ಅನುಮಾನಾಸ್ಪದ ಸಾವು: ಮೃತನ ಪುತ್ರಿ ಗಂಭೀರ ಆರೋಪ

0
14
ಲಾಕಪ್‌ ಡೆತ್‌

ಬೆಳಗಾವಿ: ಪೊಲೀಸರ ವಶದಲ್ಲಿದ್ದ ಗಾಂಜಾ ಪ್ರಕರಣದ ಆರೋಪಿ ಬಸನಗೌಡ ಈರನಗೌಡ ಪಾಟೀಲ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು ತಮ್ಮ ತಂದೆಯದ್ದು ಲಾಕಪ್ ಡೆತ್ ಎಂದು ಮೃತರ ಪುತ್ರಿ ಗಂಭೀರ ಆರೋಪ ಮಾಡಿದ್ದಾರೆ.
ನಿನ್ನೆ ಪೊಲೀಸರ ವಶದಲ್ಲಿದ್ದ ಆರೋಪಿ ಬಸನಗೌಡ ಈರನಗೌಡ ಪಾಟೀಲ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಈ ಬಗ್ಗೆ ಪುತ್ರಿ ರೋಹಿಣಿ ಪಾಟೀಲ ಶನಿವಾರ ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಿದ್ದು, `ನನ್ನ ತಂದೆಯವರದ್ದು ಸಹಜ ಸಾವಲ್ಲ, ಹೃದಯಾಘಾತವೂ ಅಲ್ಲ. ಪೊಲೀಸರು ಚಿತ್ರಹಿಂಸೆ ನೀಡಿ ಅವರನ್ನು ಕೊಂದಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ನನ್ನ ತಂದೆಯ ವಿರುದ್ಧ ಸುಳ್ಳು ಕೇಸ್ ಹಾಕಲಾಗಿದೆ. ನಮಗೆ ನ್ಯಾಯ ಸಿಗಬೇಕು. ಅವರಿಗೆ ಬಿಪಿ, ಶುಗರ್ ಸೇರಿ ಯಾವುದೇ ಸಮಸ್ಯೆ ಇರಲಿಲ್ಲ. ನಮ್ಮ ತಂದೆಯ ಕೈಗೆ ಹಗ್ಗ ಕಟ್ಟಿ, ಚಿತ್ರಹಿಂಸೆ ನೀಡಿದ್ದು ಪೊಲೀಸ್ ಠಾಣೆಯಲ್ಲಿ ಮೃತಪಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಪೊಲೀಸರು ನಿನ್ನೆ ಮಧ್ಯಾಹ್ನ ನನ್ನ ತಂದೆಯನ್ನು ಕರೆದುಕೊಂಡು ಹೋಗಿದ್ದಾರೆ. ರಾತ್ರಿ ನಮಗೆ ಫೋನ್ ಮಾಡಿ ತಕ್ಷಣ ಬನ್ನಿ ಎಂದು ಪೊಲೀಸರು ಹೇಳಿದ್ದಾರೆ. ರಾತ್ರಿ 10ಕ್ಕೆ ಬಂದು ನೋಡಿದಾಗ ತಂದೆ ಬೆಡ್ ಮೇಲೆ ಇದ್ದರು. ವೈದ್ಯರು ಇನ್ನೂ ಜೀವಂತವಾಗಿದ್ದಾರೆ ಅಂತ ಹೇಳಿದ್ರು. ನಾನು ಪ್ಯಾರಾಮೆಡಿಕಲ್ ವಿದ್ಯಾರ್ಥಿನಿಯಾಗಿದ್ದರಿಂದ ತಂದೆಯ ಪಲ್ಸ್ ನೋಡಿದೆ. ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ಆ ಮೇಲೆ ವೈದ್ಯರು ನಿಮ್ಮ ತಂದೆ ಇನ್ನಿಲ್ಲ ಎಂದು ಹೇಳಿದರು.
ನನ್ನ ತಂದೆಯವರಿಗೆ ಠಾಣೆಯಲ್ಲಿ ಪೊಲೀಸರು ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದಾರೆ. ಅವರ ಎರಡು ಕೈಗಳ ಮೇಲೆ ಹಗ್ಗ ಕಟ್ಟಿರೋ ಮಾರ್ಕ್ ಇದೆ. ಅವರಿಗೆ ಹೃದಯಾಘಾತದ ಲಕ್ಷಣ ಕಂಡು ಬಂದರೆ ಆಸ್ಪತ್ರೆಗೆ ಕರೆತರಬೇಕಾಗಿತ್ತು. ಆದರೆ ಠಾಣೆಗೆ ಯಾಕೆ ಕರೆದೊಯ್ದರು ಎಂದು ಪ್ರಶ್ನೆ ಮಾಡಿದ್ದಾರೆ. ನಮ್ಮ ಕುಟುಂಬದ ದೀಪ ಆರಿಹೋಗಿದೆ. ನಾನು, ನಮ್ಮ ಅಣ್ಣ ಇನ್ನೂ ಓದಬೇಕು. ತಂದೆಯ ವಿರುದ್ಧ ಕೇಸ್ ಇರೋ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ನಮ್ಮ ತಂದೆಯ ಜೀವಕ್ಕೆ ನ್ಯಾಯ ಬೇಕು. ಈ ಬಗ್ಗೆ ನ್ಯಾಯಾಧೀಶರಿಗೆ ಹೇಳಿಕೆ ನೀಡಿದ್ದೇನೆ ಎಂದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದ ಬೆಳಗಾವಿ ನಗರ ಪೊಲೀಸ್ ಕಮಿಷನರ್ ಡಾ.ಬಿ.ಎಂ.ಬೋರಲಿಂಗಯ್ಯ ಅವರು, ಈ ಕುರಿತು ಸಿಐಡಿ ತನಿಖೆಗೆ ಶಿಫಾರಸು ಮಾಡಿರುವುದಾಗಿ ಹೇಳಿದ್ದರು. ತನಿಖೆ ನಂತರ ಸತ್ಯಾಸತ್ಯತೆ ತಿಳಿದು ಬರಲಿದೆ ಎಂದಿದ್ದಾರೆ.

Previous articleರಾಷ್ಟ್ರಪತಿ ಬಗ್ಗೆ ಟಿಎಂಸಿ ಸಚಿವ ಅಖಿಲ್ ಹೇಳಿಕೆ: ವ್ಯಾಪಕ ಆಕ್ರೋಶ
Next articleಕಲ್ಲೆಂಬಿಯಲ್ಲಿ ಗುಹೆ ಪತ್ತೆ