ಶೀಲ ಶಂಕಿಸಿ ಪತ್ನಿ ಕೊಲೆ: ಮೂರು ವರ್ಷದ ನಂತರ ಪ್ರಕರಣ ಬೆಳಕಿಗೆ

0
12
ಐವರ ಬಂಧನ

ಬೆಳಗಾವಿ: ಮಹಿಳೆಯ ಶೀಲ ಶಂಕಿಸಿ ಆಕೆಯ ಪತಿಯೇ ಅವಳನ್ನು ಕೊಲೆ ನಡೆಸಿ ಆಕೆ ಕಾಣೆಯಾಗಿದ್ದಾಳೆಂಬ ಕಥೆ ಕಟ್ಟಿ ಎಲ್ಲರನ್ನೂ ಯಾಮಾರಿಸಿದ ಘಟನೆಗೆ ಸಂಬಂಧಿಸಿದಂತೆ ಐವರನ್ನು ಪೊಲೀಸರು ಬಂಧಿಸಿದ್ದು, ಮೂರು ವರ್ಷದ ನಂತರ ಖದೀಮರ ಬಣ್ಣ ಬಯಲಾಗಿದೆ.
ಘಟನೆಯ ವಿವರ: ಜಿಲ್ಲೆಯ ಮೂಡಲಗಿ ತಾಲೂಕಿನ ಶಿವಲೀಲಾ ವಿಠ್ಠಲ ಬಂಗಿ(೩೨) ಕೊಲೆಯಾಗಿದ್ದರು. ಸ್ವತಃ ಆಕೆಯ ಪತಿ ವಿಠ್ಠಲ ಬಂಗಿ ಎಂಬವನೇ ಈ ಕೊಲೆ ಮಾಡಿದ್ದು ಆತನ ಸ್ನೇಹಿತರಾದ ಸಿದಗೊಂಡ ಕಂಬಳಿ, ಲಕ್ಕಪ್ಪ ಕಂಬಳಿ, ಬಸವರಾಜ್ ಕಬ್ಬೂರೆ, ಅಶೋಕ್ ಮೊಕಾಶಿ ಕೊಲೆಗೆ ಸಹಾಯ ನೀಡಿದ ಖದೀಮರು.
ಇವರಲ್ಲಿ ಲಕ್ಕಪ್ಪ ಕಂಬಳಿ, ಸಿದಗೊಂಡ ಕಂಬಳಿ ಕೊಲೆಯಾದ ಶಿವಲೀಲಾಳ ಸಹೋದರರು. ರಾಯಭಾಗದ ಖಾಸಗಿ ಕಾಲೇಜಿನಲ್ಲಿ ಶಿವಲೀಲಾ ವ್ಯಾಸಂಗ ಮಾಡುತ್ತಿದ್ದರು. ೨೦೨೦ರ ಜನವರಿ ತಿಂಗಳಲ್ಲಿ ಕೊಲೆಯಾಗಿತ್ತು. ಈಕೆಯ ನಡತೆ ಸರಿಯಿಲ್ಲ ಎಂದು ಆಕೆಯ ಗಂಡ ಹಾಗೂ ಸಹೋದರರು ಸೇರಿ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ನಂತರ ಶವವನ್ನು ಕ್ರೂಸರ್‌ನಲ್ಲಿ ಸಾಗಿಸಿ ಸವದತ್ತಿ ತಾಲೂಕಿನ ಹಿರೇಬೂದುನೂರು ಗ್ರಾಮದ ನಿರ್ಜನ ಅರಣ್ಯ ಪ್ರದೇಶದಲ್ಲಿ ಬಿಸಾಕಿದ್ದರು.
ನಂತರ ಏನೂ ಅರಿಯದಂತೆ ಮನೆ ಸೇರಿದ್ದರು. ಊರಿನಲ್ಲಿ ಜನರು ಶೀವಲೀಲಾಳ ಬಗ್ಗೆ ಪದೇ ಪದೆ ಕೇಳಲಾರಂಭಿಸಿದ್ದರಿಂದ ಶಿವಲೀಲಾ ಸಹೋದರ ಲಕ್ಕಪ್ಪ ಕಂಬಳಿ ೨೦೨೩ರ ಮಾರ್ಚ್ ೨೬ರಂದು ಮೂಡಲಗಿ ಠಾಣೆಗೆ ಬಂದು ಆಕೆ ನಾಪತ್ತೆಯಾದ ಬಗ್ಗೆ ದೂರು ದಾಖಲಿಸಿದ್ದ. ಪೊಲೀಸರು ಮೂಡಲಗಿ ತಾಲೂಕಿನ ಜೊಕ್ಕಾನಟ್ಟಿ ಗ್ರಾಮದಲ್ಲಿರುವ ಶಿವಲೀಲಾ ತವರು ಮನೆ ಬಳಿ ವಿಚಾರಣೆ ನಡೆಸಿದ್ದರು.
ಊರಿನಲ್ಲಿ ಶಿವಲೀಲಾ ಕೊಲೆಯಾಗಿರುವ ಬಗ್ಗೆ ಹುಟ್ಟಿಕೊಂಡ ಗುಸುಗುಸು ಹಿನ್ನೆಲೆಯಲ್ಲಿ ಶಿವಲೀಲಾ ಸಹೋದರ ಲಕ್ಕಪ್ಪನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯ ಹೊರಬಿದ್ದಿದೆ. ಆರೋಪಿಗಳು ಶವ ಬಿಸಾಕಿದ ಸ್ಥಳದಲ್ಲಿ ಕೇವಲ ಶಿವಲೀಲಾ ತಲೆಬುರುಡೆ ಮಾತ್ರ ಪತ್ತೆಯಾಗಿದೆ. ತಲೆಬುರುಡೆಯನ್ನು ಪೊಲೀಸರು ಎಫ್‌ಎಸ್‌ಎಲ್‌ಗೆ ಕಳಿಸಿದ್ದು ಆರೋಪಿಗಳನ್ನು ಬಂಧಿಸಿದ್ದಾರೆ.

Previous articleನಿಪ್ಪಾಣಿಯಲ್ಲಿ ಬಾಲಕನ ಕೊಲೆ
Next articleಡಿಡಿಪಿಐ ಲೋಕಾ ಬಲೆಗೆ