ಬಾಗಲಕೋಟೆ: ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯರ ರಾಜಿ ಪಂಚಾಯಿತಿಯಲ್ಲಿ ಗಲಾಟೆ ಉಂಟಾಗಿ ಪಿಎಸ್‌ಐ ಮೇಲೆ ಹಲ್ಲೆ ನಡೆದಿರುವ ಘಟನೆ ಜಮಖಂಡಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಕಲ್ಲಹಳ್ಳಿಯಲ್ಲಿ ಗುರುವಾರ ರಾತ್ರಿ ನಡೆದಿದೆ.
ಪಿಎಸ್‌ಐ ಗಂಗಾಧರ ಪೂಜೇರಿ ಹಲ್ಲೆಗೊಳಗಾಗಿದ್ದಾರೆ. ವ್ಯಕ್ತಿಯೋರ್ವ ಹಾಲಿನ ಕ್ಯಾನ್‌ನಿಂದ ಪಿಎಸ್‌ಐ ತಲೆಗೆ ಹೊಡೆದಿದ್ದಾನೆ ಎಂದು ದೂರಲಾಗಿದೆ. ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದಿರುವ ಪಿಎಸ್‌ಐ ಜಮಖಂಡಿಯ ನಿರೀಕ್ಷಣಾ ಮಂದಿರದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಏನಿದು ಘಟನೆ?: ಕಲ್ಲಹಳ್ಳಿ ಗ್ರಾಮದ ಎರಡು ವಿಭಿನ್ನ ಧರ್ಮದ ಹುಡುಗ ಹಾಗೂ ಹುಡುಗಿ ಪ್ರೀತಿಸಿ ಮನೆಯಿಂದ ಓಡಿ ಹೋಗಿದ್ದರು. ಊರಿನಲ್ಲಿ ಹಿರಿಯರು ಎರಡೂ ಕುಟುಂಬಸ್ಥರ ಮಧ್ಯೆ ರಾಜಿ ಪಂಚಾಯಿತಿ ನಡೆಸಲು ಮುಂದಾಗಿದ್ದರು. ಈ ವೇಳೆ ಘರ್ಷಣೆ ಉಂಟಾಗಿದೆ.
ಎರಡು ಕಡೆಯವರು ಜಗಳ ನಡೆಯುತ್ತಿರುವ ಮಾಹಿತಿ ಅರಿತ ಜಮಖಂಡಿ ಪಿಎಸ್‌ಐ ಪೂಜಾರ ಅವರು ಸಿಬ್ಬಂದಿಯೊಂದಿಗೆ ಗ್ರಾಮಕ್ಕೆ ತೆರಳಿದಾಗ ಅಲ್ಲಿ ಸರ್ಕಾರಿ ಶಾಲೆ ಬಳಿ ತೀವ್ರ ವಾಗ್ವಾದಕ್ಕಿಳಿದಿರುವುದು ಕಂಡು ಬಂದಿದೆ.
ಪಿಎಸ್‌ಐ ಅಲ್ಲಿಂದ ಗುಂಪು ಚದುರುವಂತೆ ಹಲವು ಬಾರಿ ಸೂಚಿಸಿದ್ದರೂ ಯಾರೊಬ್ಬರು ಕಿವಿಗೊಟ್ಟಿಲ್ಲ. ಅಲ್ಲದೇ ಜಗಳ ಬಿಡಿಸಲು ಅವರು ಮಧ್ಯೆ ಪ್ರವೇಶಿಸಿದಾಗ ಕೆಲವರು ಹಾಲಿನ ಕ್ಯಾನ್‌ನಿಂದ ತಲೆಗೆ ಹೊಡೆದಿದ್ದಾರೆ. ಘಟನೆಯಲ್ಲಿ ಇಬ್ಬರು ಪೊಲೀಸ್ ಪೇದೆಗಳು ಸಹ ಗಾಯಗೊಂಡಿರುವ ವರದಿಯಾಗಿದೆ.
ಒಟ್ಟು 48 ಜನ ಘಟನೆಯಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದ್ದು, ಈಗಾಗಲೇ ಪೊಲೀಸರು 20 ಜನರನ್ನು ಬಂಧಿಸಿದ್ದಾರೆ. ಅಲ್ಲದೇ ಆರು ಮಹಿಳೆಯರಿಗೆ ನೋಟಿಸ್ ನೀಡಿದ್ದಾರೆ. ಭಾರತೀಯ ನ್ಯಾಯ ಸಂಹಿತೆ 2023ರ ವಿವಿಧ ಸೆಕ್ಷನ್‌ಗಳ ಅಡಿ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್‌ಪಿ ಸಿದ್ದಾರ್ಥ ಗೋಯಲ್ ಮಾಹಿತಿ ನೀಡಿದ್ದಾರೆ.
ಸದ್ಯ ಗ್ರಾಮದಲ್ಲಿ ಪರಿಸ್ಥಿತಿ ಹತೋಟಿಗೆ ಬಂದಿದ್ದು, ಎಸ್‌ಪಿ ಗೋಯಲ್, ಡಿವೈಎಸ್‌ಪಿ ಸೈಯದ ರೋಷನ್ ಜಮೀರ್, ಸಿಪಿಐ ಮಲ್ಲಪ್ಪ ಮಡ್ಡಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಗ್ರಾಮದಲ್ಲಿ ಡಿಆರ್ ವ್ಯಾನ್ ಸೇರಿದಂತೆ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.