ಸಂ.ಕ.ಸಮಾಚಾರ ಕೆ.ಆರ್.ಪೇಟೆ: ನಾಲಾ ನಿರ್ವಹಣೆಯ ಕೊರತೆಯಿಂದ ಏರಿಯ ಮೇಲೆ ನೀರು ಉಕ್ಕಿ ಹರಿದು ಪೋಲಾಗುತ್ತಿದ್ದರೂ ನೀರಾವರಿ ಇಲಾಖೆಯ ಎಂಜಿನಿಯರುಗಳು ಯಾವುದೇ ಕ್ರಮ ವಹಿಸದಿರುವ ಬಗ್ಗೆ ಪಟ್ಟಣದ ಹೊರವಲಯದ ಸಾದುಗೋನಹಳ್ಳಿ ರೈತರು ಆಕ್ರೊಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಹೊರವಲಯದ ಸಾಧುಗೋನಹಳ್ಳಿ ಬಳಿ ಹೇಮಾವತಿ ಜಲಾಶಯದ 52ನೇ ವಿತರಣಾ ನಾಲೆ ಹಾದುಹೋಗಿದೆ. ಸದರಿ ವಿತರಣಾ ನಾಲೆಯಿಂದ ರೈತರ ಜಮೀನಿಗಳಿಗೆ ನೀರು ಹರಿಸುವ ಸೀಳು ನಾಲೆಯಲ್ಲಿ ನೀರಾವರಿ ಇಲಾಖೆಯ ನಿರ್ವಹಣಾ ಕೊರತೆಯಿಂದ ನೀರು ಸರಾಗವಾಗಿ ಹರಿಯದೆ ನಾಲೆಯ ಏರಿಯಿಂದ ಉರುಳಿ ಜನ ಸಂಚಾರಕ್ಕೆ ತೊಂದರೆಯಾಗಿರುವುದಲ್ಲದೆ ರೈತರ ಕೃಷಿ ಚಟುವಟಿಕೆಗಳಿಗೆ ಬಳಕೆಯಾಗಬೇಕಾದ ನೀರು ವ್ಯರ್ಥವಾಗಿ ಹರಿದುಹೋಗುತ್ತಿದೆ.
ಕಾಲುವೆಯಲ್ಲಿ ನೀರು ಹರಿಸಿದಾಗಲೆಲ್ಲಾ ಜನ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದು ಈ ಬಗ್ಗೆ ಹಲವಾರು ಸಲ ನೀರಾವರಿ ಇಲಖೆಗೆ ದೂರು ನೀಡಿದ್ದರೂ ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲ ಎಂದು ಆರೋಪಿಸಿ ಸಾಧುಗೋನಹಳ್ಳಿ ಭಾಗದ ರೈತರು ವ್ಯರ್ಥವಾಗಿ ಹರಿದು ಹೋಗುತ್ತಿರುವ ಕಾಲುವೆ ನೀರಿನಲ್ಲಿ ನಿಂತು ನೀರಾವರಿ ಇಲಾಖೆಯ ಎಂಜಿನಿಯರುಗಳ ವಿರುದ್ದ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ಪ್ರಸಕ್ತ ವರ್ಷ ಗೊರೂರಿನ ಹೇಮಾವತಿ ಜಲಾಶಯದಲ್ಲಿ ನೀರಿಕ್ಷಿತ ಪ್ರಮಾಣದ ನೀರು ಸಂಗ್ರಹವಾಗಿರುವ ಹಿನ್ನೆಲೆ ಕಾಲುವೆಗಳಿಗೆ ನೀರು ಹರಿಸಲಾಗಿದೆ. ನೀರು ಬಿಡುವುದಕ್ಕೂ ಮುಂಚೆ ಕಾಲುವೆಯ ಸ್ಥಿತಿಗತಿಯನ್ನು ನೀರಾವರಿ ಇಲಾಖೆ ಅಧಿಕಾರಿಗಳು ಪರಿಶೀಲಿಸುತ್ತಿಲ್ಲ. ಗುತ್ತಿಗೆದಾರರಿಗೆ ಖ್ಮರ್ಚಿ ಹಾಕಿ ಅವರ ಕೆಲಸಗಳನ್ನು ಮಾಡಿಕೊಡಲು ಉತ್ಸುಕತೆ ತೋರಿಸುವ ನೀರಾವರಿ ಇಲಾಖೆಯ ಎಂಜಿನಿಯರುಗಳು ರೈತರ ಸಮಸ್ಯೆಗಳನ್ನು ಆಲಿಸಲು ಮುಂದಾಗುತ್ತಿಲ್ಲ. ಯಾವಾಗ ಹೋದರೂ ನೀರಾವರಿ ಇಲಾಖೆಯಲ್ಲಿ ಎಂಜಿನಿಯರುಗಳು ಕಛೇರಿಯಲ್ಲಿ ಸಿಕ್ಕುವುದಿಲ್ಲ. ವಿರಳವಾಗಿ ಸಿಕ್ಕಿದರೂ ಸಮಸ್ಯೆಗಳ ಬಗ್ಗೆ ಅವಲೋಕನ ಮಾಡುತ್ತಿಲ್ಲ.
