ಕಲಬುರಗಿ: ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ ೧೫೦ ಮೇಲೆ ಭೀಕರ ಅಪಘಾತ ಸಂಭವಿಸಿದ್ದು, ೬ ಪ್ರಯಾಣಿಕರು ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ಗುರುವಾರ ಸಂಜೆ ನಡೆದಿದೆ.
ವಾಡಿ ಪಟ್ಟಣದಿಂದ ನಾಲವಾರ ಕಡೆ ತೆರಳುತ್ತಿದ್ದ ಟಂಟಂ ವಾಹನಕ್ಕೆ ಬೂದಿ ತುಂಬಿದ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ, ವಾಹನದಲ್ಲಿದ್ದ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಚಿತ್ತಾಪುರ ತಾಲೂಕಿನ ನಾಲವಾರ ಗ್ರಾಮದ ವಾರ್ಡ್ ನಂ.೧ ಅಕಾನಿ ಮಸ್ಜಿದ್ ಹತ್ತಿರದ ಮನೆಯವರಾಗಿದ್ದಾರೆ. ನಜ್ಮಿನ್ ಬೇಗಂ (೨೮), ಬೀಬಿ ಫಾತಿಮಾ(೧೨), ಅಬೂಬಕ್ಕರ್(೪), ಬೀಬಿ ಮರಿಯಮ್(೩ ತಿಂಗಳು), ಮಹ್ಮದ್ ಪಾಷಾ(೨೦) ಹಾಗೂ ಆಟೋ ಚಾಲಕ ಬಾಬಾ(೩೫) ಸ್ಥಳದಲ್ಲಿಯೇ ಮೃತಪಟ್ಟವರು. ೧೦ ವರ್ಷದ ಬಾಲಕ ಮಹ್ಮದ್ ಹುಸೇನ್ ಗಾಯಗೊಂಡಿದ್ದಾನೆ.
ಆಧಾರ್ ಕಾರ್ಡ್ ತಿದ್ದುಪಡಿ ಎಂದು ಚಿತ್ತಾಪುರಕ್ಕೆ ಹೋಗಿದ್ದ ಕುಟುಂಬಸ್ಥರು ಮರಳಿ ನಾಲವಾರಕ್ಕೆ ತೆರಳುತ್ತಿದ್ದಾಗ ಹಲಕರ್ಟಿ ಸಮೀಪ ವೇಗವಾಗಿ ಬರುತ್ತಿದ್ದ ಬೂದಿ ತುಂಬಿದ್ದ ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ನಂತರ ಸುಮಾರು ೧೦೦ ಅಡಿಗೂ ಅಧಿಕ ದೂರ ಎಳೆದುಕೊಂಡು ಹೋಗಿದ್ದು, ದೇಹಗಳು ಛಿದ್ರಗೊಂಡು ಹೆದ್ದಾರಿ ತುಂಬಾ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಈ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.