ಇಬ್ಬರು ಮಕ್ಕಳನ್ನು ಬೆನ್ನಿಗೆ ಕಟ್ಟಿಕೊಂಡು ಬಾವಿಗೆ ಹಾರಿದ ತಂದೆ

0
14

ಕಲಬುರಗಿ: ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ತಂದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ, ಅಪ್ಪಂದಿರ ದಿನಾಚರಣೆಯ ದಿನವೇ ಮನಕಲುಕುವ ಈ ಘಟನೆ ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಕುಂಚಾವರಂ ಬಳಿಯ ಪೋಚಾವರಂನಲ್ಲಿ ನಡೆದಿದೆ. ಮೃತರನ್ನು 36 ವರ್ಷದ ಹಣಮಂತ ಹಾಗೂ 6 ವರ್ಷದ ಅಕ್ಷತಾ, 9 ವರ್ಷದ ಓಕಾಂ ಎಂದು ಗುರುತಿಸಲಾಗಿದೆ.
ಮೃತ ಹಣಮಂತ ಪತ್ನಿ ಮಕ್ಕಳೊಂದಿಗೆ ಹೈದರಾಬಾದ್​ನಲ್ಲಿ ನೆಲೆಸಿದ್ದ. ನಿನ್ನೆ ಮಕ್ಕಳೊಂದಿಗೆ ಹೈದರಾಬಾದ್​ನಿಂದ ಸ್ವಗ್ರಾಮ ಪೋಚಾವರಂಗೆ ಬಂದಿದ್ದ ಹಣಮಂತ, ಇಬ್ಬರು ಮಕ್ಕಳನ್ನು ಕೊಂಡು ತಾನು ಸಾವಿಗೆ ಶರಣಾಗಿದ್ದಾನೆ. ಘಟನೆ ಕುರಿತು ಮಾಹಿತಿ ಪಡೆದುಕೊಂಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತ ದೇಹಗಳನ್ನು ಬಾವಿಯಿಂದ ಹೊರ ತೆಗೆದಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಕುಂಚಾವರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸಾಯುವ ಮುಂಚೆ ಸಹೋದರನಿಗೆ ಕರೆ
ಕುಂಚಾವರಂ ನಿವಾಸಿಯಾಗಿದ್ದ ಹಣಮಂತ ತೆಲಂಗಾಣದ ತಾಂಡೂರಿನಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿಯೇ ಮನೆ ಕಟ್ಟಿಕೊಂಡು ನೆಲೆಸಿದ್ದಾನೆ. ಹೈದರಾಬಾದ್​ನಿಂದ ಇತ್ತೀಚೆಗೆ ಹಣಮಂತ ತನ್ನ ಮಕ್ಕಳೊಂದಿಗೆ ಸ್ವಗ್ರಾಮ ಕುಂಚಾವರಕ್ಕೆ ಬಂದಿದ್ದ. ಶುಕ್ರವಾರ ತನ್ನ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಸಹೋದರ ಗೋಪಾಲ ಅವರಿಗೆ ಕರೆ ಮಾಡಿ ಮಕ್ಕಳೊಂದಿಗೆ ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ನೀನು ನಮ್ಮೆಲ್ಲರ ಮೃತದೇಹಗಳನ್ನು ತೆಗೆದು ಅಂತ್ಯಕ್ರಿಯೆ ನಡೆಸುವಂತೆ ಕೋರಿದ್ದನಂತೆ.
ಇದರಿಂದ ಗಾಬರಿಗೊಂಡ ಸಹೋದರ ಗೋಪಾಲ, ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಕರ್ನಾಟಕ ಮತ್ತು ತೆಲಂಗಾಣ ಪೊಲೀಸರು ತಕ್ಷಣ ಕಾರ್ಯ ಪ್ರವೃತ್ತರಾಗಿ ಅಗ್ನಿ ಶಾಮಕ ದಳದ ನೆರವಿನೊಂದಿಗೆ ಹಲವಾರು ಬಾವಿಗಳಲ್ಲಿ ಶೋಧನ ಕಾರ್ಯ ನಡೆಸಿದ್ದಾರೆ. ಕೊನೆಗೆ ಕುಂಚಾವರಂ ಗ್ರಾಮದ ಬಳಿಯ ಪೋಚಾವರಂ ಗ್ರಾಮದ ತೋಟದ ಭಾವಿಯಲ್ಲಿ ಭಾನುವಾರ ಮೂವರ ಶವ ಪತ್ತೆಯಾಗಿದೆ. ಮೃತದೇಹಗಳನ್ನು ಮರಣೊತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸಾವಿಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಈ ಕುರಿತು ಕುಂಚಾವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕಾರ್ಯ ಮುಂದುವರಿದಿದೆ.

Previous articleಎಸ್ಟಿ ಸಮುದಾಯದವರು ಸಿಎಂ ಆಗಬೇಕೆಂಬುದೇ ನಮ್ಮ ಗುರಿ
Next articleತಾಳ್ಮೆ ಮತ್ತು ಏಕನಿಷ್ಠೆ