಡಬ್ಲಿಂಗ್ ಕಾಮಗಾರಿ ಇನ್ನೂ ಪ್ರಗತಿಯಲ್ಲಿದೆ. ಅಲ್ಲಿ ಬ್ರಿಡ್ಜ್ ನಿರ್ಮಾಣ ಕಾಮಗಾರಿ ಬಾಕಿಯಿರುವುದರಿಂದ ಸದ್ಯಕ್ಕೆ ಆ 10 ಕಿ.ಮೀ. ವ್ಯಾಪ್ತಿಯಲ್ಲಿ ಸಿಂಗಲ್ ಲೈನ್ ಓಡಾಟವಷ್ಟೇ ಇರಲಿದ್ದು, ಕೆಲವೇ ತಿಂಗಳುಗಳಲ್ಲಿ ಆ ಕಾಮಗಾರಿಯೂ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ವಂದಾಲದಿಂದ ಮುಂದೆ ಹುಟಗಿವರೆಗೂ ಡಬ್ಲಿಂಗ್ ಕಾರ್ಯ ಮುಕ್ತಾಯವಾಗಿದೆ. ಹೀಗಾಗಿ ಈ 10 ಕಿ.ಮೀ. ಹೊರತುಪಡಿಸಿದರೆ ಬಹುತೇಕ ಕಾಮಗಾರಿ ಮುಕ್ತಾಯದ ಹಂತಕ್ಕೆ ತಲುಪಿದೆ.

ಗದಗದಿಂದ ಆಲಮಟ್ಟಿವರೆಗೆ 128.90 ಕಿ.ಮೀ. ಕಾಮಗಾರಿ ಮುಕ್ತಾಯವಾಗಿದ್ದು, ಮುಂದಿನ 10 ಕಿ.ಮೀ. ವಂದಾಲವರೆಗೆ ಬ್ರಿಡ್ಜ್ ನಿರ್ಮಾಣ ಕಾರ್ಯವಾಗುತ್ತಿದೆ. ಇಲ್ಲಿ ಬ್ರಿಡ್ಜ್ ನಿರ್ಮಾಣ ಸವಾಲಿನ ಕಾರ್ಯವಾಗಿರುವುದರಿಂದ ನುರಿತ ಕಾರ್ಮಿಕರ ತಂಡ ಕೆಲಸ ಮಾಡುತ್ತಿದೆ.

ಇತ್ತೀಚೆಗೆ ಗದಗದಿಂದ ಆಲಮಟ್ಟಿಯವರೆಗೆ ಅಧಿಕಾರಿಗಳ ತಂಡವು ಸ್ಪೀಡ್ ಟೆಸ್ಟ್ ಮಾಡಿದ್ದು, ವಂದೇ ಭಾರತ ರೈಲು ಓಡಾಟದ ಕನಸು ಸಹ ಸಾಕಾರಗೊಳ್ಳುವ ಸಮಯ ಬಂದೊದಗಿದೆ. 135 ಕಿಎಂಪಿಎಚ್ ವೇಗದ ರೈಲುಗಳು ಓಡಾಡುವ ಅವಕಾಶ ಇನ್ನು ಲಭ್ಯವಾಗಲಿದೆ ಎಂದು ತಜ್ಞರು ವಿಶ್ಲೇಸಿದ್ದಾರೆ.

“ಗದಗದಿಂದ ಆಲಮಟ್ಟಿವರೆಗೆ ಡಬ್ಲಿಂಗ್ ಮುಕ್ತಾಯಗೊಂಡಿದೆ. ವಂದಾಲವರೆಗೆ 10 ಕಿ.ಮೀ. ಮಾತ್ರವೇ ಉಳಿದಿದ್ದು, ಆ ಕಡೆ ಸೋಲಾಪುರದವರೆಗೂ ಡಬ್ಲಿಂಗ್ ಕಾರ್ಯವಾಗಿದೆ. ಹೀಗಾಗಿ ಪಂಢರಪುರ- ತಿರುಪತಿಗೆ ಮೊದಲ ಆದ್ಯತೆ ಮೇಲೆ ರೈಲು ಆರಂಭವಾಗಬೇಕು. ಗೋವಾದ ವಾಸ್ಕೋ ಮಾರ್ಗಕ್ಕೂ ಓಡಾಟ ಶುರುವಾಗಬೇಕು. ಡಬ್ಲಿಂಗ್ ಕಾರ್ಯದ ನಂತರ ವಂದೇ ಭಾರತ ರೈಲು ಆರಂಭಿಸುವುದಾಗಿ ಹೇಳಿದ್ದರು. ಆ ಕಾರ್ಯವನ್ನೂ ಶುರು ಮಾಡಲು ಕ್ರಮವಹಿಸಬೇಕು.” ಎಂದು ರೈಲ್ವೆ ಹೋರಾಟಗಾರ ಕುತ್ಬುದ್ಧಿನ್ ಖಾಜಿ ಹೇಳಿದ್ದಾರೆ.

Previous articleಹುಬ್ಬಳ್ಳಿ: ರಾಣಿ ಚೆನ್ನಮ್ಮ ಮೈದಾನದ ಗಣೇಶನಿಗೆ ವೈಭವದ ವಿದಾಯ
Next articleಬೆಳಗಾವಿ: ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿಗೆ ಕೇಂದ್ರದಿಂದ ಅನುದಾನ

LEAVE A REPLY

Please enter your comment!
Please enter your name here