ಬಾಗಲಕೋಟೆ : ಅವನ ಮತ್ತು ಅವಳ ಮಧ್ಯೆ ಇನ್‌ಸ್ಟಾಗ್ರಾಂನಲ್ಲಿ ಲವ್…ಅಂಕುರಿಸಿದೆ!! ಬಿಹಾರದಿಂದ ಈ ಕನ್ಯೆ… ಹಾರಿ ಬಾಗಲಕೋಟೆಗೆ ಬಂದಿದ್ದಾಳೆ.. ೧೫ ದಿನಗಳವರೆಗೆ ಮನದ ಮನ್ಮಥನೊಂದಿಗೆ ಕಾಲ ಕಳೆದಿದ್ದಾಳೆ… ಮದುವೆ ವಿಚಾರ ಬರುತ್ತಿದ್ದಂತೆಯೇ ಈ ಮಹಾಶಯ ತನ್ನ ನೆಲೆ ಬಾಗಲಕೋಟೆಯಿಂದಲೇ ಹಾರಿ ಹೋಗಿದ್ದಾನೆ…
ಅಂದರೆ ನಾಪತ್ತೆಯಾಗಿದ್ದಾನೆ…!
ಇಂಥದ್ದೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಮನದ ಮನ್ಮಥನನ್ನು ವರಿಸಲು ಬಿಹಾರದಿಂದ ಬಂದಿದ್ದ ನರೀಜಾ ಬೇಗಂ ಪೊಲೀಸ್ ಠಾಣೆಯ ಕಟ್ಟೆ ಏರಿದ ನಂತರ…
ಹೌದು ಇವಳು ಬಿಹಾರ ಮೂಲದವಳೇ.. ಆದರೆ ಈ ಮನ್ಮಥ ಬಾಗಲಕೋಟೆಯ ಮೊಹ್ಮದ ಇಮ್ರಾನ್ ಕೆಲಾರಿ. ಈ ಬಿಹಾರಿಯಲ್ಲಿ ಪ್ರೇಮ ಅಂಕುರಗೊಳ್ಳುವಂತೆ ಮಾಡಿದ್ದಾನೆ. ಅವಳು ಇವನನ್ನೇ ಅರಸಿಕೊಂಡು ಬಂದಿದ್ದಾಳೆ. ೧೫ ದಿನಗಳ ಕಾಲ ಕಳೆದಿದ್ದಾರೆ. ಅವರಿಬ್ಬರ ಮಧ್ಯೆ ಅದಾವ ವೈ ಮನಸ್ಸು ಉಂಟಾಯಿತೋ… ಇಲ್ಲವೇ ಆತನೇ ಇವಳ ಪ್ರೇಮ ಶಕ್ತಿ ಎದುರಿಸಲಾರದೇ ಹೋದನೋ ಗೊತ್ತಿಲ್ಲ. ಈಗ ತನ್ನ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾನೆ.
ನವನಗರದ ಮಹಿಳಾ ಪೊಲೀಸ್ ಠಾಣೆಗೆ ಬಂದು ತನ್ನ ಮೋಹನಾಂಗ(ಮೊಹ್ಮದ ಇಮ್ರಾನ್ ಕೆಲಾರಿ)ನನ್ನು ಹುಡುಕಿಕೊಡುವಂತೆ ಗೋಗರೆದಿದ್ದಾಳೆ. ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ಕೊಡು ನಾವು ಹುಡುಕುತ್ತೇವೆ ಎಂದು ಹೇಳಿದರೂ ಕೂಡ ನರೀಜಾ ಬೇಗಂ ಮಾತ್ರ ದೂರು ಕೊಡಲು ಸರ್ವಥಾ ಸಿದ್ಧಳಿಲ್ಲ. ಕಾರಣ ಅವನ ಬಗ್ಗೆ ಅವಳಿಗೆ ಎಳ್ಳಷ್ಟು ದ್ವೇಷವಿಲ್ಲವೆಂದೆ ಹೇಳುತ್ತಾಳೆ. ದೂರು ಕೊಡುವದು ಬೇಡ. ನನಗೆ ಆತನನ್ನು ಹುಡುಕಿಕೊಡಿ, ಮದುವೆಯಾಗಿ ಬಾಳ್ವೆ ಮಾಡುವೆ. ಎನ್ನುತ್ತಿದ್ದಾಳಂತೆ… ಆದರೆ ಈ ಮೊಹ್ಮದ್ ಇಮ್ರಾನ್ ಕೆಲಾರಿಗೆ ಈ ಮೊದಲು ಮದುವೆಯಾಗಿ ಮೊದಲನೇ ಹೆಂಡತಿಗೆ ಮೂರು ಬಾರಿ ತಲಾಖ್ ಹೇಳಿದ್ದಾನಂತೆ. ಆದರೂ ಅವನನ್ನೇ ಮದುವೆಯಾಗುವ ಆಸೆ ಇಟ್ಟುಕೊಂಡಿದ್ದಾಳೆ. ಆದರೆ ಮರಳಿ ಬಿಹಾರಕ್ಕೆ ತೆರಳುವ ಮನಸ್ಸಿಲ್ಲವೆಂದು ಹೇಳುತ್ತಿದ್ದಾಳೆ.
ನವನಗರದ ಪೊಲೀಸ್ ಠಾಣೆಯ ಪೊಲಿಸರ ಮನಸ್ಸಿಗೆ ಅಯ್ಯೋ ಅನಿಸಿರಲಿಕ್ಕೆ ಸಾಕು. ಹೀಗಾಗಿ ಆಕೆಯನ್ನು ಸಖಿ ಸಹಾಯವಾಣಿ ಮೂಲಕ ಆಪ್ತ ಸಮಾಲೋಚನೆ ಮಾಡಲಾಗುತ್ತಿದೆ. ಅವಳ ಪ್ರಿಯಕರ ಮೊಹಮ್ಮದ್‌ನನ್ನು ಹುಡುಕುವ ಕೆಲಸದಲ್ಲೂ ಪೊಲೀಸರು ನಿರತರಾಗಿದ್ದಾರೆ.