ಹೇಮಾವತಿ ಮುಖ್ಯ ನಾಲೆಯನ್ನು ಸಾವಿರಾರು ಕೋಟಿ ವ್ಯಹಿಸಿ ಆಧುನೀಕರಣ ಮಾಡಿದ ರಾಜ್ಯ ಸರ್ಕರ ರೈತರ ಜಮೀನುಗಳಿಗೆ ನೀರು ಒದಗಿಸುವ ವಿತರಣಾ ನಾಲೆಗಳ ನಿರ್ವಹಣೆಗೆ ಕ್ರಮ ವಹಿಸಿಲ್ಲ ಇದರ ಪರಿಣಾಮ ವಿತರಣಾ ನಾಲೆಗಳಲ್ಲಿ ಗಿಡಗೆಂಟೆಗಳು ಬೆಳೆದು ಮುಂದಿನ ಭಾಗಕ್ಕೆ ನೀರು ಸರಾಗವಾಗಿ ಹರಿಯುತ್ತಿಲ್ಲ.
ನದಿ ಅಣೆಕಟ್ಟೆ ನಾಲೆಗಳಾದ ಹೇಮಗಿರಿ, ಮಂದಗೆರೆ ನಾಲೆಗಳ ಏರಿಗಳ ಮೇಲೂ ಗಿಡಗೆಂಟೆಗಳು ಬೆಳೆದು ನಿಂತಿದ್ದು ನೀರಾವರಿ ಇಲಾಖೆ ಕಾಲಕಾಲಕ್ಕೆ ತನ್ನ ಸವಡೆಗಳನ್ನು ಬಿಟ್ಟು ಜಂಗಲ್ ಕಟ್ಟಿಂಗ್ ಮಾಡಿಸುತ್ತಿಲ್ಲ. ಈ ಸಮಸ್ಯೆ ಕುರಿತು ಹಲವು ಬಾರಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ರೈತರು ಮನವಿ ಮಾಡಿದರೂ ಕೂಡಾ ಉಡಾಫೆ ಉತ್ತರ ನೀಡಿ ಸಾಗಹಾಕುತ್ತಾರೆ.
ಪರಿಣಾಮವಾಗಿ ರೈತರ ಮುಖ್ಯ ರಸ್ತೆ ಹಾಗೂ ಹಳ್ಳ ಕೊಳ್ಳದಲ್ಲಿ ನೀರು ಪೋಲಾಗಿ ಕಾಲುವೆಯ ಕೊನೆ ಭಾಗದ ರೈತರಿಗೆ ನೀರಿನ ಸಂಕಷ್ಟ ಎದುರಾಗುವ ಜೊತೆಗೆ ರೈತರು ಬೆಳೆದ ಬೆಳೆಗಳು ನೀರುಪಾಲಾಗಿ ರೈತರು ಕಂಗಾಲಾಗಿದ್ದಾರೆ. ಕಚೇರಿಯಲ್ಲಿ ಯಾವೊಬ್ಬ ಎಂಜಿನಿಯರ್ಗಳು ಕೂಡಾ ನಿಗದಿತ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗುವುದಿಲ್ಲ. ಕೇಳಿದರೆ ಮೀಟಿಂಗ್, ಕಾಲುವೆ ಮೇಲೆ ಹೋಗಿದ್ದಾರೆ ಎಂದು ಅಧೀನ ನೌಕರರು ಸುಳ್ಳು ಹೇಳುತ್ತಾರೆ.
ರೈತರ ಸಮಸ್ಯೆಗಳು ಎಂದರೆ ಅಧಿಕಾರಿಗಳಿಗೆ ಒಂದು ರೀತಿಯಲ್ಲಿ ಅಸಡ್ಡೆ. ಯಾವಾಗ ಕಚೇರಿಗೆ ಹೋದರೂ ಕೂಡಾ ಇವರ ದರ್ಶನವಾಗುವುದೆ ಇಲ್ಲ. ನಾವು ಇನ್ನಾರಿಗೆ ದೂರು ಕೊಡಬೇಕು. ಕಳೆದ 05 ವರ್ಷಗಳಿಂದ ನಮ್ಮ ಭಾಗದ ಸೀಳು ನಾಲೆಯಲ್ಲಿ ನೀರುಬಿಟ್ಟಾಗಲೆಲ್ಲಾ ನೀರು ಉಕ್ಕಿ ಹರಿಯುತ್ತಿದೆ. ಇದನ್ನು ಖಂಡಿಸಿ ಹಲವಾರು ಸಲ ಪ್ರತಿಭಟಿಸಿದ್ದೇವೆ. ಆದರೂ ಕೂಡಾ ಸಮಸ್ಯೆ ಬಗೆಹರಿಯುತ್ತಿಲ್ಲ. ಶಾಸಕರು ಇದರ ಬಗೆಗೆ ಗಂಭೀರವಾಗಿ ಗಮನವನ್ನು ಹರಿಸಬೇಕು. ಹಳಿತಪ್ಪಿರುವ ಆಡಳಿತವನ್ನು ಸರಿದಾರಿಗೆ ತರಬೇಕು. ನಮ್ಮ ಭಾಗದ ಈ ಸಮಸ್ಯೆ ಬಗೆಹರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೇಮಾವತಿ ನೀರಾವರಿ ಇಲಾಖೆಯ ಮುಂದೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಸಾಧುಗೋನಹಳ್ಳಿಯ ಯುವ ರೈತ ಎಸ್.ಎಂ.ಲೋಕೇಶ್ ಎಚ್ಚರಿಸಿದರು.