ಕೀರ್ತಿಶೇಖರ, ಕಾಸರಗೋಡು
ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿ ಕ್ರಾಂತಿಯ ನೆಲ. ಬ್ರಿಟೀಷರ ವಿರುದ್ಧ ತೊಟೆ ತಟ್ಟಿ ನಿಂತ ಸ್ವಾತಂತ್ರ್ಯ ಹೋರಾಟದ ಬೆಳ್ಳಿಚುಕ್ಕಿ ವೀರ ಚೆನ್ನಮ್ಮಾಜಿಯವರ ಜನ್ಮ-ಕರ್ಮ ಭೂಮಿ.
ಅದೇ ರೀತಿ ಕುಂದಾನಗರಿ ಬೆಳಗಾವಿಗೂ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರೊಂದಿಗೆ ಮರೆಯಲಾಗದ ನಂಟೂ ಇದೆ. ಹೌದು, ೧೯೨೪ರಲ್ಲಿ ೩೯ನೇ ಕಾಂಗ್ರೆಸ್ ಅಧಿವೇಶನ ನಡೆದದ್ದು ಇದೇ ಬೆಳಗಾವಿ ಭೂಮಿಯಲ್ಲಿ. ಇನ್ನು ಈ ಕಾಂಗ್ರೆಸ್ ಅಧಿವೇಶನದಲ್ಲಿ ಸ್ವತಃ ಮಹಾತ್ಮಾ ಗಾಂಧೀಜಿಯವರೇ ಅಧ್ಯಕ್ಷತೆ ವಹಿಸಿದ್ದರು. ಇದರ ಹೊರತಾಗಿ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆಯಲೇ ಇಲ್ಲ. ಹಾಗಾಗಿ ಇತಿಹಾಸದ ಪುಟದಲ್ಲಿ ಬೆಳಗಾವಿಯಲ್ಲಿ ನಡೆದ ೩೯ನೇ ಕಾಂಗ್ರೆಸ್ ಅಧಿವೇಶನಕ್ಕೆ ವಿಶೇಷತೆ ಇದೆ. ಸದ್ಯ ಶತಮಾನೋತ್ಸವದ ಸಂಭ್ರಮದಲ್ಲಿದೆ.
ಅಧಿವೇಶನದ ಸಂದರ್ಭದಲ್ಲಿ ನಿರ್ಮಿಸಲಾಗಿದ್ದ ಬಾವಿಯೊಂದು ಬೆಳಗಾವಿಯಲ್ಲಿದ್ದು, ಅಂದಿನಿಂದ ಇಂದಿಗೂ ಈ ಬಾವಿಯನ್ನು ಕಾಂಗ್ರೆಸ್ ಬಾವಿ ಎಂದೇ ಕರೆಯಲಾಗುತ್ತಿದೆ. ೧೯೨೪ರ ಡಿಸೆಂಬರ್ ತಿಂಗಳ ೨೬ ಮತ್ತು ೨೭ರಲ್ಲಿ ಬೆಳಗಾವಿಯಲ್ಲಿ ಐತಿಹಾಸಿಕ ಕಾಂಗ್ರೆಸ್ ಅಧಿವೇಶನ ನಡೆದಿತ್ತು. ಈ ಅಧಿವೇಶನ ಯಶಸ್ವಿಗೊಳಿಸಲು ಕರ್ನಾಟಕದ ಕೇಸರಿ ಗಂಗಾಧರರಾವ್ ದೇಶಪಾಂಡೆ, ಗೋವಿಂದರಾವ್ ಯಾಳಗಿ, ಅಣ್ಣು ಗುರೂಜಿ ಸೇರಿ ಮೊದಲಾದವರು ಜವಾಬ್ದಾರಿ ತೆಗೆದುಕೊಂಡಿದ್ದರು. ೩೦ ಸಾವಿರಕ್ಕೂ ಹೆಚ್ಚು ಜನ ಬೆಳಗಾವಿಗೆ ಬಂದು ಸೇರುವ ಹಿನ್ನೆಲೆಯಲ್ಲಿ ಸುಸಜ್ಜಿತವಾದ ವೇದಿಕೆ, ಗಣ್ಯರಿಗೆ ವಸತಿ, ತಾತ್ಕಾಲಿಕ ರೈಲು ನಿಲ್ದಾಣ ಸೇರಿ ಎಲ್ಲ ಸಿದ್ಧತೆಗೂ ಇವರೆಲ್ಲಾ ತಯಾರಿ ಮಾಡಿಕೊಂಡಿದ್ದರು. ಅಧಿವೇಶನ ನಡೆದ ಟಿಳಕವಾಡಿಯಲ್ಲಿ ಒಂದು ಸ್ಥಳ ಗುರುತಿಸಿ ಅದಕ್ಕೆ “ವಿಜಯನಗರ” ಎಂದು ನಾಮಕರಣ ಮಾಡಲಾಗಿತ್ತು. ಬಂದವರಿಗೆಲ್ಲಾ ನೀರಿನ ಸೌಕರ್ಯಕ್ಕಾಗಿ ಒಂದು ಬಾವಿಯನ್ನು ತೋಡಲಾಯಿತು.
