ಪಣಜಿ: ಗೋವಾದಲ್ಲಿ ಅನಧಿಕೃತವಾಗಿ ನಡೆಸುತ್ತಿದ್ದ ಮದರಸಾ ಮೇಲೆ ಪೊಲೀಸರು ದಾಳಿ ನಡೆಸಿ ಕರ್ನಾಟಕ, ಗೋವಾ, ಬಿಹಾರದ ಒಟ್ಟು 17 ಮಕ್ಕಳನ್ನು ರಕ್ಷಿಸಿದ ಘಟನೆ ನಡೆದಿದೆ.
ಗೋವಾದ ಮಡಗಾಂವ ಹೌಸಿಂಗ್ ಬೋರ್ಡ್ ಪ್ರದೇಶದ ರುಮಡಾಮಾಲ್‌ನಲ್ಲಿ ಯಾವುದೇ ಅಧಿಕೃತ ಪರವಾನಿಗೆ ಇಲ್ಲದೆಯೇ ಕಾರ್ಯ ನಿರ್ವಹಿಸುತ್ತಿದ್ದ ಮದರಸಾ ವಿರುದ್ಧ ಮೈನಾ-ಕುಡ್ತರಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಈ ಮಕ್ಕಳ ಬಳಿ ಯಾವುದೇ ದಾಖಲೆಗಳು ಅಥವಾ ಆಧಾರ ಕಾರ್ಡ್ ಕೂಡ ಲಭ್ಯವಾಗಿಲ್ಲ.
ಈ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಮಕ್ಕಳ ಕಲ್ಯಾಣ ಸಮಿತಿಯನ್ನು ಸಂಪರ್ಕಿಸಿ ಒಂದೇ ಸ್ಥಳದಲ್ಲಿ ಇರಿಸಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಮದರಸಾ ಮೊದಲು ಬೇರೆ ಸ್ಥಳದಲ್ಲಿತ್ತು. ಆದರೆ ಅಲ್ಲಿನ ನಿವಾಸಿಗಳ ದೂರಿನ ನಂತರ ಸ್ಥಳವನ್ನು ಬದಲಾಯಿಸಲಾಗಿತ್ತು ಎಂದು ಪೊಲೀಸರು ನಡೆಸಿದ ತನಿಖೆಯಿಂದ ತಿಳಿದುಬಂದಿದೆ. ಈ ಮದರಸಾದಲ್ಲಿ ಅನುಮಾನಾಸ್ಪದ ಚಟುವಟಿಕೆಗಳು ನಡೆಯುತ್ತಿವೆ ಎಂದು ಸ್ಥಳೀಯರು ದೂರಿದ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಮಡಗಾಂವನ ರುಮಡಾಮಾಲ್ ಅಂಜುಮನ್ ಪ್ರೌಢಶಾಲೆಯ ಹಿಂಭಾಗದ ನೀಲಿ ಕಟ್ಟಡದಲ್ಲಿ ಈ ಮದರಸಾ ನಡೆಯುತ್ತಿದೆ ಎಂದು ಪೊಲೀಸರಿಗೆ ಸ್ಥಳೀಯರಿಂದ ದೂರು ಬಂದಿತ್ತು.