ಅಮೆರಿಕಾದಲ್ಲಿ ದಂಪತಿ ನಿಗೂಢ ಸಾವು ಪ್ರಕರಣಕ್ಕೆ ಟ್ವಿಸ್ಟ್!

0
9

ದಾವಣಗೆರೆ: ದಾವಣಗೆರೆ ಮೂಲದ ದಂಪತಿ ಹಾಗೂ ಮಗು ಅಮೆರಿಕಾದಲ್ಲಿ ನಿಗೂಢವಾಗಿ ಸಾವು ಕಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಯೋಗೇಶ್ ಹೊನ್ನಾಳ ಪತ್ನಿ ಹಾಗೂ ಮಗುವಿಗೆ ಗುಂಡು ಹಾರಿಸಿ, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನುವ ಮಾಹಿತಿ ಹೊರಬಿದ್ದಿದೆ.
ಅಮೇರಿಕಾದ ಮೇರಿಲ್ಯಾಂಡ್‌ನ ಬಾಲ್ಟಿಮೋರ್‌ನಲ್ಲಿ ಕಳೆದ ೯ವರ್ಷಗಳಿಂದ ವಾಸವಿದ್ದ ಆವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಹಾಲೇಕಲ್ಲು ಗ್ರಾಮದ ಯೋಗೇಶ್ ಹೊನ್ನಾಳ (೩೭), ಪ್ರತಿಭಾ (೩೫) ಹಾಗೂ ಪುತ್ರ ಯಶ್ (೬) ಶನಿವಾರ ಮೃತಪಟ್ಟಿದ್ದರು. ಸಾವಿಗೆ ನಿಖರ ಕಾರಣ ತಿಳಿದುಬಂದಿರಲಿಲ್ಲ. ಆದರೆ, ಈಗ ಶಾಕಿಂಗ್ ಮಾಹಿತಿಯೊಂದು ಹೊರಬಿದ್ದಿದೆ.
ಕಳೆದ ೯ ವರ್ಷಗಳ ಹಿಂದೆ ವಿವಾಹವಾಗಿದ್ದ ದಂಪತಿ ಆರು ವರ್ಷದ ಮಗುವಿನೊಂದಿಗೆ ಬಾಲ್ಟಿಮೋರ್‌ನಲ್ಲಿ ವಾಸವಿದ್ದರು. ಪತಿ-ಪತ್ನಿ ಇಬ್ಬರೂ ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದರು. ಹೊರದೇಶದಲ್ಲಿ ಒಂದಷ್ಟು ಸಂಪಾದನೆ ಮಾಡಿ ಮರಳಿ ಭಾರತಕ್ಕೆ ಬರುವ ಆಶಯ ಇಟ್ಟುಕೊಂಡಿದ್ದ ದಂಪತಿ ಈಗ ಈ ರೀತಿ ನಿಗೂಢವಾಗಿ ಸಾವನ್ನಪ್ಪಿರುವುದರ ಹಿಂದೆ ಕಾರಣ ಮಾತ್ರ ನಿಗೂಢವಾಗಿ ಉಳಿದಿದೆ.
ಯೋಗೇಶ್ ಗುಂಡು ಹಾರಿಸಿ ಪತ್ನಿ, ಮಗುವನ್ನು ಕೊಂದು, ತಾವು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಎಂಬುದು ತನಿಖೆಯಿಂದಷ್ಟೇ ಹೊರಬೀಳಬೇಕಿದೆ. ಇತ್ತ ಕುಟುಂಬದವರು ಮೃತರನ್ನು ಸ್ವದೇಶಕ್ಕೆ ಕರೆತರುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವಾನ ಹೇಳಿದ್ದಾರೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವಣಗೆರೆ ಮೂಲದ ಮೂವರು ಅಮೆರಿಕದ ಬಾಲ್ಟಿಮೋರ್‌ನಲ್ಲಿ ಅಸ್ವಾಭಾವಿಕ ಸಾವು ಕಂಡಿದ್ದು, ಕುಟುಂಬದ ಕೋರಿಕೆ ಮೇರೆಗೆ ಅಮೆರಿಕದಲ್ಲಿರುವ ಕನ್ಸಲ್ ಜನರಲ್ ಮಂಜುನಾಥ್, ಡೆಪ್ಯೂಟಿ ಜನರಲ್ ವರುಣ್ ಅವರನ್ನು ಆನ್‌ಲೈನ್ ಮುಖಾಂತರ ಸಂಪರ್ಕ ಮಾಡಿದ್ದೇವೆ. ಕೌನ್ಸಿಲ್ ಮಾಹಿತಿ ರವಾನೆ ಮಾಡಲಾಗಿದೆ. ಮೃತ ದೇಹಗಳನ್ನು ದಾವಣಗೆರೆಗೆ ತರುವ ಕುರಿತು ಚರ್ಚೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ಸ್ಥಳೀಯ ಪೊಲೀಸರು ಅಸ್ವಾಭಾವಿಕ ಸಾವು ಎಂದು ಮಾಹಿತಿ ನೀಡಿದ್ದಾರೆ. ತನಿಖೆ ಪೂರ್ಣಗೊಳಿಸಿದ ನಂತರ ಮೃತದೇಹಗಳನ್ನು ತವರಿಗೆ ತರಬೇಕಾ ಅಥವಾ ಅಲ್ಲಿಯೇ ಅಂತ್ಯಕ್ರಿಯೆ ಮಾಡಬೇಕು ಎಂಬ ಕುರಿತು ಕುಟುಂಬಸ್ಥರ ಜೊತೆ ಚರ್ಚೆ ನಡೆಯುತ್ತಿದೆ ಕುಟುಂಬಸ್ಥರ ಕೋರಿಕೆಯಂತೆ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು. ಈಗಾಗಲೇ ಪ್ರತಿ ಎರಡು ಗಂಟೆಗೊಮ್ಮೆ ಅಮೆರಿಕ ಕೌನ್ಸಿಲ್ ಸಂಪರ್ಕ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸಂಸದ ಜಿ.ಎಂ. ಸಿದ್ದೇಶ್ವರ್ ಈ ಬಗ್ಗೆ ಮಾತನಾಡಿದ್ದು, ಅನುಮಾನಾಸ್ಪದವಾಗಿ ಸಾವುಕಂಡಿರುವ ಮೂವರ ಮೃತದೇಹಗಳನ್ನು ದಾವಣಗೆರೆ ತರಿಸಲು ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ ಹಾಗೂ ವಿದೇಶಾಂಗ ಖಾತೆ ರಾಜ್ಯ ಸಚಿವರಾದ ವಿ.ಮುರಳೀಧರನ್ ಮತ್ತು ಮೀನಾಕ್ಷಿ ಲೇಖಿ ಮತ್ತು ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಹಾಗೂ ಅಮೆರಿಕದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಮನವಿ ಮಾಡಲಾಗಿದ್ದು, ಶೀಘ್ರವಾಗಿ ಮೃತದೇಹಗಳನ್ನು ಭಾರತಕ್ಕೆ ತರುವ ಸರ್ವ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

Previous articleರಷ್ಯಾದ ಲೂನಾ-25 ಬಾಹ್ಯಾಕಾಶ ನೌಕೆ ಚಂದ್ರನ ಮೇಲ್ಮೈ ಮೇಲೆ ಪತನ
Next articleಚಂದ್ರಯಾನ-3: ಆಗಸ್ಟ್‌ 23ರ ಸಂಜೆ ಚಂದ್ರನ ಅಂಗಳಕ್ಕೆ