ಇನ್ನು ಈ ಬಾವಿಯನ್ನು ಅರ್ಧ ಅಗೆದಾಗ ನಾರಾಯಣ ಹರಪನಹಳ್ಳಿ ಎಂಬ ೯ ವರ್ಷದ ಬಾಲಕ ಆಟ ಆಡುತ್ತಾ ಬಿದ್ದು ಸಾವನ್ನಪ್ಪಿದ್ದ. ಆ ಸಂದರ್ಭದಲ್ಲಿ ಸ್ಥಳೀಯರು ಬಾವಿಯನ್ನು ಅರ್ಧಕ್ಕೆ ಕೈ ಬಿಡುವುದು ಒಳಿತು, ಇದು ಅಪಶಕುನ ಅಂತೆಲ್ಲಾ ಮಾತಾಡಿದ್ದರು. ಆದರೆ, ಅರ್ಧ ಆಗಿದ್ದು, ಮತ್ತೆ ಹೊಸ ಬಾವಿ ತೋಡಲು ಖರ್ಚಾಗುತ್ತದೆ ಎಂದು ಜನಮನವೊಲಿಸಿ ಮೂಢನಂಬಿಕೆಗಳನ್ನು ಬದಿಗಿಟ್ಟು ಗಂಗಾಧರರಾವ್ ದೇಶಪಾಂಡೆಯವರು ಮತ್ತೆ ಬಾವಿ ತೋಡುವ ಕೆಲಸ ಶುರು ಮಾಡಿಸಿದ್ದರು. ಅಷ್ಟರಲ್ಲಿಯೇ ತಮ್ಮ ಈಜುಕೊಳಕ್ಕೆ ನೀರು ಕಡಿಮೆ ಆಗುತ್ತದೆಂದು ಬ್ರಿಟಿಷ್ ರೆಜಿಮೆಂಟ್ ಬಾವಿ ತೋಡಲು ತಗಾದೆ ತೆಗೆಯಿತು. ಆಗ ಅಧಿವೇಶನ ಮುಗಿದ ಬಳಿಕ ಬಾವಿ ಮುಚ್ಚುತ್ತೇವೆ ಎಂದು ಮುಚ್ಚಳಿಕೆ ಬರೆದು ಕೊಟ್ಟಿದ್ದರಿಂದ ಬ್ರಿಟಿಷ್ ಅಧಿಕಾರಿಗಳು ಬಾವಿ ತೋಡಲು ಅನುಮತಿ ನೀಡಿದ್ದರಂತೆ. ಆದರೆ ಕಾಮಗಾರಿ ಪೂರ್ಣಗೊಂಡ ನಂತರ ಬಾವಿಯ ನೀರನ್ನು ಬಹಳ ಜನರು ಬಳಸುತ್ತಿದ್ದರಿಂದ ಬಾವಿಯನ್ನು ಮುಚ್ಚಲಿಲ್ಲ ಎಂದು ಹೇಳಲಾಗುತ್ತಿದೆ.
