ಬಾಗಲಕೋಟೆ: ಬಾದಾಮಿ ತಾಲೂಕಿನ ಕಾಕನೂರು ಗ್ರಾಮದಲ್ಲಿರುವ ಎಸ್‌ಬಿಐ ಶಾಖೆಗೆ ಮಂಗಳವಾರ ರಾತ್ರಿ ಕಳ್ಳರು ಕನ್ನಹಾಕಿದ್ದಾರೆ. ಅಂದಾಜು 10 ಲಕ್ಷ ರೂ.ಗಳನ್ನು ದೋಚಿ ಪರಾರಿಯಾಗಿರುವ ವರದಿಯಾಗಿದೆ. ಘಟನಾ ಸ್ಥಳಕ್ಕೆ ಎಸ್‌ಪಿ ಸಿದ್ದಾರ್ಥ ಗೋಯಲ್, ಹೆಚ್ಚುವರಿ ಎಸ್‌ಪಿ ಮಹಾಂತೇಶ್ವರ ಜಿದ್ದಿ, ಡಿವೈಎಸ್‌ಪಿ, ಸಿಪಿಐ ಹಾಗೂ ಪಿಎಸ್‌ಐ ಸೇರಿ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.
ಬ್ಯಾಂಕಿನ ಹಿಂಭಾಗದಿಂದ ಕನ್ನ ಹಾಕಿರುವ ಕಳ್ಳರು ತಮ್ಮ ಚಹರೆ ಮರೆಮಾಚಲು ಸಿಸಿ ಕ್ಯಾಮರಾಗಳಿಗೆ ಬಣ್ಣ ಎರೆಚಿದ್ದಾರೆ. ಗ್ಯಾಸ್ ಕಟರ್‌ನಿಂದ ಲಾಕರ್‌ಗಳನ್ನು ಒಡೆಯಲು ಯತ್ನಿಸಿದ್ದು, ಮೂರು ಲಾಕರ್‌ಗಳ ಪೈಕಿ ಒಂದನ್ನು ದೋಚುವಲ್ಲಿ ಯಶಸ್ವಿಯಾಗಿದ್ದಾರೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಘಟನಾ ಸ್ಥಳದಲ್ಲಿ ಸಾಕ್ಷ್ಯ ಸಂಗ್ರಹಿಸಿದ್ದು, ಆರೋಪಿಗಳ ಪತ್ತೆಗೆ ಎಸ್‌ಪಿ ಸಿದ್ದಾರ್ಥ ಗೋಯಲ್ ವಿವಿಧ ತಂಡಗಳನ್ನು ರಚಿಸಿದ್ದಾರೆ.
ಸಿಸಿಟಿವಿ ಕ್ಯಾಮರಾ ಹಾಗೂ ಇದೇ ಮಾದರಿಯ ಅಪರಾಧಿಗಳಲ್ಲಿ ಭಾಗಿಯಾದವರ ಪೂರ್ವಾಪರ ಆಧರಿಸಿ ತನಿಖೆ ಆರಂಭಗೊಂಡಿದೆ. ಬ್ಯಾಂಕ್ ಸಿಬ್ಬಂದಿಯೊಂದಿಗೆ ಸಮನ್ವಯತೆ ಸಾಧಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಎಸ್‌ಪಿ ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದೆ. ಶೀಘ್ರದಲ್ಲಿ ಆರೋಪಿಗಳನ್ನು ಪತ್ತೆ ಮಾಡಲಾಗುತ್ತದೆ ಎಂದು ಎಸ್‌ಪಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.