ಬಾಗಲಕೋಟೆ: ಕೂಡಲಸಂಗಮ ಲಿಂಗಾಯತ ಪಂಚಸಾಲಿ ಪೀಠದ ವಿವಾದ ಮತ್ತೆ ಭುಗಿಲೆದಿದ್ದೆ. ರವಿವಾರ ಶ್ರೀಪೀಠದ ಟ್ರಸ್ಟ್ನ ಸಭೆ ನಡೆಸಿ ಶ್ರೀಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರನ್ನು ಪೀಠದಿಂದ ಉಚ್ಚಾಟನೆಗೊಳಿಸಲಾಗಿದೆ.
ರವಿವಾರ ಮಧ್ಯಾಹ್ನ ಟ್ರಸ್ಟ್ ಅಧ್ಯಕ್ಷರೂ ಆಗಿರುವ ವಿಜಯಾನಂದ ಕಾಶಪ್ಪನವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ 30 ಸದಸ್ಯರು ಪಾಲ್ಗೊಂಡು ಸ್ವಾಮೀಜಿ ಟ್ರಸ್ಟ್ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ದೂರಿ ಉಚ್ಛಾಟಿಸುವ ನಿರ್ಣಯ ಕೈಗೊಂಡಿದ್ದಾರೆ. ನಂತರ ಅದನ್ನು ಟ್ರಸ್ಟ್ನ ಕಾರ್ಯದರ್ಶಿ ನೀಲಕಂಠ ಅಸೂಟಿ ಮಾಧ್ಯಮಗಳೆದುರು ಅಧಿಕೃತವಾಗಿ ಪ್ರಕಟಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ನೀಲಕಂಠ ಅಸೂಟಿ, ಸ್ವಾಮೀಜಿಯಾದವರು ಸ್ವಂತ ಆಸ್ತಿ ಹೊಂದಿರಬಾರದು ಎಂದು ಇದೆ. ದಾವಣಗೆರೆ ಹಾಗೂ ಇತರೆ ಕಡೆಗಳಲ್ಲಿ ಸ್ವಾಮೀಜಿ ಆಸ್ತಿ ಮಾಡಿದ್ದಾರೆ. ಲಿಂಗಾಯತ ತತ್ವ ಬಿಟ್ಟು, ಹಿಂದುತ್ವ ಪರ ಹೊರಟಿದ್ದಾರೆ. ಟ್ರಸ್ಟ್ ಸದಸ್ಯರ ಮಾತು ಕೇಳುವುದಿಲ್ಲ ಜತೆಗೆ ಪೀಠದಲ್ಲೂ ಇರುವುದಿಲ್ಲ. ಒಂದು ಪಕ್ಷದ ಪರ ಹೊರಟಿದ್ದಾರೆ. ಸ್ವಾಮೀಜಿಗಳು ಸ್ವಾಮೀಜಿಗಳಾಗಿ ಉಳಿದಿಲ್ಲ. ಹೀಗಾಗಿ ಅವರನ್ನು ಉಚ್ಛಾಟಿಸಲಾಗಿದೆ ಎಂದು ಘೋಷಿಸಿದರು.
ಟ್ರಸ್ಟ್ ಅಧ್ಯಕ್ಷ, ವೀರಶೈವ ಲಿಂಗಾಯತ ನಿಗಮದ ಅಧ್ಯಕ್ಷ ಹಾಗೂ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಹಾಗೂ ಸಮುದಾಯದ ಹಿರಿಯ ಮುಖಂಡ ಎಂ.ಪಿ. ನಾಡಗೌಡ ಸೇರಿದಂತೆ ಟ್ರಸ್ಟ್ನ ಸದಸ್ಯರು ಹಾಗೂ ಸಮುದಾಯದ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.