ಈ ಬಾವಿಯ ಪ್ರವೇಶ ದ್ವಾರದ ಮೇಲಿನ ಗೋಪುರದ ಮೇಲೆ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ “ಪಂಪಾ ಸರೋವರ” ಎಂದು ಬರೆಯಲಾಗಿತ್ತು. ಈ ಬಾವಿ ನಿರ್ಮಾಣಕ್ಕೆ ಸುಮಾರು ೪ ತಿಂಗಳು ಸಮಯ ತೆಗೆದುಕೊಳ್ಳಲಾಗಿತ್ತು. ೫೦ ಅಡಿ ಉದ್ದ, ೪೦ ಅಡಿ ಅಗಲ, ೬೦ ಅಡಿ ಆಳದ ಬಾವಿಗೆ ೪೩೭೦ ರೂ. ೩ ಆಣೆ ಖರ್ಚಾಗಿತ್ತು. ಕರಿ ಕಲ್ಲಿನಿಂದ ಕಟ್ಟಿರುವ ಈ ಬಾವಿಯಲ್ಲಿ ಮೇಲಿನಿಂದ ಕೆಳಗಿನವರೆಗೂ ಮೆಟ್ಟಿಲು ಇದ್ದವು. ಮೆಟ್ಟಿಲುಗಳ ಒಂದು ಬದಿಗೆ ಕಟ್ಟೆ ಕೂಡ ಇತ್ತು. ನೀರು ತುಂಬಿಕೊಳ್ಳಲು ೧೦ ಗಡಗಡಿಗಳು, ೧೦ ಕಮಾನುಗಳು ಇದ್ದವು. ಇನ್ನು ನೀರಿನ ಮಟ್ಟ ಗೊತ್ತಾಗಲು ಬಾವಿಯ ಸುತ್ತಲೂ ಕಲ್ಲಿನಿಂದ ಮಾಪನ ಅಳವಡಿಸಲಾಗಿದೆ. ಕಾಂಗ್ರೆಸ್ ಅಧಿವೇಶನಕ್ಕೆ ಆಗಮಿಸಿದ ಗಾಂಧೀಜಿ ಮಾತ್ರವಲ್ಲದೆ ಪಂಡಿತ ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಬಾಯಿ ಪಟೇಲ್ ಸೇರಿದಂತೆ ಗಣ್ಯರೆಲ್ಲರೂ ಇದೇ ಬಾವಿಯ ನೀರನ್ನು ಕುಡಿಯಲು ಬಳಸಿದ್ದರು.
ಕಾಂಗ್ರೆಸ್ ಅಧಿವೇಶನ ನಡೆದ ಧ್ಯೋತಕವಾಗಿ ಇಲ್ಲಿ ವೀರಸೌಧ ನಿರ್ಮಿಸಲಾಗಿದೆ. ೨೦೦೨ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಉದ್ಘಾಟಿಸಿದ್ದರು. ವೀರಸೌಧದಲ್ಲಿ ಮಹಾತ್ಮಾ ಗಾಂಧೀಜಿ ಸುಂದರ ಪುತ್ಥಳಿ ಗಮನ ಸೆಳೆಯುತ್ತಿದ್ದು, ಶಾಂತಿಯ ಸಂದೇಶ ಸಾರುತ್ತದೆ. ಉದ್ಯಾನವನದಂತೆ ಕಂಗೋಳಿಸುವ ವೀರಸೌಧದ ಹಿಂಭಾಗದಲ್ಲಿ ಅತಿರಥ, ಮಹಾರಥ ಸ್ವಾತಂತ್ರ್ಯ ಹೋರಾಟಗಾರರ ಉಬ್ಬು ಚಿತ್ರಗಳು, ಅಧಿವೇಶನದ ಛಾಯಾಚಿತ್ರಗಳು, ಗಾಂಧೀಜಿ ಬಾಲ್ಯ, ಹೋರಾಟ ಸೇರಿ ಪ್ರಮುಖ ಸಂದರ್ಭದ ಭಾವಚಿತ್ರಗಳು ಗಮನ ಸೆಳೆಯುತ್ತಿವೆ. ಅಹಿಂಸಾವಾದದಿಂದಲೇ ಆಂಗ್ಲರ ವಿರುದ್ಧ ಹೋರಾಡಿದ ಗಾಧೀಜಿಯವರು ಇಂದಿನ ಯುವಜನಕ್ಕೆ ಮಾದರಿ, ಸ್ಫೂರ್ತಿಯಾಗಿದ್ದಾರೆ.