ಅಂಬೋಲಿ ಘಾಟ್‌ನಲ್ಲಿ ಪ್ರಪಾತಕ್ಕೆ ಬಿದ್ದ ಲಾರಿ: ಚಾಲಕ ಸಾವು

accident

ಖಾನಾಪುರ: ಮಹಾರಾಷ್ಟ್ರದ ಅಂಬೋಲಿ ಘಾಟ್‌ನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಪ್ರಪಾತಕ್ಕೆ ಬಿದ್ದಿದ್ದರಿಂದ ಸಂಭವಿಸಿದ ರಸ್ತೆ ಅಪಘಾತದಲ್ಲಿ ಲಾರಿ ಚಾಲಕ, ತಾಲೂಕಿನ ನಂದಗಡ ಗ್ರಾಮದ ಶಂಕರ ಪಾಟೀಲ(೩೬) ಸ್ಥಳದಲ್ಲೇ ಸಾವನ್ನಪಿದ ಘಟನೆ ಸೋಮವಾರ ವರದಿಯಾಗಿದೆ.
ಭಾನುವಾರ ರಾತ್ರಿ ಮಹಾರಾಷ್ಟ್ರದ ಸಿಂಧದುರ್ಗ ಜಿಲ್ಲೆಯಿಂದ ಚೀರೆಖಾನಿ ಇಟ್ಟಿಗೆಗಳನ್ನು ತುಂಬಿಕೊಂಡು ಹೊರಟಿದ್ದ ಲಾರಿ ಸೋಮವಾರ ನಸುಕಿನ ಜಾವ ಬೆಳಗಾವಿಯತ್ತ ಬರುವಾಗ ಮಾರ್ಗ ಮಧ್ಯದ ಅಂಬೋಲಿ ಜಲಪಾತದಿಂದ ೪ ಕಿಮೀ ಅಂತರದ ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ಪ್ರಪಾತಕ್ಕೆ ನುಗ್ಗಿದ್ದರಿಂದ ಈ ಅವಘಡ ಸಂಭವಿಸಿದೆ. ಅಂಬೋಲಿ ಪೊಲೀಸ್ ಹೊರಠಾಣೆಯ ಪೊಲೀಸರು ತಜ್ಞರ ನೆರವಿನಿಂದ ಪ್ರಪಾತದಲ್ಲಿ ಬಿದ್ದಿದ್ದ ಲಾರಿಯಲ್ಲಿ ಸಿಲುಕಿದ್ದ ಶಂಕರ ಅವರ ಶವವನ್ನು ಹೊರತೆಗೆದಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸಂಬಂಧಿಕರಿಗೆ ಹಸ್ತಾಂತರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.