ಬಾಗಲಕೋಟೆ: ಮುಧೋಳದಲ್ಲಿ ಪ್ರವಾಹ, ಗ್ರಾಮಕ್ಕೆ ನೀರು ನುಗ್ಗುವ ಭೀತಿ, 11 ಸೇತುವೆ ಜಲಾವೃತ

0
77

ಬಾಗಲಕೋಟೆ: ಘಟಪ್ರಭಾ ನದಿಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹರಿದುಬರುತ್ತಿರುವುದರಿಂದ ಮುಧೋಳ, ರಬಕವಿ-ಬನಹಟ್ಟಿ ತಾಲೂಕುಗಳಲ್ಲಿ ಪ್ರವಾಹ ಸನ್ನಿವೇಶ ಸೃಷ್ಟಿಯಾಗಿದೆ. ಬುಧವಾರ 65,567 ಕ್ಯೂಸೆಕ್ ನೀರು ಹರಿದು ಬಂದಿದೆ.

ರಬಕವಿ-ಬನಹಟ್ಟಿ ತಾಲೂಕಿನ ಢವಳೇಶ್ವರ, ನಂದಗಾಂವ, ಮುಧೋಳ ತಾಲೂಕಿನ ಮಿರ್ಜಿ, ಚನ್ನಾಳಗಳಲ್ಲಿ ಪ್ರವಾಹದ ಭೀತಿಯಿದ್ದು, ಮಿರ್ಜಿಯಲ್ಲಿ ತೆರೆದಿರುವ ಕಾಳಜಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಎಂ. ಸಂಗಪ್ಪ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಕೈಗೊಂಡರು. ಕಾಳಜಿ ಕೇಂದ್ರಕ್ಕೆ ಕೆಲವೇ ಜನ ತಮ್ಮ ವಸ್ತುಗಳನ್ನು ತಂದು ಇರಿಸಿದ್ದು, ಅಧಿಕಾರಿಗಳು ಸರಿಯಾಗಿ ಮಾಹಿತಿ ನೀಡಿಲ್ಲ ಎಂದು ಸಾರ್ವಜನಿಕರು ಜಿಲ್ಲಾಧಿಕಾರಿಗಳ ಮುಂದೆ ದೂರಿದರು. ಆಗ ಗರಂ ಆದ ಡಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಘಟಪ್ರಭಾ ನದಿ ವ್ಯಾಪ್ತಿಯ ಧೂಪದಾಳ, ಮಾರ್ಕಂಡೇಯ, ಬಳ್ಳಾರಿ ನಾಲಾಗಳಿಂದ 65,567 ಕ್ಯೂಸೆಕ್ ನೀರು ಹರಿದು ಬಂದಿದ್ದು, 50 ಸಾವಿರ ಕ್ಯೂಸೆಕ್ ದಾಟಿದರೆ ಪ್ರವಾಹದ ಅಪಾಯ ಶುರುವಾಗುತ್ತದೆ. ಮುಧೋಳ ತಾಲೂಕಿನ 11 ಸೇತುವೆಗಳು ಜಲಾವೃತಗೊಂಡಿವೆ. ಕೃಷ್ಣಾ, ಮಲಪ್ರಭಾ, ಘಟಪ್ರಭಾ ನದಿಗಳು ಉಕ್ಕಿ ಹರಿಯುತ್ತಿದ್ದು, ಮೂರೂ ನದಿಪಾತ್ರಗಳಲ್ಲಿ ಮಳೆ ಮುಂದವರಿರುವುದರಿಂದ ಇನ್ನೂ ಹೆಚ್ಚಿನ ನೀರು ಹರಿದು ಬರುವ ಭೀತಿ ಶುರುವಾಗಿದೆ.

ಆಲಮಟ್ಟಿ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಹೊರಹಾಕುತ್ತಿರುವುದರಿಂದ ಈ ನದಿ ವ್ಯಾಪ್ತಿಯ ಗ್ರಾಮಗಳಲ್ಲಿ ಪ್ರವಾಹದ ಸನ್ನಿವೇಶ ಸದ್ಯಕ್ಕಿಲ್ಲ. ಆದರೆ ಅಪಾಯದ ಮಟ್ಟದಲ್ಲಿ ನೀರು ಹರಿಯುತ್ತಿದೆ. ಆಲಮಟ್ಟಿ ಜಲಾಶಯಕ್ಕೆ 1.60 ಲಕ್ಷ ಕ್ಯೂಸೆಕ್ ನೀರು ಹರಿದು ಬಂದಿದ್ದು, 2.50 ಲಕ್ಷ ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ. ಮಲಪ್ರಭಾ ನದಿಯ ನವೀಲುತೀರ್ಥ ಜಲಾಶಯದಿಂದ 12,794 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದ್ದು, 32 ಕ್ಯೂಸೆಕ್ ದಾಟಿದರೆ ಬಾದಾಮಿ, ಹುನಗುಂದ ತಾಲೂಕಿನ ಹಲವೆಡೆ ಪ್ರವಾಹ ಕಂಡು ಬರುವ ಸಾಧ್ಯತೆ ಇರುತ್ತದೆ.

Previous articleಹುಬ್ಬಳ್ಳಿ: ಆಗಸ್ಟ್ 30ಕ್ಕೆ ಹಳೆ ಬಸ್ ನಿಲ್ದಾಣ ಪುನಃ ಆರಂಭ
Next articleಬೆಳಗಾವಿ: ಪೂರ್ಣ ಮುಳುಗಿದ ಲೋಳಸೂರ ಸೇತುವೆ, ಡಿಸಿ ಭೇಟಿ

LEAVE A REPLY

Please enter your comment!
Please enter your name here