ಮಂಗಳೂರು ಜ್ಯುವೆಲ್ಲರಿ ಶಾಪ್​ ಸಿಬ್ಬಂದಿ ಹತ್ಯೆ ಪ್ರಕರಣ: ಕಾಸರಗೋಡಿನಲ್ಲಿ ಆರೋಪಿ ಬಂಧನ

0
12
ಮಂಗಳೂರು

ಮಂಗಳೂರು: ‘ಮಂಗಳೂರು ಜ್ಯುವೆಲ್ಲರ್ಸ್‌’ ಚಿನ್ನಾಭರಣ ಅಂಗಡಿಯಲ್ಲಿ ನಡೆದಿದ್ದ ಸಿಬ್ಬಂದಿ ಕೊಲೆ–ದರೋಡೆ ಪ್ರಕರಣದ ಆರೋಪಿಯನ್ನು ಕಾಸರಗೋಡಿನಲ್ಲಿ ಬಂಧಿಸಲಾಗಿದೆ. ಕೋಜಿಕ್ಕೋಡ್ ಕೊಯಿಲಾಂಡಿ ತೂವಕ್ಕಾಡ್ ನ ಶಿಫಾಜ್ ( 33) ಬಂಧಿತ ಆರೋಪಿ. ಕಾಸರಗೋಡು ಪೊಲೀಸರ ನೆರವಿನಿಂದ ಈತನನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಅಂಶುಕುಮಾರ್‌ ತಿಳಿಸಿದ್ದಾರೆ. ಫೆಬ್ರುವರಿ 3ರಂದು ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ರಾಘವೇಂದ್ರ ಆಚಾರ್ಯ (50) ಎಂಬವರನ್ನು ಚೂರಿಯಿಂದ ಇರಿದು ಕೊಲೆ ಮಾಡಲಾಗಿತ್ತು. ತಾನು ಊಟಕ್ಕೆ ಹೋಗಿ ಬರುವಷ್ಟರಲ್ಲಿ ಅಪರಿಚಿತ ಮುಸುಕುಧಾರಿ ಕೊಲೆ ಮಾಡಿ, ಚಿನ್ನಾಭರಣ ದೋಚಿದ್ದಾನೆ ಎಂದು ಅಂಗಡಿ ಮಾಲೀಕ ಕೇಶವ ಆಚಾರ್ಯ ಬಂದರು ಠಾಣೆಗೆ ದೂರು ಸಲ್ಲಿಸಿದ್ದರು. ಆರೋಪಿ ಪತ್ತೆಗೆ, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲನೆ, ಮೊಬೈಲ್‌ ಟವರ್‌ನಲ್ಲಿ ದಾಖಲಾದ ಕರೆಗಳ ಮಾಹಿತಿ ವಿಶ್ಲೇಷಿಸಲು ಹಾಗೂ ವಿವಿಧ ಲಾಡ್ಜ್‌, ಹೋಟೆಲ್‌ಗಳನ್ನು ಪರಿಶೀಲಿಸಲು ತಂಡಗಳನ್ನು ರಚಿಸಲಾಗಿತ್ತು. ಸಿಸಿಟಿವಿ ದೃಶ್ಯಾವಳಿಗಳನ್ನು ಕೇರಳ ಪೊಲೀಸರೊಂದಿಗೆ ಹಂಚಿಕೊಳ್ಳಲಾಗಿತ್ತು. ಆರೋಪಿಯನ್ನು ಕಾಸರಗೋಡಿನಲ್ಲಿ ಗುರುವಾರ ಪತ್ತೆಹಚ್ಚಲಾಗಿದೆ. ದರೋಡೆ ಉದ್ದೇಶದಿಂದ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಡಿಸಿಪಿ ತಿಳಿಸಿದ್ದಾರೆ.

Previous articleವಿಚಾರಣೆ ಬಳಿಕ ಹಣದ ವಿಚಾರ ಸ್ಪಷ್ಟವಾಗಲಿದೆ
Next articleಲೋಕಾಯುಕ್ತದಿಂದ ಶಾಸಕರ ಪುತ್ರನ ಬಂಧನ: ನಿಷ್ಪಕ್ಷಪಾತ ತನಿಖೆಯಾಗಲಿದೆ