ಶ್ರೀರಂಗಪಟ್ಟಣ: ಕೌಟುಂಬಿಕ ಕಲಹ ಹಿನ್ನೆಲೆ ತಂದೆಯೇ ಮಕ್ಕಳಿಬ್ಬರನ್ನು ಸುತ್ತಿಗೆಯಿಂದ ಹೊಡೆದು ಹತ್ಯೆ ಮಾಡಿ ಪರಾರಿಯಾಗಿದ್ದು, ತಾಯಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶ್ರೀರಂಗಪಟ್ಟಣ ತಾಲ್ಲೂಕು ಮರಳಾಗಾಲ ಬಳಿಯ ತೋಟದ ಮನೆಯಲ್ಲಿ ನಡೆದಿದೆ.
ಆದಿತ್ಯ(4), ಅಮೂಲ್ಯ(3) ಕೊಲೆಯಾಗಿರುವ ಮಕ್ಕಳಾಗಿದ್ದು, ತಾಯಿ ಲಕ್ಷ್ಮಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಶ್ರೀಕಾಂತ್ ಮಕ್ಕಳನ್ನು ಕೊಲೆಗೈದು , ಪತ್ನಿಯ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವವರು ಲಕ್ಷ್ಮಿ(25) ಎನ್ನಲಾಗಿದೆ, ಇವರು ಗುಲ್ಬರ್ಗ ಮೂಲದವರಾಗಿದ್ದು, ಇವರ ಸಂಬಂಧಿಕರು ಇಲ್ಲಿನ ತೋಟವೊಂದರಲ್ಲಿ ಮೂರು ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದೆ. ಲಕ್ಷ್ಮಿತನ್ನ ಪತಿಯೊಂದಿಗೆ ಜಗಳ ಮಾಡಿಕೊಂಡು ಮಕ್ಕಳೊಂದಿಗೆ ವಾರದ ಹಿಂದೆಯಷ್ಟೇ ಇಲ್ಲಿಗೆ ಬಂದಿದ್ದರು ಎನ್ನಲಾಗಿದೆ. ಬುಧವಾರ ಹೆಂಡತಿ ಮಕ್ಕಳನ್ನು ಹುಡುಕಿಕೊಂಡು ಬಂದಿದ್ದ ಶ್ರೀಕಾಂತ್ ರಾತ್ರಿ ಬಾಡೂಟ ಸವಿದು, ಮದ್ಯರಾತ್ರಿ ವೇಳೆ ಮಕ್ಕಳನ್ನು ಹತ್ಯೆಗೈದು, ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಶ್ರೀರಂಗಪಟ್ಟಣ ಪೋಲೀಸರು ಆಗಮಿಸಿದ್ದು, ಪ್ರಕರಣದ ತನಿಖೆ ಕೈಗೊಂಡಿದ್ದಾರೆ.