ಚಿಕ್ಕೋಡಿ: ಮೂರನೇ ಮದುವೆ ಮಾಡುವ ದುರುದ್ದೇಶದಿಂದ ಮೊದಲ ಪತ್ನಿಯ ಸಹೋದರಿ ಹಾಗೂ ಆಕೆಯ ತಾಯಿ ಹಾಗೂ ಸಹೋದರನ ಜೊತೆಗೆ ಸೇರಿ ಗರ್ಭಿಣಿ ಪತ್ನಿ ರಾತ್ರಿ ಮಲಗಿದ್ದಾಗ ಕೈ, ಕಾಲು ಹಿಡಿದು ಮುಖಕ್ಕೆ ತಲೆಯ ದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಚಿಕ್ಕೋಡಿಯ ೭ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಕಾಗವಾಡ ತಾಲೂಕಿನ ಉಗಾರ ಕೆ.ಎಚ್. ಗ್ರಾಮದ ಸದ್ದಾಂ ಅಮಿನ್ ಬಾಗೆ, ಸದ್ದಾಂನ ಮೊದಲ ಪತ್ನಿಯ ಸಹೋದರಿ ವಿನಾಯಕವಾಗಿ ಗ್ರಾಮದ ಆಫ್ರೀನ್ ಸಿರಾಜ್ ನಾಗನೂರೆ, ಆಫ್ರೀನ್ ತಾಯಿ ಜೈನಾಜ್ ಸಿರಾಜ್ ನಾಗನೂರೆ, ಸಹೋದರ ಸುಲ್ತಾನ್ ಸಿರಾಜ್ ನಾಗನೂರೆ ಶಿಕ್ಷೆಗೆಗೊಳಗಾದವರು.
ಪ್ರಕರಣದ ಹಿನ್ನೆಲೆ: ಐನಾಪೂರ ಗ್ರಾಮದ ಯುಸೂಫ್ ರಸೂಲ್‌ಸಾಬ್ ಮುಲ್ಲಾ ಇವರ ಮಗಳಾದ ಸುಮಯ್ಯಾ (೨೨) ಇವಳನ್ನು ೨೦೨೦ರ ಏಪ್ರಿಲ್‌ನಲ್ಲಿ ಸದ್ದಾಂನೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಈಕೆ ಗರ್ಭಿಣಿಯೂ ಆಗಿದ್ದಳು. ಆದರೆ, ಮೊದಲ ಪತ್ನಿಯ ಸಹೋದರಿ ಆಫ್ರೀಳನ್ನು ಸದ್ದಾಂ ಜೊತೆಗೆ ಮದುವೆ ಮಾಡುವುದಕ್ಕಾಗಿ ಪತಿ ಸದ್ದಾಂ, ಆಫ್ರೀನ್, ಈಕೆಯ ತಾಯಿ ಜೈನಾಜ್, ಸಹೋದರ ಸುಲ್ತಾನ್ ಸೇರಿಕೊಂಡು ೨೦೨೦ರ ಡಿಸೆಂಬರ್ ೧೭ರಂದು ರಾತ್ರಿ ಗಂಡನ ಮನೆಯಲ್ಲಿ ಮಲಗಿದ್ದಾಗ ನಾಲ್ವರೂ ಸೇರಿ ಕೈಕಾಲು ಹಿಡಿದು ಮುಖಕ್ಕೆ ತಲೆದಿಂಬು ಒತ್ತಿ ಉಸಿರುಗಟ್ಟಿಸಿ ಸುಮಯ್ಯಾಳನ್ನು ಹತ್ಯೆ ಮಾಡಿದ್ದರು.
ಈ ಕುರಿತು ಪ್ರಕರಣ ಕಾಗವಾಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡಿದ್ದ ಆಗಿನ ಪಿಎಸ್‌ಐ ಎಚ್.ಎಲ್. ಧರ್ಮಟ್ಟಿ ಹಾಗೂ ಅಥಣಿ ಸಿಪಿಐ ಶಂಕರಗೌಡ ಬಸನಗೌಡರ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು. ಸರಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ವೈ.ಜಿ. ತುಂಗಳ ವಾದ ಮಂಡಿಸಿದ್ದರು.
ವಾದ ಆಲಿಸಿದ ೭ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎಸ್.ಎಲ್. ಚವ್ಹಾಣ ಅವರು ನಾಲ್ವರು ಹಂತಕರಿಗೆ ಜೀವಾವಧಿ ಶಿಕ್ಷೆ ಹಾಗೂ ೨೦ ಸಾವಿರ ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.