ಕ್ರೇನ್ ಕುಸಿದು ಬಿದ್ದು ಇಬ್ಬರ ಸಾವು

0
32
ಗಣೇಶ ವಿಸರ್ಜನೆ

ಹೊಸಪೇಟೆ: ಗಣೇಶ ವಿಸರ್ಜನೆ ವೇಳೆ ಕ್ರೇನ್ ಕುಸಿದು ಬಿದ್ದು ಇಬ್ಬರು ಯುವಕರು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ನಗರದ ಟಿ.ಬಿ. ಡ್ಯಾಂನಲ್ಲಿ ಶನಿವಾರ ತಡರಾತ್ರಿ ಸಂಭವಿಸಿದೆ.
ಟಿ.ಬಿ. ಡ್ಯಾಂನ ಇವಿ ಕ್ಯಾಂಪ್ ನಿವಾಸಿಗಳಾದ ಅಶೋಕ್(೧೮) ಸಾಯಿ ನಿಖಿಲ್(೧೬) ಎಂಬುವರೇ ಸಾವನ್ನಪ್ಪಿದ ಯುವಕರು.
ಟಿ.ಬಿ.ಡ್ಯಾಂನ ಗಣಪತಿ ಮಹಾಮಂಡಳಿ ಪ್ರತಿಷ್ಠಾಪಿಸಿದ 34 ಅಡಿ ಎತ್ತರದ ಗಣಪತಿಯನ್ನು ವಿಸರ್ಜನೆಗೆ ಒಯ್ಯಲಾಗುತ್ತಿತ್ತು. ಲಾರಿ ಮೂಲಕ ಟಿ.ಬಿ.ಡ್ಯಾಂ ಹೊರವಲಯದ ಎಲ್.ಎಲ್.ಸಿ. ಕಾಲುವೆ ಬಳಿಯ ಗಣೇಶ ದೇವಸ್ಥಾನ ಬಳಿ ವಿಸರ್ಜನೆ ಮಾಡಲು ತರಲಾಗಿತ್ತು. ಬೃಹದಾಕಾರದ ಗಣೇಶನನ್ನು ಹೊತ್ತಿದ್ದ ಕ್ರೇನ್ ಕುಸಿದು ಬಿದ್ದು, 18 ವರ್ಷದ ಅಶೋಕ್ ಕ್ರೇನ್ ಅಡಿಯಲ್ಲಿ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಮತ್ತೋರ್ವ ಯುವಕ ಸಾಯಿ ನಿಖಿಲ್(16) ಗಾಯಗೊಂಡಾಗ ಕೊಪ್ಪಳ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಯಿತು. ಗಂಭೀರವಾಗಿ ಗಾಯಗೊಂಡಿದ್ದ ಸಾಯಿ ನಿಖಿಲ್ ಭಾನುವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.
ಸುದ್ದಿ ತಿಳಿದ ಟಿ.ಬಿ.ಡ್ಯಾಂ ಪೊಲೀಸರು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮೃತದೇಹ ಹಾಗೂ ಗಾಯಾಳುವನ್ನು ಹೊರ ತೆಗೆದರು. ಘಟನೆಗೆ ಸಂಬಂಧಿಸಿದಂತೆ ಗಣಪತಿ ಮಹಾಮಂಡಳಿ ಹಾಗೂ ಕ್ರೇನ್ ಚಾಲಕ ರಾಜು ವಿರುದ್ಧ ಎಫ್.ಐ.ಆರ್. ದಾಖಲಿಸಲಾಗಿದೆ.

Previous articleಬೆಕ್ಕಿನ ಮರಿಗೆ ಹುಲಿ ಬಣ್ಣ ಬಳಿದು ಮಾರಾಟಕ್ಕೆ ಯತ್ನ
Next articleಬಿಜೆಪಿ ವಿಧಾನಸಭಾ ಚುನಾವಣೆಗೆ ಸನ್ನದ್ಧವಾಗಿದೆ: ಕೇಂದ್ರ ಸಚಿವ ಜೋಶಿ